Vaccination Drive ದೇಶದ ಶೇ.80 ಮಂದಿಗೆ ಲಸಿಕೆಯ ಎರಡೂ ಡೋಸ್‌!

By Kannadaprabha NewsFirst Published Feb 20, 2022, 4:31 AM IST
Highlights
  • ಲಸಿಕೆ ಅಭಿಯಾನದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು
  • ಶೀಘ್ರ ಶೇ.100 ಮಂದಿಗೆ ಕೋವಿಡ್‌ ರಕ್ಷಣಾ ಕವಚ: ಮಾಂಡವೀಯ
  • ಕರ್ನಾಟಕದಲ್ಲಿ ನಿನ್ನೆ 1137 ಕೇಸು, 20 ಜನರ ಸಾವು

ನವದೆಹಲಿ(ಫೆ.20): ಮಹಾಮಾರಿ ಕೊರೋನಾದಿಂದ(Coronavirus) ಜನತೆ ರಕ್ಷಣೆ ನಿಟ್ಟಿನಲ್ಲಿ ಆರಂಭಿಸಲಾದ ಲಸಿಕೆ ಅಭಿಯಾನದಲ್ಲಿ(vaccination drive) ಈವರೆಗೆ ದೇಶದ ಶೇ.80ರಷ್ಟುಮಂದಿಗೆ ಲಸಿಕೆಯ ಎರಡೂ ಡೋಸ್‌(2nd Dose) ನೀಡಲಾಗಿದೆ ಕೇಂದ್ರ ಸರ್ಕಾರ ತಿಳಿಸಿದೆ.ಕೋವಿನ್‌ ವೆಬ್‌ಸೈಟ್‌ನಲ್ಲಿರುವ ಅಂಕಿ ಅಂಶದ ಪ್ರಕಾರ, 94 ಕೋಟಿ ಅರ್ಹ ವಯಸ್ಕ ನಾಗರಿಕರಲ್ಲಿ ಈವರೆಗೆ 77 ಕೋಟಿ ಜನರು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಇದರಿಂದಾಗಿ ಶೇ.80ರಷ್ಟುಸಾಧನೆ ಮಾಡಿದಂತಾಗಿದೆ.

ಈ ಬಗ್ಗೆ ಶನಿವಾರ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ(mansukh mandaviya) ಅವರು, ‘ದೇಶದಲ್ಲಿ ಈವರೆಗೆ ಲಸಿಕೆಯ 175 ಕೋಟಿಗಿಂತ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಅಲ್ಲದೆ ದೇಶದ ಶೇ.80ರಷ್ಟುಮಂದಿಗೆ ಲಸಿಕೆಯ ಪೂರ್ತಿ ರಕ್ಷಾ ಕವಚ(ಎರಡೂ ಡೋಸ್‌) ನೀಡುವ ಮೂಲಕ ಭಾರತವು ಐತಿಹಾಸಿಕ ಮೈಲುಗಲ್ಲು ತಲುಪಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.‘ಮೋದಿ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ವೇಗವಾಗಿ ಶೇ.100ರಷ್ಟುಲಸಿಕೆ ಡೋಸ್‌ ಗುರಿಯತ್ತ ದಾಪುಗಾಲು ಹಾಕಿದೆ’ ಎಂದೂ ಹೇಳಿದ್ದಾರೆ.

Vaccine Politics: ಬಿಜೆಪಿ, ಕಾಂಗ್ರೆಸ್‌ ಕೊರೋನಾ ಲಸಿಕೆ ಜಟಾಪಟಿ

ಇದೇ ವೇಳೆ ದೇಶದ 15-18 ವರ್ಷದೊಳಗಿನ 2 ಕೋಟಿಗಿಂತ ಹೆಚ್ಚು ಮಕ್ಕಳಿಗೆ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದೆ.

22270 ಕೋವಿಡ್‌ ಕೇಸು: ಈ ವರ್ಷದಲ್ಲೇ ಕನಿಷ್ಠ
ನವದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆಯ ಹಾದಿಯಲ್ಲಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ 22,270 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದು ಈ ವರ್ಷದ ಅತಿ ಕನಿಷ್ಠ ಸಂಖ್ಯೆಯಾಗಿದೆ.

ಶುಕ್ರವಾರಕ್ಕೆ ಹೋಲಿಸಿದರೆ ದೈನಂದಿನ ಪ್ರಕರರಣಗಳಲ್ಲಿ ಶೇ.14.1ರಷ್ಟುಪ್ರಕರಣಗಳು ಕಡಿಮೆಯಾಗಿದೆ. ಇದೇ ಅವಧಿಯಲ್ಲಿ 325 ಸೋಂಕಿತರು ಸಾವಿಗೀಡಾಗಿದ್ದಾರೆ. ಇನ್ನೂ ಸಕ್ರಿಯ ಸೋಂಕು 2.53 ಲಕ್ಷಕ್ಕೆ ಇಳಿಕೆಯಾಗಿದೆ. ಇದು ಒಟ್ಟು ಪ್ರಕರಣಕ್ಕೆ ಹೋಲಿಸಿದರೆ ಶೇ.0.59ರಷ್ಟಿದೆ. ಗುಣಮುಖ ದರ ಶೇ.98.21ಕ್ಕೆ ಏರಿದೆ.

Corbevax Vaccine: 12-18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಲಸಿಕೆ: ಅನುಮತಿ ಕೋರಿಕೆ

ದೈನಂದಿನ ಪಾಸಿಟಿವಿಟಿ ದರದಲ್ಲೂ ಇಳಿಕೆ ಕಂಡುಬಂದಿದ್ದು, ಶೇ.1.8ರಷ್ಟು ದಾಖಲಾಗಿದೆ, ವಾರದ ಪಾಸಿಟಿವಿಟಿ ದರ ಶೇ.2.5ರಷ್ಟಿದೆ. ಇನ್ನು ದೇಶದಲ್ಲಿ ಒಟ್ಟು ಸೋಂಕು 4.28 ಕೋಟಿಗೆ ಮತ್ತು ಒಟ್ಟು ಸಾವು 5.11 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 175.03 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ.

ನಿನ್ನೆ 1137 ಕೇಸು, 20 ಜನರ ಸಾವು
ರಾಜ್ಯದಲ್ಲಿ ದಿನಕಳೆದಂತೆ ಕೊರೋನಾ ಸೋಂಕು ಪ್ರಮಾಣ ಕಡಿಮೆಯಾಗುತ್ತಿದ್ದು, ಶನಿವಾರ 1,137 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ, 20 ಮಂದಿ ಮರಣವನ್ನಪ್ಪಿದ್ದಾರೆ. 3,870 ಮಂದಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 13,431ಕ್ಕೆ ಇಳಿದಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.35 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 38.82 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,777 ಮಂದಿ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 79,312 ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ.1.43 ಪಾಸಿಟಿವಿಟಿ ದಾಖಲಾಗಿದೆ.

ಬೆಂಗಳೂರು ನಗರದಲ್ಲಿ 646 ಪ್ರಕರಣ ಪತ್ತೆಯಾಗಿದೆ.ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೀದರ್‌, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ಉತ್ತರಕನ್ನಡ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣ ಪತ್ತೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಎರಡಂಕಿಯಲ್ಲಿ ಪ್ರಕರಣ ವರದಿಯಾಗಿದೆ.

ಬೆಂಗಳೂರು ನಗರದಲ್ಲಿ 8, ಧಾರವಾಡ, ದಕ್ಷಿಣ ಕನ್ನಡ ತಲಾ 2, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಮೈಸೂರು, ತುಮಕೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ:
ರಾಜ್ಯದಲ್ಲಿ 1.07 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 8,635 ಮಂದಿ ಮೊದಲ, 88,810 ಮಂದಿ ಎರಡನೇ ಮತ್ತು 10,345 ಮಂದಿ ಮೂರನೇ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 9.95 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

click me!