ತ್ರಿವಳಿಗೆ ಜನ್ಮ ನೀಡಿದ 5 ವರ್ಷದ ನಂತರ 4 ಮಕ್ಕಳಿಗೆ ಒಮ್ಮೆಗೆ ಜನ್ಮ ನೀಡಿದ ಗಾರೆ ಕೆಲಸ ಮಾಡ್ತಿದ್ದ ತಾಯಿ

Published : Sep 17, 2025, 12:53 PM IST
woman gives Birth to Quadruplet in Satara Maharashtra

ಸಾರಾಂಶ

Quadruplet Birth in Maharashtra: ಸತಾರಾದಲ್ಲಿ, ಐದು ವರ್ಷಗಳ ಹಿಂದೆ ತ್ರಿವಳಿಗಳಿಗೆ ಜನ್ಮ ನೀಡಿದ್ದ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇದೀಗ ಮತ್ತೆ ನಾಲ್ಕು ಮಕ್ಕಳಿಗೆ (ಮೂವರು ಹೆಣ್ಣು, ಒಂದು ಗಂಡು) ಜನ್ಮ ನೀಡಿದ್ದಾರೆ. 

ನಾಲ್ಕು ಮಕ್ಕಳಿಗೆ ಒಮ್ಮೆಗೆ ಜನ್ಮ ನೀಡಿದ ಮಹಾತಾಯಿ

ಪುಣೆ: ಅವಳಿಗಳು ಜನಿಸುವುದೇ ಬಹಳ ಅಪರೂಪ, ತ್ರಿವಳಿ ಮಕ್ಕಳು ಇನ್ನೂ ಅಪರೂಪ ಹಾಗೂ ವಿರಳ ಆದರೆ ನಾಲ್ಕು ಮಕ್ಕಳು ಒಟ್ಟಿಗೆ ಹುಟ್ಟು ಜನಿಸುವುದು ಅಪರೂಪದಲ್ಲಿ ಅಪರೂಪ ವಿರಳಾತಿ ವಿರಳವಾಗಿದೆ. ಆದರೆ ಇಲ್ಲೊಬ್ಬರು ತಾಯಿ ತ್ರಿವಳಿಗಳಿಗೆ ಜನ್ಮ ನೀಡಿದ ಐದು ವರ್ಷಗಳ ನಂತರ ಮತ್ತೆ ನಾಲ್ಕು ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಆಸ್ಪತ್ರೆಯಲ್ಲಿ ಈ ಅತ್ಯಂತ ಅಪರೂಪದ ಘಟನೆ ನಡೆದಿದೆ. 38 ವಾರಗಳು ತುಂಬುವ ಮೊದಲೇ 33ನೇ ವಾರದಲ್ಲೇ ಸಿ-ಸೆಕ್ಷನ್ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ 27 ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ನಾಲ್ಕು ಮಕ್ಕಳನ್ನು ಹೊರತೆಗೆಯಲಾಯ್ತು.

ಸಿ ಸೆಕ್ಷನ್ ಮೂಲಕ ಮೂವರು ಹೆಣ್ಣು ಒಂದು ಗಂಡು ಮಗುವಿಗೆ ಜನನ

ಸತಾರಾದ ಕ್ರಾಂತಿಸಿನ್ಹಾ ನಾನಾ ಪಾಟೀಲ್ ಸರ್ಕಾರಿ ಆಸ್ಪತ್ರೆ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ನಾಲ್ವರು ಮಕ್ಕಳಲ್ಲಿ ಮೂವರು ಹೆಣ್ಣು ಹಾಗೂ ಒಂದು ಗಂಡು. ಎಲ್ಲಾ ನವಜಾತ ಶಿಶುಗಳು 1.3 ಕೇಜಿಯಿಂದ 1.4 ಕೇಜಿ ತೂಕ ಹೊಂದಿದ್ದವು. ಸಾಮಾನ್ಯವಾಗಿ ಮಕ್ಕಳು ಜನಿಸಿದ ವೇಳೆ 2.5ಕೇಜಿಯಿಂದ 3.5 ಕೇಜಿ ತೂಗುತ್ತವೆ. ಆದರೆ ಇವು 4 ಕಂದಮ್ಮಗಳಿದ್ದಿದ್ದರಿಂದ ಇವರ ತೂಕ ಸಾಮಾನ್ಯ ಶಿಶುಗಳ ತೂಕಕ್ಕಿಂತ ತೀರಾ ಕಡಿಮೆ ಇದೆ. ಈ ಮಕ್ಕಳನ್ನು ಇನ್‌ಕ್ಯುಬೇಟರ್‌ನಲ್ಲಿ ಇಟ್ಟು ಆರೈಕೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ನಾಲ್ವರು ಮಕ್ಕಳಿರುವ ಅರಿವಿರದ ಕಾಜಲ್ ಮೊದಲ ಹೆರಿಗೆಯಲ್ಲಿ ತ್ರಿವಳಿಗೆ ಜನ್ಮ ನೀಡಿದ್ದರು.

ತಾಯಿಗೆ ಗರ್ಭಾವಸ್ಥೆಯ 38 ವಾರಗಳು ತುಂಬಿದರೆ ಅದನ್ನು ಪೂರ್ಣ ಗರ್ಭಧಾರಣೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲಿ ತಾಯಿಗೆ ಹೆರಿಗೆ ನೋವು ಬರುವವರೆಗೆ 4 ಮಕ್ಕಳಿದ್ದಾರೆ ಎಂಬುದು ತಿಳಿದಿರಲಿಲ್ಲ, ದಾದಿಯರ ತಂಡವೂ ಮಕ್ಕಳ ಆರೈಕೆ ಮಾಡುತ್ತಿದ್ದು, ಅವರ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಂದಮ್ಮಗಳ ಆರೋಗ್ಯ ಸುರಕ್ಷಿತವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಗಾರೆ ಕೆಲಸ ಮಾಡುತ್ತಿದ್ದ ಕಾಜಲ್ ವಿಕಾಸ್ ದಂಪತಿ

ಗುಜರಾತ್ ಮೂಲದ ಕಾಜಲ್ ವಿಕಾಸ್ ಖಕಾರ್ಡಿಯಾ ಎಂಬುವವರೇ ಹೀಗೆ ನಾಲ್ವರು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ. ವಿಶೇಷ ಎಂದರೆ ಕಳೆದ 5 ವರ್ಷಗಳ ಹಿಂದೆ ಅವರು ತ್ರಿವಳಿಗಳಿಗೆ ಜನ್ಮ ನೀಡಿದ್ದರು. ಆ ಹೆರಿಗೆಯಲ್ಲಿ ಒಂದು ಗಂಡು ಎರಡು ಹೆಣ್ಣು ಮಕ್ಕಳು ಜನಿಸಿದರು. ಪ್ರಸ್ತುತ ಕಾಜಲ್ ಹಾಗೂ ಅವರ ಪತಿ ವಿಕಾಸ್ ಪುಣೆ ಜಿಲ್ಲೆಯ ಸಾಸ್ವಾಡ್‌ನಲ್ಲಿ ವಾಸ ಮಾಡುತ್ತಿದ್ದು, ಅವರಿಬ್ಬರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗುಜರಾತ್ ಮೂಲದವರಾದರು ಇವರು ಹಲವು ವರ್ಷಗಳಿಂದ ಮಹಾರಾಷ್ಟ್ರಾದ ಪುಣೆಯಲ್ಲಿ ವಾಸಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ವೈದ್ಯರ ಪ್ರಕಾರ ಕಾಜಲ್ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಕೋರೆಗಾಂವ್‌ಗೆ ಪ್ರಯಾಣ ಮಾಡುತ್ತಿದ್ದಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಸ್ಥಳೀಯ ವೈದ್ಯರು ಸ್ಕ್ಯಾನ್ ಮಾಡಿದಾಗ ಆಕೆಯ ಗರ್ಭದಲ್ಲಿ ಹಲವು ಮಕ್ಕಳು ಇರುವುದು ಕಂಡುಬಂತು. ಆದರೆ ಕಾಜಲ್‌ಗೆ ಅದು ತಿಳಿದಿರಲಿಲ್ಲವಂತೆ. ನಂತರ ವೈದ್ಯರು ತಕ್ಷಣ ಆಕೆಯನ್ನು ಸತಾರಾದ ಕ್ರಾಂತಿಸಿಂಹ ನಾನಾ ಪಾಟೀಲ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ನಂತರ ಶುಕ್ರವಾರ ಬೆಳಗ್ಗೆ ಅವರನ್ನು ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಯಿತು. ಸಂಪೂರ್ಣ ಕ್ಲಿನಿಕಲ್ ಪರೀಕ್ಷೆಯ ನಂತರ, ಅಂತಹ ಗರ್ಭಧಾರಣೆ ಮುಂದುವರಿಸುವುದರಿಂದ ಹೆಚ್ಚಿನ ಅಪಾಯವಿರುವುದರಿಂದ ವೈದ್ಯರು ಸಿ-ಸೆಕ್ಷನ್ ಮೂಲಕ ನಾಲ್ಕು ಮಕ್ಕಳನ್ನು ಹೊರತೆಗೆದಿದ್ದಾರೆ.

ಕಾಜಲ್ ಗರ್ಭಧಾರಣೆಯ 33 ನೇ ವಾರದಲ್ಲಿದ್ದಳು. ಒಮ್ಮಗೆ ನಾಲ್ಕು ಮಕ್ಕಳ ಜನನ ಅತ್ಯಂತ ಅಪರೂಪ, ಪ್ರತಿ 5 ರಿಂದ 6 ಲಕ್ಷ ಪ್ರಕರಣಗಳಲ್ಲಿ ಒಂದರಲ್ಲಿ ಮಾತ್ರ ಇದು ಸಂಭವಿಸುತ್ತದೆ. ಅವರು ಈ ಹಿಂದೆ ತ್ರಿವಳಿ ಮಕ್ಕಳಿಗೆ (ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳು) ಜನ್ಮ ನೀಡಿದ್ದರು. ಈ ರೀತಿಯ ಗರ್ಭಧಾರಣೆಗಳು ಶಿಶುಗಳಲ್ಲಿ ರಕ್ತಹೀನತೆ ಮತ್ತು ತಾಯಿಯು ಅಧಿಕ ರಕ್ತದೊತ್ತಡವನ್ನು ಎದುರಿಸುವ ಸಾಧ್ಯತೆ ಸೇರಿದಂತೆ ಗಮನಾರ್ಹ ಅಪಾಯಗಳನ್ನು ಹೊಂದಿವೆ ಎಂದು ಸತಾರಾದ ಸಿವಿಲ್ ಸರ್ಜನ್ ಡಾ. ಯುವರಾಜ್ ಕಾರ್ಪೆ ಅಂಗ್ಲ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಐವಿಎಫ್ ವಿಧಾನ ಅಥವಾ ಟೆಸ್ಟ್ ಟ್ಯೂಬ್ ಶಿಶುಗಳಲ್ಲಿ ಬಹು ಶಿಶುಗಳ ಗರ್ಭಧಾರಣೆಗಳು ನೈಸರ್ಗಿಕ ಘಟನೆ, ಗರ್ಭಧಾರಣೆಯ 12 ವಾರಗಳ ಮೊದಲು ಸೋನೋಗ್ರಫಿ ಬಹಳ ಮುಖ್ಯ. ಸರಿಯಾದ ಸ್ಕ್ಯಾನಿಂಗ್ ಗರ್ಭಧರಿಸಿದ ಶಿಶುಗಳ ಸಂಖ್ಯೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ಡಾ. ಕಾರ್ಪೆ ಹೇಳಿದರು. ಹೆರಿಗೆ ಮಾಡಲು ವೈದ್ಯರು ಕೇಳಿದ್ದ ಫಾರ್ಮ್‌ಗೆ ಸಹಿ ಹಾಕಲು ನಾನು ಸಾಸ್ವಾದ್‌ನಿಂದ ಸತಾರಾಗೆ ಧಾವಿಸಿ ಬಂದೆ. ಎಲ್ಲವೂ ಸರಿಯಾಗಿ ಆದರೆ ಸಾಕು ಎಂದು ನಾನು ಆಶಿಸುತ್ತಿದ್ದೆ. ಆಸ್ಪತ್ರೆಯ ವೈದ್ಯರು ತುಂಬಾ ಕಾಳಜಿಯುಳ್ಳವರು. ಇತರ ಸಿಬ್ಬಂದಿ ಕೂಡ ನಮ್ಮ ಮಕ್ಕಳು ಮತ್ತು ನನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಮಕ್ಕಳ ತಂದೆ ವಿಕಾಸ್ ಹೇಳಿದ್ದಾರೆ.

ಇದನ್ನೂ ಓದಿ: ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್: ಸತತ ಏರಿಕೆಯ ನಂತರ ಇಳಿಕೆ ಕಂಡ ಬಂಗಾರದ ದರ

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅನೈತಿಕತೆ ತಡೆಯಲು ವೈ-ಫೈ ಸೇವೆಯನ್ನೇ ಬಂದ್ ಮಾಡಿದ ತಾಲಿಬಾನ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?