National Herald Case: ಸೋನಿಯಾ ವಿಚಾರಣೆ ಖಂಡಿಸಿ ಬೀದಿಗಿಳಿದ ಕಾಂಗ್ರೆಸ್‌

By Govindaraj S  |  First Published Jul 28, 2022, 3:00 AM IST

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಕೂಡಾ ದೇಶವ್ಯಾಪಿ ಪ್ರತಿಭಟನೆ ನಡೆಸಿದರು. ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರು ದೆಹಲಿಯ ವಿಜಯ್‌ ಚೌಕದ ಬಳಿ ಪ್ರತಿಭಟನೆ ನಡೆಸಿದ್ದಾರೆ. 


ನವದೆಹಲಿ (ಜು.28): ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಕೂಡಾ ದೇಶವ್ಯಾಪಿ ಪ್ರತಿಭಟನೆ ನಡೆಸಿದರು. ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರು ದೆಹಲಿಯ ವಿಜಯ್‌ ಚೌಕದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಧೀರ್‌ ರಂಜನ್‌ ಚೌಧರಿ, ಜಯರಾಮ್‌ ರಮೇಶ್‌ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸತ್ತು ಭವನದಿಂದ ವಿಜಯ್‌ ಚೌಕದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನಾಯಕರು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. 

ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಅಲ್ಲದೇ ಕೇಂದ್ರ ವಿಪಕ್ಷ ಮುಕ್ತ ಭಾರತ ನಿರ್ಮಿಸಲು ಬಯಸಿದೆ ಎಂದು ಕಾಂಗ್ರೆಸ್‌ ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ನಾವು ಬೆಲೆ ಏರಿಕೆ, ಜಿಎಸ್‌ಟಿ ಇವುಗಳ ಕುರಿತಾಗಿ ಹೋರಾಟ ಮಾಡುತ್ತಿದ್ದೇವೆ. ಇದರೊಂದಿಗೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧವೂ ಹೋರಾಟ ಮಾಡುತ್ತೇವೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದರೊಂದಿಗೆ ಎಐಸಿಸಿ ಪ್ರಧಾನ ಕಚೇರಿಯ ಬಳಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ಸಮಿತಿಯ ಸದಸ್ಯರನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Tap to resize

Latest Videos

ಸೋನಿಯಾ ವಿಚಾರಣೆಗೆ ಕಾಂಗ್ರೆಸಿಗರು ಕೆಂಡ: ರಾಜಭವನ ಮುತ್ತಿಗೆ ಯತ್ನ

ವಿಚಾರಣೆಗೆ ಹಾಜರ್‌: ಸೋನಿಯಾ ಝಡ್‌ ಪ್ಲಸ್‌ ಭದ್ರತೆಯೊಂದಿಗೆ ಮುಂಜಾನೆ 11 ಗಂಟೆಗೆ ಇಡಿ ಕಚೇರಿಗೆ ಹಾಜರಾಗಿದ್ದರು. ಈ ವೇಳೆ ರಾಹುಲ್‌ ಹಾಗೂ ಪ್ರಿಯಾಂಕಾ ಗಾಂಧಿ ಕೂಡಾ ಜೊತೆಗಿದ್ದರು. ಸೋನಿಯಾ ಅವರನ್ನು ಇ.ಡಿ. ಕಚೇರಿಗೆ ಬಿಟ್ಟು ರಾಹುಲ್‌ ತೆರಳಿದರೆ, ಇ.ಡಿ.ಯ ಇನ್ನೊಂದು ಕೊಠಡಿಯಲ್ಲಿ ಪ್ರಿಯಾಂಕಾ, ತಾಯಿ ಸೋನಿಯಾಗೆ ಔಷಧಿ ಹಾಗೂ ಅಗತ್ಯ ವೈದ್ಯಕೀಯ ನೆರವು ಒದಗಿಸಲು ಜೊತೆಗಿದ್ದರು.

ಸೋನಿಯಾ ವಿಚಾರಣೆ ಮುಂಜಾನೆ 11.15ಕ್ಕೆ ಆರಂಭವಾಗಿತ್ತು. ಸುಮಾರು ಎರಡೂವರೆ ಗಂಟೆ ವಿಚಾರಣೆ ನಂತರ 2 ಗಂಟೆಗೆ ಸೋನಿಯಾ ಇಡಿ ಕಚೇರಿಯಿಂದ ಹೊರ ಬಂದಿದ್ದಾರೆ. ಊಟದ ವಿರಾಮದ ನಂತರ 3:30ಗೆ ಮತ್ತೆ ಹಾಜರಾದ ಸೋನಿಯಾ ಹೇಳಿಕೆಯನ್ನು ರೆಕಾರ್ಡ್‌ ಮಾಡಿದ ಬಳಿಕ ಸಾಯಂಕಾಲ 7 ಗಂಟೆಗೆ ಸೋನಿಯಾ ಇಡಿ ಕಚೇರಿಯಿಂದ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜು. 21ರಂದು ಸೋನಿಯಾ ಮೊದಲ ಬಾರಿ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಆಗ ಸುಮಾರು 28 ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಅವರಿಗೆ ಕೇಳಿದ್ದರು.

National Herald Case: ಸೋನಿಯಾರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ, ಡಿಕೆಶಿ

ಇ.ಡಿ.ಯಿಂದ ಸೋನಿಯಾ ಗಾಂಧಿ ಅವರ ವಿಚಾರಣೆ ವಿರೋಧಿಸಿ ಕಾಂಗ್ರೆಸ್‌ ಪಕ್ಷವು ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿತ್ತು. ಬುಧವಾರವೂ ಸೋನಿಯಾ ವಿಚಾರಣೆ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ ನಡೆಸಲು ಪಕ್ಷ ಕರೆ ಕೊಟ್ಟಿದೆ. ಮತ್ತೊಂದೆಡೆ ನರೇಂದ್ರ ಮೋದಿ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳ ವ್ಯಾಪಕ ದುರ್ಬಳಕೆ ಮಾಡಿಕೊಂಡು ರಾಜಕೀಯ ವಿರೋಧಿಗಳ ವಿರುದ್ಧ ಬಳಸಿಕೊಳ್ಳುತ್ತಿದೆ. ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರತಿಪಕ್ಷ ನಾಯಕರು ಪತ್ರ ಬರೆದಿದ್ದಾರೆ.

click me!