ವಿಮಾನ ಹಾರಾಟದಲ್ಲಿನ ಸಮಸ್ಯೆ, ತುರ್ತು ಭೂಸ್ವರ್ಶ ಘಟನೆಗಳು ಹೆಚ್ಚಾದ ಕಾರಣ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಗೆ ಸರ್ಕಾರ ಖಡಕ್ ನೋಟಿಸ್ ನೀಡಿದೆ. ಶೇಕಡಾ 50 ರಷ್ಟು ವಿಮಾನ ಮಾತ್ರ ವಿಮಾನ ಹಾರಾಟಕ್ಕೆ ಸೂಚಿಸಿದೆ
ನವದೆಹಲಿ(ಜು.27): ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ತುರ್ತು ಭೂಸ್ಪರ್ಶ ಘಟನೆಗಳು ಹೆಚ್ಚಾದ ಕಾರಣ ಸ್ಪೈಸ್‌ಜೆಟ್ ವಿಮಾಯಾನ ಸಂಸ್ಥೆಗೆ ಕೇಂದ್ರದ ನಾಗರಿಕ ವಿಮಾನಯಾನ ಮಹಾನಿರ್ದೇಶಕ ಇಲಾಖೆ ಖಡಕ್ ಶಾಕ್ ನೀಡಿದೆ. ಪ್ರಯಾಣಿಕರ ಸುರಕ್ಷತೆಯ ಪ್ರಶ್ನೆ ಎದುರಾಗಿರುವ ಕಾರಣ ಮುಂದಿನ 8 ವಾರಗಳ ಕಾಲ ಶೇಕಡಾ 50 ರಷ್ಟು ವಿಮಾನಗಳು ಮಾತ್ರ ಕಾರ್ಯನಿರ್ವಹಿಸಬೇಕು ಎಂದು ಡಿಡಿಸಿಎ ಆದೇಶಿಸಿದೆ. ಆದರೆ ಈ ನಿರ್ಧಾರದಿಂದ ಸ್ಪೈಸ್‌ಜೆಟ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಪ್ರಯಾಣಿಕರ ಯಾವುದೇ ಟಿಕೆಟ್ ರದ್ದಾಗುವುದಿಲ್ಲ ಎಂದು ಸ್ಪೈಸ್‌ಜೆಟ್ ಸಂಸ್ಥೆ ಸ್ಪಷ್ಟಪಡಿಸಿದೆ. ಸುರಕ್ಷತೆ ವಿಚಾರದಲ್ಲಿ ಕೇಂದ್ರ ರಾಜಿಯಾಗುವುದಿಲ್ಲ. ಹೀಗಾಗಿ ಸುರಕ್ಷತೆ, ತಾಂತ್ರಿಕ ಸಮಸ್ಯೆಗಳು ಸೇರಿದಂತೆ ಎಲ್ಲವನ್ನು ಪರೀಶಿಲಿಸಿ ಖಾತ್ರಿಪಡಿಸಬೇಕು ಎಂದು ಎಚ್ಚರಿಕೆ ನೀಡಿದೆ.
ಮುಂದಿನ 8 ವಾರಗಳ ಕಾಲ ಶೇಕಡಾ 50 ರಷ್ಟು ವಿಮಾನಗಳು ಮಾತ್ರ ಸಂಚಾರ ನಡೆಸಬೇಕು. ಹಾರಾಟ ನಡೆಸುವ ಶೇಕಡಾ 50 ರಷ್ಟು ವಿಮಾನಗಳು ವಿಮಾನಯಾನ ಮಹಾನಿರ್ದೇಶಕ ಇಲಾಖೆ ಕಣ್ಗಾವಲಿನಲ್ಲಿ ಇರಲಿದೆ. ಈ ವೇಳೆ ಪ್ರಯಾಣಿಕರ ಸುರಕ್ಷತೆ, ವಿಮಾನದ ಸಮಸ್ಯೆಗಳು ಪ್ರಶ್ನೆ ಉದ್ಭವಿಸಿದಲ್ಲಿ ಸ್ಪೈಸ್‌ಜೆಟ್ ವಿಮಾನ ಸಂಚಾರ ಮತ್ತೆ ಕಡಿತಗೊಳ್ಳಲಿದೆ. ಇಷ್ಟೇ ಅಲ್ಲ ಇತರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
18 ದಿನದಲ್ಲಿ 8 ತಾಂತ್ರಿಕ ದೋಷ, SpiceJetಗೆ ಕೇಂದ್ರದ ತರಾಟೆ
ಪಾಕಿಸ್ತಾನದಲ್ಲಿ ಇಳಿದಿದ್ದ ಸ್ಪೈಸ್‌ಜೆಟ್ ವಿಮಾನ
ಸ್ಪೈಸ್ ಜೆಟ್‌ನ ದಿಲ್ಲಿ-ದುಬೈ ವಿಮಾನದ ಇಂಧನ ಇಂಡಿಕೇಟರ್‌ನಲ್ಲಿ ದೋಷ ಕಂಡುಬಂದ ಕಾರಣ ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲೇ ಭೂಸ್ಪರ್ಶ ಮಾಡಿದ ಘಟನೆ ವರದಿಯಾಗಿತ್ತು. ‘ಬೋಯಿಂಗ್ 737 ವಿಮಾನದ ಎಡಭಾಗದ ಟ್ಯಾಂಕಿನಿಂದ ಇಂಧನ ಸೋರಿಕೆಯಾಗಿರುವ ಶಂಕೆ ಇಂಧನ ಇಂಡಿಕೇಟರ್ ಮೂಲಕ ವ್ಯಕ್ತವಾಗಿದೆ. ವಿಮಾನ ಸಿಬ್ಬಂದಿ ಇದ್ದಕ್ಕಿದ್ದಂತೆ ಇಂಧನದ ಪ್ರಮಾಣದಲ್ಲಿ ಇಳಿಕೆಯಾಗುವುದನ್ನು ಗಮನಿಸಿದ್ದಾರೆ. ಕಾಕ್‌ಪಿಟ್‌ನ ಇಂಡಿಕೇಟರ್‌ನಲ್ಲಿ ಇಂಧನ ಇಳಿಕೆಯಾಗಿದ್ದು ಕಂಡುಬಂದಂತೆ, ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಕರಾಚಿಯಲ್ಲಿ ಭೂಸ್ಪರ್ಶ ಮಾಡಲಾಯಿತು. ಇದಕ್ಕೆ ಪಾಕಿಸ್ತಾನ ಅನುಮತಿಯನ್ನೂ ನೀಡಿತ್ತು. ಆದರೆ ಇದು ತುರ್ತು ಭೂಸ್ಪರ್ಶವಲ್ಲ’ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.
ಹಕ್ಕಿ ಡಿಕ್ಕಿ: ಪಟನಾ-ದಿಲ್ಲಿ ಸ್ಪೈಸ್‌ಜೆಟ್ ವಿಮಾನಕ್ಕೆ ಬೆಂಕಿ
ಪಟನಾದಿಂದ ದೆಹಲಿಗೆ ಹೊರಟ ಸ್ಪೈಸ್ ಜೆಟ್ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದ್ದ ಕಾರಣ ಬೆಂಕಿ ತಗುಲಿದ ಘಟನೆ ವರದಿಯಾಗಿತ್ತು. ಕೂಡಲೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದ ಕಾರಣ ಎಲ್ಲ 185 ಪ್ರಯಾಣಿಕರು ಸುರಕ್ಷಿತವಾಗಿದ್ದರು. ಪಟನಾದ ಜಯಪ್ರಕಾಶ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಮಾಡುವಾಗ ವಿಮಾನದ ಎಂಜಿನ್‌ಗೆ ಹಕ್ಕಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಮೂರು ಫ್ಯಾನ್ ಬ್ಲೇಡ್‌ಗಳಿಗೆ ಹಾನಿಯಾಗಿದ್ದು, ಈ ಕಾರಣದಿಂದಾಗಿ ಬೆಂಕಿ ತಗುಲಿರಬಹುದು ಎಂದು ವಿಮಾನ ಸಿಬ್ಬಂದಿಗಳು ಹೇಳಿದ್ದಾರೆ. ವಿಮಾನಕ್ಕೆ ಬೆಂಕಿ ತಗುಲಿದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ.