* ಕಾಂಗ್ರೆಸ್ ನಾಯಕತ್ವ ಸ್ಪಷ್ಟವಾಗಿ ನಿರಾಕರಿಸಿದ ಮಮತಾ ಬ್ಯಾನರ್ಜಿ
* ದೀದೀ ಬೆನ್ನಲ್ಲೇ ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್
* 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು, ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ ಪಿಕೆ
ನವದೆಹಲಿ(ಡಿ.02): ಬಿಜೆಪಿ ವಿರುದ್ಧ ಒಗ್ಗೂಡಲಾರಂಭಿಸಿರುವ ವಿರೋಧ ಪಕ್ಷಗಳಲ್ಲಿ ಒಡಕು ಮುಡುತ್ತಿರುವುದು ಕಂಡುಬರುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಳಿಕ ಈಗ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕತ್ವವನ್ನು ಅಂದರೆ ಗಾಂಧಿ ಕುಟುಂಬದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಶೇ. 90 ರಷ್ಟು ಚುನಾವಣೆಗಳಲ್ಲಿ ಸೋಲನುಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕತ್ವ ಕಾಂಗ್ರೆಸ್‌ನ ದೈವಿಕ ಹಕ್ಕಾಗಲಾರದು ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಪ್ರತಿನಿಧಿಸುವ ಕಲ್ಪನೆ ಪ್ರಬಲ ವಿರೋಧಕ್ಕೆ ಬಹಳ ಮುಖ್ಯವಾಗಿದೆ. ಹೀಗಂತ ಕಾಂಗ್ರೆಸ್ ನಾಯಕತ್ವ ಯಾರ ದೈವಿಕ ಹಕ್ಕಲ್ಲ ಎಂದಿದ್ದಾರೆ.
The IDEA and SPACE that represents is vital for a strong opposition. But Congress’ leadership is not the DIVINE RIGHT of an individual especially, when the party has lost more than 90% elections in last 10 years.
Let opposition leadership be decided Democratically.
ಬಿಜೆಪಿ ವಿರುದ್ಧ ಒಂದಾದವರ ಮಧ್ಯೆಯೂ ಅಸಮಾಧಾನ
ಬಿಜೆಪಿ ವಿರುದ್ಧ ತೃತೀಯ ರಂಗ ಹುಟ್ಟುಹಾಕುವ ಕಸರತ್ತಿನಲ್ಲಿ ತೊಡಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅನ್ನು ಬದಿಗಿರಿಸಿ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ. ಮೊದಲನೆಯದಾಗಿ ಮಮತಾ ಬ್ಯಾನರ್ಜಿ ಈ ಮೈತ್ರಿಯಿಂದ ಕಾಂಗ್ರೆಸ್ ಅನ್ನು ದೂರವಿಟ್ಟಿದ್ದಾರೆ, ಎರಡನೆಯದಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಕುರಿತು, ಇನ್ನು ಮುಂದೆ ಮೈತ್ರಿ ಇಲ್ಲ ಎಂದು ನೀಡಿರುವ ಹೇಳಿಕೆ. ದೀದೀಯ ಈ ಹೆಳಿಕೆ ಬಳಿಕ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರ ವಿಭಿನ್ನ ಹೇಳಿಕೆಗಳು ಬರಲಾರಂಭಿಸಿವೆ. ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ಸರ್ಕಾರ ರಚಿಸಿದ ನಂತರ, ಮಮತಾ ಬ್ಯಾನರ್ಜಿಯವರ ವರ್ತನೆ ಆಕ್ರಮಣಕಾರಿಯಾಗಿದೆ ಎಂಬುವುದು ಉಲ್ಲೇಖನೀಯ. ಅವರು ಎರಡು ದಿನಗಳ ಪ್ರವಾಸ ನಿಮಿತ್ತ ನವೆಂಬರ್ 30 ರಂದು ಮುಂಬೈ ತಲುಪಿದ್ದರು. ಡಿಸೆಂಬರ್ 1 ರಂದು ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿದದು, ಈ ಭೇಟಿಯ ವೇಳೆ ಅವರು ಕಾಂಗ್ರೆಸ್ ಮೈತ್ರಿ ಬಗ್ಗೆ ಇಂತಹ ಹೇಳಿಕೆ ನೀಡಿದ್ದಾರೆ.
ದೀದಿಗೆ ಕಾಂಗ್ರೆಸ್ ಉತ್ತರ ನೀಡಿದೆ
ಮಮತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಮತಾರವರು ಇಂತಹ ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ. ತಮ್ಮ ನಾಯಕ ರಾಹುಲ್ ಗಾಂಧಿ ಪ್ರತಿಯೊಂದು ವಿಷಯದಲ್ಲೂ ಹೋರಾಟ ನಡೆಸುತ್ತಿದ್ದಾರೆ. ಅವರು ರೈತರ ಸಮಸ್ಯೆ ವಿಚಾರವಾಗಿ ಹೋರಾಡಿದರು, ಹಣದುಬ್ಬರ ವಿರೋಧಿಸಿ ಹೋರಾಡಿದರು, ಯುಪಿಯಲ್ಲಿ ಎಲ್ಲಿ ಅಪಘಾತಗಳು ಸಂಭವಿಸಿದರೂ ಪ್ರಿಯಾಂಕಾ ಗಾಂಧಿ ಅಲ್ಲಿಗೆ ತೆರಳಿ ಸಂತ್ರಸ್ತರ ಪರ ಧ್ವನಿ ಎತ್ತುತ್ತಿದ್ದಾರೆ. ಹೀಗಿರುವಾಗ ಇಂತಹ ಹೇಳಿಕೆಗಳು ಸರಿಯಲ್ಲ. ಇಡಿ ಮತ್ತು ಸಿಬಿಐಗೆ ಹೆದರಿ ಮಮತಾ ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡಾ ಮಮತಾ ವಿರುದ್ಧ ಕಿಡಿ ಕಾರಿದ್ದು ಕಾಂಗ್ರೆಸ್ ಇಲ್ಲದೆ ಬಿಜೆಪಿಯನ್ನು ಸೋಲಿಸಬಹುದು ಎಂಬ ಯಾವುದೇ ಪಕ್ಷದ ಚಿಂತನೆ ಕೇವಲ ಕನಸು, ಭಾರತೀಯ ರಾಜಕಾರಣದ ಸತ್ಯ ಎಲ್ಲರಿಗೂ ಗೊತ್ತು ಎಂದಿದ್ದಾರೆ.
ಇನ್ನು ಅತ್ತ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಮತಾ ಬ್ಯಾನರ್ಜಿಯನ್ನು ಹುಚ್ಚಿ ಎಂದು ಕೂಡ ಹೇಳಿದ್ದಾರೆ. ಮಮತಾಗೆ ಈಗ ಹುಚ್ಚು ಹೆಚ್ಚಿದೆ. ಇಡೀ ಭಾರತವು ಮಮತಾ-ಮಮತಾ ಮಾಡುತ್ತಿದೆ ಎಂದು ಅವರು ಭಾವಿಸುತ್ತಾರೆ, ಆದರೆ ಬಂಗಾಳವು ಮಮತಾ ಅಲ್ಲ ಮತ್ತು ಮಮತಾ ಬಂಗಾಳವಲ್ಲ. ಬಿಜೆಪಿ ಮತ್ತು ಮಮತಾ ಇಬ್ಬರೂ ಬೆರೆತಿದ್ದಾರೆ ಎಂದು ಕಿಡಿ ಕಾರಿದ್ದಾರೆ.