
ಮುಂಬೈ (ಮೇ.6): 26/11 ಮುಂಬೈ ಭಯೋತ್ಪಾದಕ ದಾಳಿಯ ಉಗ್ರ ಅಜ್ಮಲ್ ಕಸಬ್‌ಗೆ ಗಲ್ಲುಶಿಕ್ಷೆ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಂದಿನ ಮಹಾರಾಷ್ಟ್ರದ ಸರ್ಕಾರಿ ವಕೀಲ ಹಾಗೂ ಪ್ರಸಕ್ತ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಉಜ್ವಲ್ ನಿಕಂ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ. ಇದು ಭಾರಿ ವಿವಾದಕ್ಕೀಡಾಗಿದ್ದು, ‘ಕಾಂಗ್ರೆಸ್ ಕಸಬ್ ಪರ ಪಕ್ಷ’ ಎಂದು ಬಿಜೆಪಿ ಕಿಡಿಕಾರಿದೆ.
ಲೈಂಗಿಕ ಕಿರುಕುಳದ ಆರೋಪ ಬೆನ್ನಲ್ಲೇ ಪೊಲೀಸರನ್ನು ರಾಜಭವನ ಒಳಗೆ ಬಿಡದಂತೆ ಬಂಗಾಳ ರಾಜ್ಯಪಾಲ ಸೂಚನೆ
ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕ ವಿಜಯ್ ವಡೆಟ್ಟಿವಾರ್, ‘ಉಗ್ರರ ವಿರುದ್ಧ ಹೋರಾಡುವಾಗ ಎಸ್‌ಟಿಎಫ್ ಮುಖ್ಯಸ್ಥ ಹೇಮಂತ್ ಕರ್ಕರೆ ಗುಂಡು ತಗುಲಿ ಸಾವನ್ನಪ್ಪಿದ್ದರು. ಆದರೆ ಆ ಗುಂಡು ಹಾರಿಸಿದ್ದು ಕಸಬ್ ಆಗಿರಲಿಲ್ಲ. ಬದಲಿಗೆ ಆರ್‌ಎಸ್‌ಎಸ್ ಬೆಂಬಲಿತ ಪೊಲೀಸ್ ಅಧಿಕಾರಿಯಾಗಿತ್ತು. ಅದನ್ನು ನಿಕಂ ಮುಚ್ಚಿಟ್ಟು ಆರ್‌ಎಸ್‌ಎಸ್ ಬೆಂಬಲಿತ ಅಧಿಕಾರಿಯನ್ನು ರಕ್ಷಿಸಿದ್ದರು. ಹೀಗಾಗಿ ಅವರೊಬ್ಬ ದೇಶದ್ರೋಹಿ’ ಎಂದು ಆರೋಪಿಸಿದ್ದಾರೆ.
ಮುಂಬೈನ ಹೈ ಪ್ರೊಫೈಲ್ ಕ್ಷೇತ್ರಕ್ಕೆ ಬಿಜೆಪಿಯಿಂದ ಉಗ್ರ ಕಸಬ್ ಗಲ್ಲಿಗೆ ಕಾರಣವಾದ ವಕೀಲ ನಿಕಂ ಅಭ್ಯರ್ಥಿ
ವಕ್ತಾರೆ ಕಿಡಿ: ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಕೂಡ ನಿಕಂ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಅಜ್ಮಲ್ ಕಸಬ್‌ಗೆ ಜೈಲಿನಲ್ಲಿ ಬಿರ್ಯಾನಿ ನೀಡಲಾಗುತ್ತಿದೆ ಎಂದು ನಿಕಂ ಸುಳ್ಳು ಹೇಳಿದ್ದರು. ನಂತರ ಅದು ಸುಳ್ಳೆಂದು ಅವರೇ ಒಪ್ಪಿಕೊಂಡಿದ್ದರು. ಇಂತಹ ಸುಳ್ಳುಗಾರನಿಗೆ ಹಾಲಿ ಮಹಿಳಾ ಸಂಸದೆ ಪೂನಂ ಮಹಾಜನ್‌ಗೆ ಟಿಕೆಟ್ ತಪ್ಪಿಸಿ ಬಿಜೆಪಿಗರು ಲೋಕಸಭೆಗೆ ಟಿಕೆಟ್ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಈ ಆರೋಪಗಳನ್ನು ನಿಕಂ ಅಲ್ಲಗಳೆದಿದ್ದು, ‘ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ಅಂದುಕೊಂಡಿರಲಿಲ್ಲ, ಖುದ್ದು ಪಾಕಿಸ್ತಾನವೇ ಕಸಬ್ ದಾಳಿ ನಡೆಸಿದ್ದ ಎಂದು ಹೇಳಿತ್ತು’ ಎಂದಿದ್ದಾರೆ. ಇದೇ ವೇಳೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಕಸಬ್ ಪರ ಪಕ್ಷ ಎಂದು ಸಾಬೀತಾಗಿದೆ’ ಎಂದಿದ್ದಾರೆ. ನಿಕಂ ಅವರಿಗೆ ಬಿಜೆಪಿಯಿಂದ ಮುಂಬೈ ಮಧ್ಯ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ