
ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಯುಎಸ್ ಇಂಡಿಯಾ ಟ್ರೇಡ್ ಒಪ್ಪಂದವನ್ನು ಖಂಡಿಸಿ ಪ್ರಧಾನಿ ಮೋದಿ ವಿರೋಧ ಘೋಷಣೆ ಕೂಗುತ್ತಾ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ನಂತರ ಬಿಜೆಪಿ ಕಾಂಗ್ರೆಸ್‌ನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದಾರೆ.
ಭಾರತ್ ಮಂಟಪದಲ್ಲಿ ಜಾಗತಿಕ ಎಐ ಶೃಂಗಸಭೆ 2026 ನಡೆಯುತ್ತಿದ್ದಾಗಲೇ ಪ್ರದರ್ಶನ ಹಾಲ್ ಸಂಖ್ಯೆ 5 ಕ್ಕೆ ಬಂದ 10 ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ತಾವು ಧರಿಸಿದ್ದ ಶರ್ಟ್ ತೆಗೆದು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಕಾಂಗ್ರೆಸ್ ನಾಯಕರ ಟಾಪ್‌ಲೆಸ್ ಪ್ರತಿಭಟನೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್, ಈ ಅವ್ಯವಸ್ಥೆಯನ್ನು ಸಂಘಟಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಸಂಸದ ಸಂಬಿತ್ ಪಾತ್ರ ಮಾತನಾಡಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಉನ್ನತ ಮಟ್ಟದ ದೇಶದ್ರೋಹಿಗಳು. ದೇಶದ ಅತಿದೊಡ್ಡ ದೇಶದ್ರೋಹಿಗಳು. ದೇಶ ಎಲ್ಲೆಲ್ಲಿ ಪ್ರಗತಿ ಹೊಂದುತ್ತದೆಯೋ, ಎಲ್ಲೆಲ್ಲಿ ಸಂತೋಷ ಇರುತ್ತದೆಯೋ, ಅವರು ಖಂಡಿತವಾಗಿಯೂ ಅದನ್ನು ಹಾಳು ಮಾಡುತ್ತಾರೆ. ಇವರು ದೇಶದ್ರೋಹಿಗಳು. ಕಾಂಗ್ರೆಸ್ ಬಗ್ಗೆ ನನಗೆ ಕೇವಲ ಮೂರು ಪದಗಳಿವೆ: ಟಾಪ್‌ಲೆಸ್, ಬ್ರೈನ್ ಲೆಸ್ ಹಾಗೂ ಶೇಮ್ ಲೆಸ್ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ ಹೇಳಿದರು. ಇಂದು ಅವರು ಟಾಪ್‌ಲೆಸ್ ಆಗಿ, ಮೆದುಳಿಲ್ಲದವರಾಗಿ ಹೋದರು.
ಇದನ್ನೂ ಓದಿ: ಅಮ್ಮನ ಅಂಬಾರಿ: ಮೇವಿನ ಹೊರೆಯ ಜೊತೆ ಮಗನನ್ನು ಕಟ್ಟಿ ತಲೆಯ ಮೇಲಿಟ್ಟು ಸಾಗಿದ ತಾಯಿ
ದೆಹಲಿಯಲ್ಲಿ ನಡೆಯುತ್ತಿರುವ ಈ ಎಐ ಶೃಂಗಸಭೆ ಬಿಜೆಪಿ ಶೃಂಗಸಭೆಯಲ್ಲ ಎಂಬಷ್ಟು ಬುದ್ಧಿವಂತಿಕೆಯೂ ಕಾಂಗ್ರೆಸ್‌ಗೆ ಇಲ್ಲ. ಇದು ಇಡೀ ಪ್ರಪಂಚದ ಎಐ ಶೃಂಗಸಭೆ ಎಂದು ಅವರು ಹೇಳಿದರು. ಜೆನ್ ಜೆಡ್ ತಲೆಮಾರು ಈ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಕ್ಷಮಿಸುವುದಿಲ್ಲ. ನಾನು ಈ ಜೆನ್ ಜೆಡ್ ತಲೆಮಾರಿನವರು ನೆಹರು, ಎಡ್ವಿನಾ ಮತ್ತು ಹಾವಿನ ಬಗ್ಗೆ ಗೂಗಲ್‌ನಲ್ಲಿ ಹುಡುಕಬೇಕು ಎಂದು ವಿನಂತಿಸುತ್ತೇನೆ. ಆಗ ನೀವು ಎಡ್ವಿನಾ ಮೌಂಟ್ ಬ್ಯಾಟನ್ ಮತ್ತು ಬ್ರಿಟಿಷರ ಮುಂದೆ ಪಂಡಿತ್ ಜವಾಹರ್ ಲಾಲ್ ನೆಹರೂ, ಭಾರತವನ್ನು ಹಾವಾಡಿಗರ ದೇಶ ಎಂದು ಕರೆಯುತ್ತಾ ನಗುವುದನ್ನು ನೀವು ನೋಡುತ್ತೀರಿ. ಇಂದು ರಾಹುಲ್ ಗಾಂಧಿ ಅವರು ನೆಹರು ಮಾಡಿದ್ದನ್ನೇ ಮಾಡಿದ್ದಾರೆ ಎಂದು ಸಂಬಿತ್ ಪಾತ್ರ ಹೇಳಿದರು.
ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಕಾಂಗ್ರೆಸ್‌ನ ಈ ಪ್ರತಿಭಟನೆಯನ್ನು ಟೀಕಿಸಿದ್ದು, ಭಾರತವು ಪ್ರತಿಷ್ಠಿತ ಜಾಗತಿಕ ಎಐ ಶೃಂಗಸಭೆಯನ್ನು ಆಯೋಜಿಸುತ್ತಿದ್ದು, ತಂತ್ರಜ್ಞಾನದಲ್ಲಿ ತನ್ನ ನಾವೀನ್ಯತೆ ಮತ್ತು ನಾಯಕತ್ವವನ್ನು ಪ್ರದರ್ಶಿಸುತ್ತಿರುವ ಸಮಯದಲ್ಲಿ, ಕಾಂಗ್ರೆಸ್ ಪಕ್ಷವು ದೇಶದ ಘನತೆಗಿಂತ ಅಡ್ಡಿಪಡಿಸುವಿಕೆಯನ್ನು ಆಯ್ಕೆ ಮಾಡಿದೆ. ವಿಶ್ವ ವೇದಿಕೆಯಲ್ಲಿ ಭಾರತವನ್ನು ಮುಜುಗರಕ್ಕೀಡು ಮಾಡಲು ಈ ಪ್ರತಿಭಟನೆಯನ್ನು ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು.
ರಾಜಕೀಯ ವಿರೋಧವು ಪ್ರಜಾಸತ್ತಾತ್ಮಕ ಹಕ್ಕು, ಆದರೆ ಭಾರತದ ಜಾಗತಿಕ ಇಮೇಜ್ ಅನ್ನು ಹಾಳು ಮಾಡುವುದು ಅಲ್ಲ. ಭಾರತವು ಇದಕ್ಕಿಂತ ಉತ್ತಮವಾದದ್ದನ್ನು ಪಡೆಯಬೇಕು ಎಂದು ಹೇಳಿದರು. ಮತ್ತೊಂದು ಪೋಸ್ಟ್‌ನಲ್ಲಿ, ಇಂದಿನ ಎಐ ಶೃಂಗಸಭೆಯಲ್ಲಿ ಬೆತ್ತಲೆ ಪ್ರತಿಭಟನೆಯ ಪ್ರಮುಖ ಸಂಘಟಕರಲ್ಲಿ ಒಬ್ಬರಾದ ನರಸಿಂಹ ಯಾದವ್, ರಾಹುಲ್ ಗಾಂಧಿಯವರೊಂದಿಗೆ ಫೋಟೋಗಳನ್ನು ಹೊಂದಿದ್ದಾರೆ. ಈ ಘಟನೆ ಆಕಸ್ಮಿಕವಲ್ಲ, ಅದನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಇಂತಹ ನಾಟಕಗಳು ಭಾರತದ ವರ್ಚಸ್ಸಿಗೆ ಹಾನಿ ಮಾಡುತ್ತವೆ ಮತ್ತು ದೇಶದ ತಾಂತ್ರಿಕ ನಾಯಕತ್ವವನ್ನು ಪ್ರದರ್ಶಿಸಲು ಉದ್ದೇಶಿಸಲಾದ ವೇದಿಕೆಯನ್ನೇ ಹಾಳುಮಾಡುತ್ತವೆ.
ರಾಜಕೀಯ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಭಾಗವಾಗಿದೆ. ಪ್ರಪಂಚದ ಮುಂದೆ ಭಾರತವನ್ನು ಮುಜುಗರಕ್ಕೀಡು ಮಾಡುವುದು ಸರಿಯಲ್ಲ" ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಛಾಯಾಚಿತ್ರವೊಂದರಲ್ಲಿಈ ಪ್ರತಿಭಟನೆಯನ್ನು ಆಯೋಜಿಸಿದ್ದರು ಎಂದು ಹೇಳಲಾಗುವ ನರಸಿಂಹ ಯಾದವ್ ಅವರೊಂದಿಗೆ ರಾಹುಲ್ ಗಾಂಧಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ