ರಾಮ ಮಂದಿರ ಉದ್ಘಾಟನೆಯಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುತ್ತಾರಾ? ಈ ಪ್ರಶ್ನೆಗೆ ಇದೀಗ ಉತ್ತರ ಸಿಗುವ ಕಾಲ ಸನಿಹವಾಗಿದೆ. ಮಹತ್ವದ ಚರ್ಚೆಯಲ್ಲಿ ಕಾಂಗ್ರೆಸ್ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ನಾಯಕರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ನವದೆಹಲಿ(ಜ.05) ರಾಮ ಮಂದಿರ ಉದ್ಘಾಟನೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಅನ್ನೋದು ಇಂಡಿಯಾ ಒಕ್ಕೂಟದ ವಿಪಕ್ಷಗಳ ಆರೋಪವಾಗಿದೆ. ಇತ್ತ ಕಾಂಗ್ರೆಸ್ ನಾಯಕರಿಗೂ ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಆದರೆ ಪಾಲ್ಗೊಳ್ಳುವ ಕುರಿತು ಇದುವರೆಗೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಕಾಂಗ್ರೆಸ್ ತನ್ನ ನಾಯಕರಿಗೆ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಗ್ರೀನ್ ಸಿಗ್ನಲ್ ನೀಡಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಜೊತೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಸಭೆ ನಡೆಸಿದೆ. ಈ ಸಭೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ಪಾಲ್ಗೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ. ಈ ವೇಳೆ 2024ರ ಲೋಕಸಭೆ ಚುನಾವಣೆಯಲ್ಲಿ ಹಿಂದೂ ಮತಗಳನ್ನು ಸೆಳೆಯಲು ಕಾಂಗ್ರೆಸ್ ನಾಯಕರು ರಾಮ ಮಂದಿರದಲ್ಲಿ ಪಾಲ್ಗೊಳ್ಳುವಿಕೆ ಕೂಡ ಮುಖ್ಯ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿದರೆ ಹಿಂದೂ ವಿರೋಧಿ ಅನ್ನೋ ಹಣೆಪಟ್ಟಿಗೆ ಮತ್ತಷ್ಟು ಪುಷ್ಠಿ ಸಿಗಲಿದೆ.ಹೀಗಾಗಿ ರಾಮ ಮಂದಿರದಲ್ಲಿ ಪಾಲ್ಗೊಳ್ಳುವ ಮೂಲಕ ಹಿಂದೂ ಮತಗಳಿಗೆ ಹತ್ತಿರವಾಗಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.
212 ಪಿಲ್ಲರ್, 161 ಅಡಿ ಎತ್ತರ; ಕಬ್ಬಿಣ ಬಳಸದೆ ನಾಗರಶೈಲಿಯಲ್ಲಿ ರಾಮ ಮಂದಿರ ನಿರ್ಮಾಣ!
ಉತ್ತರ ಪ್ರದೇಶ ಹಾಗೂ ಬಿಹಾರ ಕಾಂಗ್ರೆಸ್ ಘಟಕದ ನಾಯಕರು ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ಕುರಿತು ಹೈಕಮಾಂಡ್ ಪ್ರಶ್ನಿಸಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಮ ಮಂದಿರಕ್ಕೆ ತೆರಳುವುದು, ಉದ್ಘಾಟನೆ ಅಥವಾ ಪೂಜೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಯಾರಿಗೂ ನಿರ್ಬಂಧ ವಿಧಿಸುತ್ತಿಲ್ಲ ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಕುರಿತು ಇತ್ತೀಚೆಗೆ ಜೈರಾಮ ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ. ‘ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿಯವರಿಗೆ ರಾಮ ಮಂದಿರದ ಉದ್ಘಾಟನೆಗೆ ಆಹ್ವಾನ ಬಂದಿದೆ. ಈ ಬಗ್ಗೆ ನಿರ್ಧರಿಸಿ ಸೂಕ್ತ ಸಮಯದಲ್ಲಿ ತಿಳಿಸಲಾಗುವುದು’ ಎಂದಿದ್ದರು. ಕೆಲ ದಿನಗಳ ಹಿಂದೆ ಪಕ್ಷದ ಇನ್ನೋರ್ವ ನಾಯಕ ದಿಗ್ವಿಜಯ್ ಸಿಂಗ್, ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕುರಿತು ಸೋನಿಯಾ ಸಕಾರಾತ್ಮಕವಾಗಿದ್ದಾರೆ ಎಂದಿದ್ದರು.
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಜ.22ರ ದಿನಾಂಕ ಆಯ್ಕೆ ಮಾಡಿಕೊಂಡಿದ್ದೇಕೆ? ಇದರ ಮಹತ್ವವೇನು?
ಆದರೆ ಇಂಡಿಯಾ ಮೈತ್ರಿಕೂಟ ಭಾಗಿದಾರ ಪಕ್ಷಗಳಾದ ಮುಸ್ಲಿಂ ಲೀಗ್, ಎಡಪಕ್ಷಗಳು, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತಿತರು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಿದ್ದಾರೆ.