‘ಕಾಂಗ್ರೆಸ್ ಕೂಡ ತಪ್ಪು ಮಾಡಿದೆ. ಭವಿಷ್ಯದಲ್ಲಿ ನಾವು ಕೂಡ ನಮ್ಮ ರಾಜಕೀಯವನ್ನು ಬದಲಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಲಖನೌ (ಮೇ.11): ‘ಕಾಂಗ್ರೆಸ್ ಕೂಡ ತಪ್ಪು ಮಾಡಿದೆ. ಭವಿಷ್ಯದಲ್ಲಿ ನಾವು ಕೂಡ ನಮ್ಮ ರಾಜಕೀಯವನ್ನು ಬದಲಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇಲ್ಲಿ ನಡೆದ ‘ಸಂವಿಧಾನ ಸಮ್ಮೇಳನ’ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಕೂಡ ತಪ್ಪು ಮಾಡಿದೆ ಎಂದು ಹೇಳುವುದಕ್ಕೆ ಬಯಸುತ್ತೇನೆ. ಪಕ್ಷದ ನಾಯಕನಾದರೂ ಕೂಡ ನಾನು ಈ ಮಾತನ್ನು ಹೇಳುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಕೂಡ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ’ ಎಂದರು.
ಆದರೆ ಯಾವ ಬದಲಾವಣೆ ಎಂಬುದನ್ನು ಹೇಳಲಿಲ್ಲ. ಇದೇ ಸಂದರ್ಭದಲ್ಲಿ ಮೋದಿ ಒಬ್ಬ ರಾಜ, ಪ್ರಧಾನಿಯಲ್ಲ, ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂಬ ಮಾತನ್ನು ಪುನರುಚ್ಚರಿಸಿದರು. ‘ ನರೇಂದ್ರ ಮೋದಿ ಅವರನ್ನು ಚರ್ಚೆಯಲ್ಲಿ ಎದುರಿಸಲು ಶೇ.100ರಷ್ಟು ಸಿದ್ಧ. ಆದರೆ ಪ್ರಧಾನಿ ಇದಕ್ಕೆ ಒಪ್ಪಿಕೊಳ್ಳುವುದಿಲ್ಲ’ ಎಂದರು.
ಸ್ವಂತ ಅನುಭವ ಹೇಳುತ್ತಿದ್ದಾರೆ: ಪ್ರಧಾನಿ ನರೇಂದ್ರ ಮೋದಿ ಅವರು ‘ಅಂಬಾನಿ- ಅದಾನಿ ಬಗ್ಗೆ ರಾಹುಲ್ ಏಕೆ ಮಾತು ನಿಲ್ಲಿಸಿದ್ದಾರೆ? ಟೆಂಪೋದಲ್ಲಿ ಅವರಿಗೆ ಎಷ್ಟು ಹಣ ಬಂದಿದೆ?’ ಎಂದು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ‘ಮೋದಿ ಬಹುಶಃ ತಮ್ಮ ಸ್ವಂತ ಅನುಭವ ಹೇಳುತ್ತಿರಬೇಕು’ ಎಂದು ಟಾಂಗ್ ನೀಡಿದ್ದಾರೆ. ಇದೇ ವೇಳೆ, ‘ನಮಗೆ ಅಂಬಾನಿ, ಅದಾನಿ ಹಣ ಕಳಿಸಿದ್ದಾರೆ ಎಂದರೆ ಏಕೆ ಅಂಜುತ್ತೀರಿ? ಇ.ಡಿ., ಸಿಬಿಐ ದಾಳಿ ನಡೆಸಿ’ ಎಂದೂ ಸವಾಲು ಹಾಕಿದ್ದಾರೆ.
ಸರ್ವಾಧಿಕಾರದಿಂದ ದೇಶ ರಕ್ಷಿಸುವೆ: ಬಂಧಮುಕ್ತ ಕೇಜ್ರಿವಾಲ್ ಘೋಷಣೆ
ಮೋದಿ ಹೇಳಿಕೆ ಬಗ್ಗೆ ವಿಡಿಯೋ ಸಂದೇಶ ನೀಡಿರುವ ರಾಹುಲ್, ‘ನಮಸ್ಕಾರ್ ಮೋದಿಜಿ, ನಿಮಗೆ ಭಯವಾಗಿದೆಯೇ? ಸಾಮಾನ್ಯವಾಗಿ ನೀವು ಮುಚ್ಚಿದ ಬಾಗಿಲಿನ ಹಿಂದೆ ಅಂಬಾನಿ, ಅದಾನಿ ಬಗ್ಗೆ ಮಾತನಾಡುತ್ತೀರಿ. ನೀವು ಮೊದಲ ಬಾರಿಗೆ ಸಾರ್ವಜನಿಕವಾಗಿ ‘ಅಂಬಾನಿ, ಅದಾನಿ’ ಎಂದು ಹೇಳಿದ್ದೀರಿ. ಇದು ನಿಮಗೆ ಭಯವಾಗಿರುವ ಸಂಕೇತ. ಅಲ್ಲದೆ ಟೆಂಪೋದಲ್ಲಿ ಕಾಂಗ್ರೆಸ್‌ಗೆ ಹಣ ಬಂದಿರಬಹುದು ಎಂಬ ನಿಮ್ಮ ಹೇಳಿಕೆ ಸ್ವಂತ ಅನುಭವದಂತಿದೆ’ ಎಂದು ಕಿಚಾಯಿಸಿದ್ದಾರೆ.