ಕರ್ನಾಟಕ ಸೇರಿ ಈ ವರ್ಷ ಚುನಾವಣೆ ಇರುವ ರಾಜ್ಯಗಳಲ್ಲಿ ಏಕತೆಯಿಂದ ಹೋರಾಡಿ, ಹಾಗೂ ಪಕ್ಷವನ್ನು ವಿಜಯಿ ಆಗುವಂತೆ ನೋಡಿಕೊಳ್ಳಿ ಎಂದು ಮುಖಂಡರಿಗೆ ಕಾಂಗ್ರೆಸ್ ಕರೆ ನೀಡಿದೆ. ಈ ಜಯವು 2024ರ ಲೋಕಸಭಾ ಜಯಕ್ಕೆ ಸೋಪಾನ ಆಗಲಿ ಎಂದು ರಾಯಪುರ ಮಹಾಧಿವೇಶನದಲ್ಲಿ ಕಾರ‍್ಯಕರ್ತರು, ಮುಖಂಡರಿಗೆ ಕರೆ ನೀಡಿದ್ದಾರೆ.
ನಯಾ ರಾಯ್‌ಪುರ (ಫೆಬ್ರವರಿ 27, 2023): ಛತ್ತೀಸ್‌ಗಢದ ನಯಾ ರಾಯ್‌ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 3 ದಿನಗಳ ಮಹಾಧಿವೇಶನಕ್ಕೆ ಭಾನುವಾರ ತೆರೆ ಬಿದ್ದಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು 5 ಗೊತ್ತುವಳಿಗಳನ್ನು ಅಂಗೀಕರಿಸಲಾಗಿದೆ. ಚುನಾವಣೆಗಳಿರುವ ರಾಜ್ಯಗಳಲ್ಲಿ ಏಕತೆಯೊಂದಿಗೆ ಹೋರಾಡಿ ಪಕ್ಷವನ್ನು ವಿಜಯಶಾಲಿ ಮಾಡಬೇಕು ಎಂದು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸೂಚಿಸಲಾಗಿದೆ.
ಈ ವರ್ಷ ಕರ್ನಾಟಕ (Karnataka), ಛತ್ತೀಸ್‌ಗಢ (Chattisgarh), ಮಧ್ಯಪ್ರದೇಶ (Madhya Pradesh), ಮಿಜೋರಾಂ (Mizoram), ರಾಜಸ್ಥಾನ (Rajasthan) ಮತ್ತು ತೆಲಂಗಾಣ (Telangana) ರಾಜ್ಯಗಳಲ್ಲಿ ಚುನಾವಣೆ (Election) ನಡೆಯಲಿದೆ. ಈ ಚುನಾವಣೆಗಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟು ಮತ್ತು ಶಿಸ್ತಿನಿಂದ ಹೋರಾಡುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಈ ಗೆಲುವು 2024ರ ಲೋಕಸಭಾ ಚುನಾವಣೆಗೆ ಸೋಪಾನ ಆಗಬೇಕು ಎಂದು ಸೂಚನೆ ನೀಡಲಾಗಿದೆ.
ಇದನ್ನು ಓದಿ: ಕಾಂಗ್ರೆಸ್ ಸದಸ್ಯರಿಗೆ ಡ್ರಗ್ಸ್ ನಿರ್ಬಂಧ: ಸಿಡಬ್ಲ್ಯುಸಿಯಲ್ಲಿ ಶೇ. 50 ರಷ್ಟು ಮೀಸಲಿಗೆ ಅಸ್ತು
ಅಲ್ಲದೇ ಕಾಂಗ್ರೆಸ್ (Congress) ಈಗಾಗಲೇ ಸಮಾನ ಮನಸ್ಕ ಪಕ್ಷಗಳ ಜೊತೆಗೆ ಕೆಲಸ ಮಾಡಲು ಆರಂಭಿಸಿದೆ. ಇದನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಪಕ್ಷ ತಿಳಿಸಿದೆ. ಈ ಮೂಲಕ 2024ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಮಹಾಮೈತ್ರಿಕೂಟ ಕಟ್ಟುವ ಸುಳಿವು ನೀಡಿದೆ.
‘ಕೇವಲ ಕಾಂಗ್ರೆಸ್ ಪಕ್ಷವೊಂದೇ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಚಿಂತನೆಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳದೇ ಕಾರ್ಯ ನಿರ್ವಹಿಸುತ್ತಿದೆ. ನಾವು ಮಾತ್ರ ದೇಶದಲ್ಲಿ ನಡೆಯುತ್ತಿರುವ ಕೋಮುವಾದ ಮತ್ತು ಬಂಡವಾಳಗಾರರ ಸಖ್ಯವನ್ನು ಪ್ರಶ್ನಿಸುತ್ತಿದ್ದೇವೆ. ದೇಶದಲ್ಲಿ ಸಾಮಾನ್ಯ ಜನರ ಒಳಿತಿಗೆ ಸಹಾಯವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳಲು ಸಮಾನ ಮನಸ್ಕ ಪಕ್ಷಗಳ ಜೊತೆಗೆ ಕೆಲಸ ಮಾಡುತ್ತಿದ್ದೇವೆ’ ಎಂದು ಗೊತ್ತುವಳಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: 2024ರಲ್ಲೂ ಮೋದಿ ವಿರುದ್ಧ ಕಾಂಗ್ರೆಸ್ ಮೈತ್ರಿ ರಚನೆ: ಖರ್ಗೆ; ಸೋನಿಯಾ ರಾಜಕೀಯ ವಿದಾಯ..?
ಕಾಂಗ್ರೆಸ್ ಮಹಾಧಿವೇಶನದ 5 ಪ್ರಮುಖ ಗೊತ್ತುವಳಿಗಳು
1. ಕರ್ನಾಟಕ ಸೇರಿ ವಿವಿಧ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಿ ಪಕ್ಷ ಗೆಲ್ಲಲು ಶ್ರಮಿಸಬೇಕು.
2. ಈ ವರ್ಷದ ವಿಧಾನಸಭೆ ಚುನಾವಣೆಗಳ ಗೆಲುವು 2024ರ ಲೋಕಸಭೆ ಚುನಾವಣೆ ಗೆಲುವಿಗೆ ಮುನ್ನುಡಿ ಆಗಬೇಕು
3. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಸೋಲಿಸಲು ಇತರ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗೆ ಸಿದ್ಧವಿದೆ
4. ಬಿಜೆಪಿಯ ಕೋಮುವಾದ, ಬಂಡವಾಳಶಾಹಿ ನೀತಿ ಹಾಗೂ ದಬ್ಬಾಳಿಕೆ ನೀತಿ ವಿರುದ್ಧ ಹೋರಾಟ
5. ರೈತರಿಗೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಶಾಸನಬದ್ಧಗೊಳಿಸುವುದು, ಬೆಂಬಲ ಬೆಲೆ ನೀಡದವರಿಗೆ ಶಿಕ್ಷೆ ವಿಧಿಸಲಾಗುವುದು
ಚುನಾವಣೆಗೆ 1 ವರ್ಷ ಮಾತ್ರ ಬಾಕಿ, ಸಜ್ಜಾಗಿ: ಪ್ರಿಯಾಂಕಾ
ಲೋಕಸಭೆ ಚುನಾವಣೆಗೆ ಇನ್ನು 1 ವರ್ಷ ಮಾತ್ರ ಉಳಿದಿದ್ದು, ಬಿಜೆಪಿ ವಿರುದ್ಧ ಹೋರಾಡಲು ಸಜ್ಜಾಗಬೇಕು ಎಂದು ಕಾಂಗ್ರೆಸ್ಸಿಗರು ಹಾಗೂ ಇತರ ಪ್ರತಿಪಕ್ಷಗಳಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಕರೆ ನೀಡಿದ್ದಾರೆ.
ಛತ್ತೀಸ್‌ಗಢದಲ್ಲಿ ನಡೆಯುತ್ತಿದ್ದ ಪಕ್ಷದ 85ನೇ ಮಹಾಧೀವೇಶನದಲ್ಲಿ ಮಾತನಾಡಿದ ಅವರು, ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ನಮಗೆ ಈಗ ಕೇವಲ 1 ವರ್ಷ ಮಾತ್ರ ಉಳಿದಿದೆ. ವಿರೋಧ ಪಕ್ಷವಾಗಿ ನಮ್ಮ ಮೇಲಿನ ನಿರೀಕ್ಷೆಗಳು ಹೆಚ್ಚಿವೆ. ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿಪಕ್ಷಗಳು ಹಾಗೂ ಬಿಜೆಪಿ ವಿರುದ್ಧ ಚಿಂತನೆಗಳನ್ನು ಉಳ್ಳ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಬಿಜೆಪಿ ವಿರುದ್ಧ ಹೋರಾಡುವ ಧೈರ್ಯ ಕಾಂಗ್ರೆಸ್‌ನ ಕಾರ್ಯಕರ್ತರಿಗಿದೆ. ಈಗ ಅದನ್ನು ಪ್ರದರ್ಶಿಸುವ ಸಮಯ ಬಂದಿದೆ’ ಎಂದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಜತೆ ನನ್ನ ಇನ್ನಿಂಗ್ಸ್ ಅಂತ್ಯವಾಗ್ಬಹುದು: ರಾಜಕೀಯ ನಿವೃತ್ತಿ ಸುಳಿವು ನೀಡಿದ ಸೋನಿಯಾ..!
‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಒಂದಾಗಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬಿಜೆಪಿ ವಿರುದ್ಧ ಹೋರಾಡುವ ಸ್ಥೈರ್ಯ ಕಾಂಗ್ರೆಸ್ ಕಾರ್ಯಕರ್ತರಿಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.