
ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ 'ವೋಟ್ ಚೋರ್, ಗಡ್ಡಿ ಛೋಡ್' ಸಮಾವೇಶವೀಗ ವಿವಾದಕ್ಕೆ ಗುರಿಯಾಗಿದೆ. ಈ ಸಮಾವೇಶಕ್ಕೆ ಬಂದ ಕಾಂಗ್ರೆಸ್ ಕಾರ್ಯಕರ್ತರು, ಮೋದಿ ತೇರಿ ಕಬರ್ ಖುದೇಗಿ(ಮೋದಿ ನಿನ್ನ ಸಮಾಧಿ ಅಗೆಯುತ್ತೇವೆ) ಎಂದು ಘೋಷಣೆ ಕೂಗುತ್ತಿರುವ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಕಾರ್ಯಕರ್ತರ ಈ ಘೋಷಣೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ, ಇದರಿಂದ ಕಾಂಗ್ರೆಸ್‌ನ ನಿಜವಾದ ಸ್ವರೂಪ ಮತ್ತೊಮ್ಮೆ ಬಯಲಾಗಿದೆ. ಅವರು ಪ್ರಧಾನಿ ನರೇಂದ್ರ ಮೋದಿಯವರ ಸಾವನ್ನು ಬಯಸುತ್ತಿದ್ದಾರೆ ಮತ್ತು ಅವರ ಮುಸ್ಲಿಂ ಲೀಗ್ ಮತ್ತು ಮಾವೋವಾದಿ ಮನಸ್ಥಿತಿ ಈಗ ಬಹಿರಂಗವಾಗಿದೆ ಎಂದು ಹೇಳಿದ್ದಾರೆ. ಮೋದಿಯ ಸಮಾಧಿಯನ್ನು ಅಗೆಯುವ ಬಗ್ಗೆ ಮಾತನಾಡುವ ಪಕ್ಷವನ್ನೇ ಸಮಾಧಿ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಔರಂಗಜೇಬನ ಕಾಲದಲ್ಲಿ ಮೊಘಲರು ಅನುಭವಿಸಿದಂತಹ ಸ್ಥಿತಿಯನ್ನೇ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಕೂಡ ಎದುರಿಸಲಿದೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್‌ನ ಭವಿಷ್ಯವು 'ದಿ ಲಾಸ್ಟ್ ಮೊಘಲ್' ಪುಸ್ತಕದಲ್ಲಿ ಮೊಘಲ್ ಸಾಮ್ರಾಜ್ಯದ ಬಗ್ಗೆ ಬರೆದಿರುವಂತೆಯೇ ಬದಲಾಗಬಹುದು ಎಂದು ರಾಜ್ಯಸಭಾ ಸದಸ್ಯರಾಗಿರುವ ಸುಧಾಂಶು ತ್ರಿವೇದಿ ಹೇಳಿದರು. ಮೊಘಲ್ ಸಾಮ್ರಾಜ್ಯವನ್ನು ಬಾಬರ್, ಹುಮಾಯೂನ್, ಅಕ್ಬರ್, ಜಹಾಂಗೀರ್, ಶಹಜಹಾನ್ ಮತ್ತು ಔರಂಗಜೇಬ್ ಎಂಬ ಆರು ಆಡಳಿತಗಾರರು ಆಳಿದರು. ಆರನೇ ತಲೆಮಾರಿನ ಆಳ್ವಿಕೆಯ ನಂತರ, ಮೊಘಲ್ ಸಾಮ್ರಾಜ್ಯವು ಅಂತ್ಯಗೊಂಡಿತು. ಅದೇ ರೀತಿ, ಕಾಂಗ್ರೆಸ್ ಅನ್ನು ನೆಹರು ಕುಟುಂಬದ ಆರು ಸದಸ್ಯರು, ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಆಳಿದ್ದಾರೆ. ರಾಹುಲ್ ಗಾಂಧಿ ಪ್ರಸ್ತುತ ಅಧಿಕಾರ ಅನುಭವಿಸುತ್ತಿರುವ ಆರನೇ ವ್ಯಕ್ತಿ. ಅವರ ನಂತರ, ಕಾಂಗ್ರೆಸ್ ಮೊಘಲರಂತೆಯೇ ಅದೇ ಅದೃಷ್ಟವನ್ನು ಎದುರಿಸಲಿದೆ ಎಂದು ಸುಧಾಂಶು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ರಾಮಕಥಾ ವಾಚಿಸುತ್ತಲೇ ಕೊನೆಯುಸಿರು: ಅಯೋಧ್ಯೆ ರಾಮಮಂದಿರ ಚಳುವಳಿಯ ಹಿರಿಯ ಸಂತ ಡಾ ರಾಮವಿಲಾಸ್ ದಾಸ್ ನಿಧನ
ಇತ್ತ ಪ್ರಧಾನಿ ಮೋದಿ ವಿರುದ್ಧ ಈ ರೀತಿಯ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದವರನ್ನು ಕಾಂಗ್ರೆಸ್ ನಾಯಕಿ ಮಂಜು ಲತಾ ಮೀನಾ ಎಂದು ಗುರುತಿಸಲಾಗಿದೆ. ಈಕೆ ಜೈಪುರದ ಮಹಿಳಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷೆಯೂ ಆಗಿದ್ದಾರೆ. ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಜನರಲ್ಲಿ ಸಾಕಷ್ಟು ಕೋಪವಿದೆ. ಬಿಜೆಪಿ ಮತಗಳನ್ನು ತಿರುಚುವ ಮೂಲಕ ಸರ್ಕಾರಗಳನ್ನು ರಚಿಸಿದೆ ಮತ್ತು ಚುನಾವಣಾ ಆಯೋಗವು ಅವರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಬಿಜೆಪಿ ಮತ್ತು ಚುನಾವಣಾ ಆಯೋಗದ ಮೇಲೆ ಮತ ಕಳ್ಳತನದ ಆರೋಪವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಇಲ್ಲಿಯವರೆಗೆ ಆಗಸ್ಟ್ 7, ಸೆಪ್ಟೆಂಬರ್ 18 ಮತ್ತು ನವೆಂಬರ್ 4 ರಂದು ಒಟ್ಟು ಮೂರು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದು, ಚುನಾವಣಾ ಆಯೋಗವನ್ನು ಮೋದಿ ಸರ್ಕಾರದ ಬಿ ಟೀಮ್ ಎಂದೂ ಅವರು ಕರೆದಿದ್ದಾರೆ. ರಾಹುಲ್ ಗಾಂಧಿ ಅಲ್ಲದೇ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಮತ ಚೋರಿ ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು
ಸಮಾವೇಶನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ಆತ್ಮವಿಶ್ವಾಸ ಕುಸಿದಿದೆ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಕೈಗಳು ನಡುಗುತ್ತಿವೆ ಬಿಜೆಪಿಗೆ ತನ್ನ ಕಳ್ಳತನ ಬಹಿರಂಗವಾಗಿದೆ ಎಂದು ತಿಳಿದಿದೆ ಎಂದು ಅವರು ದೂರಿದ್ದಾರೆ. ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್, ಸುಖ್‌ಬೀರ್ ಸಿಂಗ್ ಮತ್ತು ವಿವೇಕ್ ಜೋಶಿ ಅವರು ಬಿಜೆಪಿ ಜೊತೆ ಕೆಲಸ ಮಾಡುತ್ತಿದ್ದಾರೆ ಮತ್ತು ಪ್ರಧಾನಿ ಅವರಿಗಾಗಿ ಕಾನೂನನ್ನು ಬದಲಾಯಿಸಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ. ನಾವು ಈ ಕಾನೂನನ್ನು ಬದಲಾಯಿಸುತ್ತೇವೆ ಮತ್ತು ಈ ಜನರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅವರು ಬಿಜೆಪಿಯವರಲ್ಲ, ಭಾರತದ ಚುನಾವಣಾ ಆಯುಕ್ತರು ಎಂಬುದನ್ನು ಅವರು ನೆನಪಿನಲ್ಲಿಡಬೇಕು ಎಂದು ರಾಹುಲ್ ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ