
ನವದೆಹಲಿ: ಐಪಿಎಸ್ ಅಧಿಕಾರಿ ಡಿಐಜಿ ಹರಿಚರಣ್ ಸಿಂಗ್ ಭುಲ್ಲರ್ ವಿರುದ್ಧ ಭಾರಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐ ದಾಳಿ ನಡೆಸಿದ ವೇಳೆ ಭಾರಿ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ. ಬರೋಬ್ಬರಿ 5 ಕೋಟಿ ಮೊತ್ತದ ಹಣ, ಚಿನ್ನಾಭರಣ, ಐಷಾರಾಮಿ ಕಾರುಗಳು, ವಾಚ್‌ಗಳು ಸೇರಿದಂತೆ ಭಾರಿ ಮೊತ್ತದ ಅಕ್ರಮ ಸಂಪತ್ತನ್ನು ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ. ಹರಿಚರಣ್ ಸಿಂಗ್ ಪಂಜಾಬ್‌ನ ರೋಪರ್ ರೇಂಜ್‌ನಲ್ಲಿ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಕೆಲಸ ಮಾಡುತ್ತಿದ್ದರು. ಭಾರಿ ಮೊತ್ತದ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
2009ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಡಿಐಜಿ ಹರ್‌ಚರಣ್ ಸಿಂಗ್ ಭುಲ್ಲರ್ ಮತ್ತು ಅವರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಕೃಷ್ಣ ಎಂದು ಗುರುತಿಸಲಾದ ಖಾಸಗಿ ವ್ಯಕ್ತಿಯನ್ನು ಸಿಬಿಐ ಬಂಧಿಸಿದೆ. ಸ್ಥಳೀಯ ಉದ್ಯಮಿಯೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಇತ್ಯರ್ಥಗೊಳಿಸಲು ಮತ್ತು ಮಾಸಿಕವಾಗಿ ಹಣ ಪಾವತಿ ಮಾಡುವಂತೆ ಕೇಳಲು ಈ ಮಧ್ಯವರ್ತಿಯನ್ನು ಹರ್‌ಚರಣ್ ಸಿಂಗ್ ಬಳಸಿಕೊಂಡಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆ ಸಿಬಿಐ ದಾಳಿ ನಡೆಸಿ ಬಂಧಿಸಿದೆ.
ಹಫ್ತಾದಂತೆ ಪ್ರತಿ ತಿಂಗಳು ಪಾವತಿ ಮಾಡದಿದ್ದರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ
ಈ ಘಟನೆಗೆ ಸಂಬಂಧಿಸಿದಂತೆ ಗುರುವಾರ ದೂರು ದಾಖಲಾಗಿತ್ತು. ಪಂಜಾಬ್‌ನ ಫತೇಘರ್ ಸಾಹಿಬ್‌ನಲ್ಲಿರುವ ಆಕಾಶ್ ಬಟ್ಟಾ ಎಂಬ ಸ್ಕ್ರ್ಯಾಪ್ ವ್ಯಾಪಾರಿ ಐದು ದಿನಗಳ ಹಿಂದೆ ಲಿಖಿತ ದೂರು ನೀಡಿದ ನಂತರ ಸಿಬಿಐ ಈ ಪ್ರಕರಣ ದಾಖಲಿಸಿತ್ತು. ಡಿಐಜಿ ಭುಲ್ಲರ್ ಅವರು ಆರಂಭದಲ್ಲಿ ಲಂಚವಾಗಿ 8 ಲಕ್ಷ ರೂ.ಗಳನ್ನು ಪಾವತಿಸದಿದ್ದರೆ, ನಂತರ ಮಾಸಿಕವಾಗಿ ಹಣ ಸೆಟಲ್ ಮಾಡದಿದ್ದರೆ ತಮ್ಮ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಸುಳ್ಳು ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರುದಾರ ಆಕಾಶ್ ಬಟ್ಟಾ ಆರೋಪಿಸಿದ್ದಾರೆ.
ಸಿಬಿಐನ ಎಫ್‌ಐಆರ್ ಪ್ರಕಾರ ಭುಲ್ಲರ್ ತಮ್ಮ ಸಹಚರನಾದ ಕೃಷ್ಣ ಮೂಲಕ ಲಂಚ ನೀಡುವಂತೆ ಒತ್ತಾಯಿಸಿದ್ದಲ್ಲದೇ ಇದಕ್ಕಾಗಿ ಅವರು ಪದೇ ಪದೇ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಒಂದು ಸಂಭಾಷಣೆಯಲ್ಲಿ, ಸಹಚರ ಕೃಷ್ಣ ಆಗಸ್ಟ್‌ನಲ್ಲಿ ಪೇಮೆಂಟ್ ಮಾಡಿಲ್ಲ, ಸೆಪ್ಟೆಂಬರ್‌ನಲ್ಲಿ ಪೇಮೆಂಟ್ ಮಾಡಿಲ್ಲ ಎಂದು ಹೇಳುವುದನ್ನು ಕೇಳಬಹುದು.
8 ಲಕ್ಷ ಡೀಲ್ ವೇಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಬಿದ್ದ ಮಧ್ಯವರ್ತಿ ಕೃಷ್ಣ
ಈ ಬಗ್ಗೆ ಖಚಿತವಾದ ನಂತರ ಸಿಬಿಐ ಅಧಿಕಾರಿಗಳು ಚಂಡೀಗಢದ ಸೆಕ್ಟರ್ 21 ರಲ್ಲಿ ಐಪಿಎಸ್ ಅಧಿಕಾರಿಗೆ ಬಲೆ ಬೀಸಿದೆ. ಕಾರ್ಯಾಚರಣೆಯ ಸಮಯದಲ್ಲಿ, ಡಿಐಜಿ ಪರವಾಗಿ ದೂರುದಾರನಿಂದ 8 ಲಕ್ಷ ರೂ.ಗಳನ್ನು ಸ್ವೀಕರಿಸುವಾಗ ಕೃಷ್ಣನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯಲಾಗಿದೆ. ಈ ಹಣ ನೀಡಿದ ನಂತರ ದೂರುದಾರ ಮತ್ತು ಡಿಐಜಿ ನಡುವೆ ಕರೆ ಮಾಡಿಸಿದಾಗ ಇದರಲ್ಲಿ ಐಪಿಎಸ್ ಅಧಿಕಾರಿ ಹಣ ಪಾವತಿಯನ್ನು ಸ್ವೀಕರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಇಬ್ಬರೂ ತಮ್ಮ ಕಚೇರಿಗೆ ಭೇಟಿ ನೀಡುವಂತೆ ಅವರು ಸೂಚಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಾಕ್ಷ್ಯದ ಆಧಾರದ ಮೇಲೆ ಕಾರ್ಯನಿರ್ವಹಿಸಿದ ಸಿಬಿಐ ತಂಡವು ಡಿಐಜಿ ಭುಲ್ಲರ್ ಅವರನ್ನು ಮೊಹಾಲಿಯಲ್ಲಿರುವ ಅವರ ಕಚೇರಿಯಲ್ಲಿ ಬಂಧಿಸಿದೆ.
ಸಿಬಿಐ ಅಧಿಕಾರಿಗಳನ್ನೇ ಬೆಚ್ಚಿಬೀಳಿಸುವಂತೆ ಮಾಡ್ತು ಐಪಿಎಸ್ ಅಧಿಕಾರಿಯ ಅಕ್ರಮ ಆಸ್ತಿ
ಬಂಧನಗಳ ನಂತರ, ಸಿಬಿಐ ಅಧಿಕಾರಿಗಳ ತಂಡ ಅಧಿಕಾರಿಗೆ ಸಂಬಂಧಿಸಿದ ರೋಪರ್, ಮೊಹಾಲಿ ಮತ್ತು ಚಂಡೀಗಢದಲ್ಲಿರುವ ಅನೇಕ ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿದ್ದು, ಆ ಸ್ಥಳದಲ್ಲಿ ಸರಿಸುಮಾರು 5 ಕೋಟಿ ರೂ. ನಗದು (ಎಣಿಕೆ ಇನ್ನೂ ನಡೆಯುತ್ತಿದೆ). 1.5 ಕೆಜಿ ಚಿನ್ನ ಮತ್ತು ಆಭರಣಗಳು, ಪಂಜಾಬ್‌ನಾದ್ಯಂತ ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು, ಎರಡು ಐಷಾರಾಮಿ ವಾಹನ ಮರ್ಸಿಡಿಸ್ ಮತ್ತು ಆಡಿ ಕಾರುಗಳ ಕೀ, 22 ಅತ್ಯಾಧುನಿಕ ವಾಚ್‌ಗಳು, ಲಾಕರ್ ಕೀಗಳು ಮತ್ತು 40 ಲೀಟರ್ ವಿದೇಶದಿಂದ ಆಮದು ಮಾಡಿಕೊಂಡ ಮದ್ಯ, ಡಬಲ್ ಬ್ಯಾರೆಲ್ ಶಾಟ್‌ಗನ್, ಪಿಸ್ತೂಲ್, ರಿವಾಲ್ವರ್ ಮತ್ತು ಏರ್‌ಗನ್ ಸೇರಿದಂತೆ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಮಧ್ಯವರ್ತಿ ಕೃಷ್ಣ ಅವರ ನಿವಾಸದಿಂದ ಸಿಬಿಐ ಹೆಚ್ಚುವರಿಯಾಗಿ 21 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ. ಭುಲ್ಲರ್ ಮತ್ತು ಕೃಷ್ಣ ಇಬ್ಬರನ್ನೂ ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ತಿಗಳ ಪೂರ್ಣ ಪ್ರಮಾಣ ಮತ್ತು ಸಂಭಾವ್ಯ ಹಣ ವರ್ಗಾವಣೆ ಸಂಪರ್ಕಗಳನ್ನು ನಿರ್ಧರಿಸಲು ಹೆಚ್ಚಿನ ಶೋಧ ಮತ್ತು ತನಿಖೆಗಳು ನಡೆಯುತ್ತಿವೆ.
ಡಿಐಜಿ ಹಂತದ ಅಧಿಕಾರಿಗಳಿಗೆ ಅಂದಾಜು ಒಟ್ಟು ಸಂಬಳ ತಿಂಗಳಿಗೆ ₹1,47,000 ರಿಂದ ₹2,64,523(ಭತ್ಯೆಯನ್ನು ಅವಲಂಬಿಸಿ) ಇರುತ್ತದೆ. ಇಷ್ಟೊಂದು ದುಬಾರಿ ಮೊತ್ತದ ವೇತನ ಬರುತ್ತಿದ್ದರೂ ದಂಧೆಗಿಳಿದು ಬಡಜನರ ಜೀವ ಹಿಂಡುವಂತಹ ಭ್ರಷ್ಟ ಅಧಿಕಾರಿಗಳಿಗೆ ಜೀವಮಾನ ಪೂರ್ತಿ ನೆನಪಿಡುವಂತಹ ಕಠಿಣ ಶಿಕ್ಷೆ ಆಗಬೇಕಿದೆ.
ಇದನ್ನೂ ಓದಿ: ಸ್ವದೇಶಿ ನಿರ್ಮಿತ ಯುದ್ಧ ಪ್ಯಾರಾಚೂಟ್ 32,000 ಅಡಿ ಎತ್ತರದಲ್ಲಿ ಯಶಸ್ವಿ ಪರೀಕ್ಷೆ
ಇದನ್ನೂ ಓದಿ: ತಲುಪಲೇ ಇಲ್ಲ ಮಗಳು ಕಳುಹಿಸಿದ ಮೆಸೇಜ್: ಅಮ್ಮನಿಗೆ ಕಳುಹಿಸಿದ ಕೊನೆ ಸಂದೇಶ ಹಂಚಿಕೊಂಡು ಕಣ್ಣೀರಿಟ್ಟ ಮಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ