
- ಆಡಳಿತ, ವಿಪಕ್ಷ ವಿರುದ್ಧ ಆಕ್ರೋಶ ಎದ್ದಿರುವ ಪ್ರತಿಬಿಂಬ ಇದು: ಪ್ರಿಯಾಂಕ ಚತುರ್ವೇದಿ
ನವದೆಹಲಿ (ಮೇ.22): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್ ಅವರು ಕೆಲವು ನಕಲಿ ಪದವಿ ಪಡೆದ ಯುವಕರನ್ನು ಜಿರಳೆಗಳು ಎಂದು ಕರೆದಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜೆನ್‌ಝೀಗಳಿಂದ (ಯುವಕರಿಂದ) ಹುಟ್ಟಿಕೊಂಡಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಗೆ (ಸಿಜೆಪಿ) ಕೆಲವು ವಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಆದರೆ ಬಿಜೆಪಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಟಿಎಂಸಿ ನಾಯಕರಾದ ಮಹುವಾ ಮೊಯಿತ್ರಾ, ಕೀರ್ತಿ ಆಜಾದ್, ಎಸ್‌ಪಿ ನಾಯಕ ಅಖಿಲೇಶ್ ಯಾದವ್, ವಕೀಲ ಪ್ರಶಾಂತ್ ಭೂಷಣ್, ಡಿಎಂಕೆ ನಾಯಕಿ ಕನಿಮೋಳಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಬೆಂಬಲ ವ್ಯಕ್ತಪಡಿಸಿದವರು. ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.
‘ಒಂದು ಸೋಷಿಯಲ್ ಮೀಡಿಯಾಗೆ ಇಷ್ಟು ಜನರು ಬೆಂಬಲ ಸೂಚಿಸಿರುವುದು ಕೇವಲ ‘ಕೀಟ ಸಂದೇಶ’ ಅಲ್ಲ. ಬೇರೇನೋ ಹೇಳಲು ದೇಶ ಯತ್ನಿಸುತ್ತಿದೆ. ಅದನ್ನು ನಾವು ಕೇಳಬೇಕು’ ಎಂದು ಡಿಎಂಕೆ ನಾಯಕಿ ಕನಿಮೋಳಿ ಹೇಳಿದ್ದಾರೆ.
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮಾತನಾಡಿ, ‘ಭಾರತಕ್ಕೆ ಕ್ರಾಂತಿಯ ಅಗತ್ಯವಿದೆ ಮತ್ತು ಜೆನ್‌ಝೀಗಳು ಬದಲಾವಣೆಗೆ ನಾಯಕತ್ವ ವಹಿಸಲು ಪ್ರಾರಂಭಿಸಿದ್ದಾರೆ’ ಎಂದಿದ್ದಾರೆ.
ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿ, ‘ಬಿಜೆಪಿ ವರ್ಸಸ್ ಸಿಜೆಪಿ’ ಎಂದಿದ್ದಾರೆ.
ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, ‘ಯುವಕರ ಆಕ್ರೋಶ ಬಿಜೆಪಿ ಮೇಲಿದೆ ಎಂಬುದು ಸ್ಪಷ್ಟ. ಆದರೆ ಸಿಜೆಪಿ ಕಲ್ಪನೆಯು ಬಿರುಗಾಳಿಯಂತೆ ಎದ್ದಿರುವ ಹಿಂದೆ ವಿಪಕ್ಷಗಳ ಬಗ್ಗೆ ಜನರಿಗೆ ಇರುವ ಅಸಮಾಧಾನವೂ ಕಾರಣ. ವಿಪಕ್ಷಗಳ ಬಗ್ಗೆ ಹೆಚ್ಚಿನ ಯುವಕರು ಭರವಸೆ ಕಳೆದುಕೊಳ್ಳುತ್ತಿರುವ ಕಾರಣ ಪ್ರತ್ಯೇಕ ಆಂದೋಲನ ಆರಂಭಿಸಿದಂತಿದೆ’ ಎಂದಿದ್ದಾರೆ.
ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ನಟರಾದ ಕೊಂಕಣ ಸೇನ್ ಶರ್ಮಾ ಮತ್ತು ಇಶಾ ಗುಪ್ತಾ ಸೇರಿದಂತೆ ಸೆಲೆಬ್ರಿಟಿಗಳು ಸಹ ಸಿಜೆಪಿಯ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ.
ನವದೆಹಲಿ:ಕಾಕ್ರೋಚ್ ಜನತಾ ಪಾರ್ಟಿ ಟ್ರೇಡ್‌ಮಾರ್ಕ್‌ಗೆ 3 ಅರ್ಜಿ ಸಲ್ಲಿಕೆ ಆಗಿವೆ. ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಗೆ ‘COCKROACH JANTA PARTY’ ಹಾಗೂ ‘Cockroach Janta Party’ ಎಂಬ ಟ್ರೇಡ್‌ಮಾರ್ಕ್‌ಗಾಗಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇನ್ನು COCKROACH JANTA PARTY ಎಂಬ ಬೇರೆ ಕಂಪನಿ ಕೂಡ ಅರ್ಜಿ ಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ