
ನವದೆಹಲಿ(ಫೆ.27): ಮಾ.1ರಿಂದ 60 ವರ್ಷ ಮೇಲ್ಪಟ್ಟನಾಗರಿಕರು ಹಾಗೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಗೆ ತುತ್ತಾದ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆಯನ್ನು ನೀಡಲು ಭಾರತ ಸಜ್ಜಾಗಿದೆ. ಲಸಿಕೆ ಫಲಾನುಭವಿಗಳಿಗೆ ಲಸಿಕಾ ಕೇಂದ್ರದ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅರ್ಹ ಫಲಾನುಭವಿಗಳು ನಿಗದಿತ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ.
ಕೋ- ವಿನ್ 2.0 ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕವೂ ಫಲಾನುಭವಿಗಳು ಸ್ವಯಂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಆರೋಗ್ಯ ಸೇತು ಆ್ಯಪ್ ಹಾಗೂ ಇತರ ಐಟಿ ಅಪ್ಲಿಕೇಶನ್‌ಗಳ ಮೂಲಕ ಕೋವಿಡ್-19 ಲಸಿಕೆ ಕೇಂದ್ರಗಳನ್ನು ಹೊಂದಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮಾಹಿತಿ, ಲಸಿಕೆ ಪಡೆಯುವ ಸಮಯ ಹಾಗೂ ದಿನಾಂಕವನ್ನು ತಿಳಿದುಕೊಳ್ಳಬಹುದಾಗಿದೆ. ಫಲಾನುವಿಗಳು ತಮ್ಮ ಆಯ್ಕೆಯ ಲಸಿಕೆ ವಿತರಣೆ ಕೇಂದ್ರಗಳನ್ನು ಆಯ್ದುಕೊಳ್ಳಲು ಹಾಗೂ ಸಮಯ ಪೂರ್ವ ನಿಗದಿಗೂ ಅವಕಾಶ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ವೇಳೆ ಲಸಿಕೆ ನೀಡಿಕೆ ಕುರಿತಂತೆ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಈ ವೇಳೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೋ-ವಿನ್ ಆ್ಯಪ್‌ನ 2.0 ಆವೃತ್ತಿಯ ಬಗ್ಗೆ ಸಂಪೂರ್ಣ ಮಾಹಿತ ನೀಡಲಾಗಿದೆ.
ಸರ್ಕಾರಿ ಲಸಿಕೆ ವಿತರಣೆ ಕೇಂದ್ರಗಳಲ್ಲಿ ಕೊರೋನಾ ಲಸಿಕೆ ಉಚಿತವಾಗಿ ಲಭ್ಯವಾಗಲಿದೆ. ಆದರೆ, ಖಾಸಗಿ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಲಸಿಕೆಯ ಪಡೆಯಲು ಬಯಸುವವರು ನಿಗದಿತ ಶುಲ್ಕವನ್ನು ಪಾವತಿಸಬೇಕಿದೆ. ಮೊದಲ ಹಂತದ ಲಸಿಕೆ ಅಭಿಯಾನದ ವೇಳೆ ಲಸಿಕೆ ಪಡೆಯಲು ಸಾಧ್ಯವಾಗದೇ ಇದ್ದ ಆರೋಗ್ಯ ಕಾರ್ಯಕರ್ತರು ಕೂಡ ತಮಗೆ ಬೇಕಾದ ಲಸಿಕಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಎಲ್ಲೆಲ್ಲಿ ಲಸಿಕೆ ಲಭ್ಯ?:
ಸರ್ಕಾರಿ ಆರೋಗ್ಯ ಸೇವಾ ಕೇಂದ್ರಗಳಾದ ಆಯುಷ್ಮಾನ್ ಭಾರತ್ ಆರೋಗ್ಯ ಕೇಂದ್ರ, ಉಪ ವಿಭಾಗೀಯ ಆಸ್ಪತ್ರೆಗಳು, ಜಿಲ್ಲಾ ಮತ್ತು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ, ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆ ಮತ್ತು ರಾಜ್ಯದ ಆರೋಗ್ಯ ವಿಮಾ ಯೋಜನೆಗಳಲ್ಲಿ ನೋಂದಾಯಿಸಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ ಕೇಂದ್ರಗಳನ್ನು ತೆರೆಯಬೇಕು ಎಂದು ಸೂಚಿಲಾಗಿದೆ.
ಏನೇನು ದಾಖಲೆ ಬೇಕು?:
ಲಸಿಕೆ ಪಡೆಯುವ ಎಲ್ಲಾ ಫಲಾನುಭವಿಗಳು ಆಧಾರ್ ಕಾರ್ಡ್, ಎಲೆಕ್ಟೋರಲ್ ಫೋಟೋ ಐಡಿ ಕಾರ್ಡ್‌ನಂತಹ ಭಾವಚಿತ್ರ ಇರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ನೋಂದಣಿಯ ಸಂದರ್ಭದಲ್ಲಿ ಒದಗಿಸಬೇಕು. ಅದೇ ರೀತಿ ಆನ್‌ಲೈನ್ ಮೂಲಕ ನೋಂದಣಿಗೂ ಭಾವ ಚಿತ್ರ ಇರುವ ಗುರುತಿನ ಚೀಟಿ ಕಡ್ಡಾಯಾಗಿದೆ. ನೋಂದಾಯಿತ ಫಾಲನುಭವಿಗಳನ್ನು ಆದ್ಯತಾ ಗುಂಪುಗಳಾಗಿ ವಿಂಗಡಿಸಿ ಲಸಿಕೆಯ ದಿನಾಂಕವನ್ನು ನೀಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ