ಅಸ್ಸಾಂನ ಹಲವು ಜಿಲ್ಲೆಗಳಲ್ಲೂ ಹಿಂದೂಗಳು ಅಲ್ಪಸಂಖ್ಯಾತರು

By Anusha KbFirst Published Mar 29, 2022, 12:19 PM IST
Highlights
  • ಜಿಲ್ಲಾವಾರು ಕೂಡ ಅಲ್ಪಸಂಖ್ಯಾತರ ಘೋಷಿಸಬೇಕು
  • ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು
  • ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಸರ್ಮಾ ಹೇಳಿಕೆ

ಗುವಾಹಟಿ(ಮಾ.29): ನಿನ್ನೆಯಷ್ಟೇ ಕೇಂದ್ರ ಸರ್ಕಾರ ದೇಶದ ಹಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಎಂಬ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಿತ್ತು. ಈ ಮಧ್ಯೆ ಅಸ್ಸಾಂನ ಹಲವು ಜಿಲ್ಲೆಗಳಲ್ಲೂ ಕೂಡ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಸರ್ಮಾ ಅವರು ಹೇಳಿದ್ದಾರೆ. ಈಶಾನ್ಯ ರಾಜ್ಯವಾದ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿರುವುದರಿಂದ ರಾಜ್ಯದಲ್ಲಿ ಮುಸ್ಲಿಂ ಸಮುದಾಯವು ಇನ್ನು ಮುಂದೆ ಅಲ್ಪಸಂಖ್ಯಾತರಾಗಿರುವ ಅರ್ಹತೆ ಹೊಂದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿಲ್ಲದಿರುವಾಗ ಅವರನ್ನು ಅಲ್ಪಸಂಖ್ಯಾತರೆಂದು ಘೋಷಿಸಬಹುದು. ಆದರೆ ಜಿಲ್ಲೆಗಳಲ್ಲೂ ಹಿಂದೂಗಳು ಬಹುಸಂಖ್ಯಾತರಾಗಿಲ್ಲದಿರುವಾಗ ಆ ಜಿಲ್ಲೆಯಲ್ಲಿ ಹಿಂದೂಗಳನ್ನೂ ಅಲ್ಪಸಂಖ್ಯಾತರೆಂದು ಘೋಷಿಸಬೇಕು ಎಂದು ನಾನು ವಿನಂತಿಸುತ್ತೇನೆ. ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಹಿಂದೂಗಳು ನಿರಾಯಾಸವಾಗಿ ಅಲ್ಪಸಂಖ್ಯಾತರಾಗಿದ್ದಾರೆ. ಅವುಗಳಲ್ಲಿ ಕೆಲವು ಜಿಲ್ಲೆಗಳಲ್ಲಂತೂ 5,000 ಕ್ಕಿಂತ ಕಡಿಮೆ ಹಿಂದೂಗಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ  ಸಿಎಂ ಹೇಳಿದ್ದಾರೆ.

Assam ಮುಸ್ಲಿಮರು ಅಲ್ಪಸಂಖ್ಯಾತರಲ್ಲ, ಬಹುಸಂಖ್ಯಾತರಾಗಿರುವ ಕಾರಣ ಇತರರ ರಕ್ಷಣೆ ಮಾಡಬೇಕು

ಮುಸ್ಲಿಂ ಸಮುದಾಯವು ಅಸ್ಸಾಂನಲ್ಲಿ ಬಹುಸಂಖ್ಯಾತವಾಗಿದೆ ಮತ್ತು ದೊಡ್ಡ ಸಮುದಾಯವಾಗಿದೆ. ಇದು ಕೇವಲ ನನ್ನ ಅಭಿಪ್ರಾಯವಲ್ಲ. ಇದನ್ನು ಅಂಕಿಅಂಶಗಳೇ ಹೇಳುತ್ತಿವೆ. ಅಂಕಿ ಅಂಶಗಳ ಪ್ರಕಾರ, ಮುಸ್ಲಿಮರು ಅಸ್ಸಾಂನ ಅತ್ಯಂತ ದೊಡ್ಡ ಸಮುದಾಯವಾಗಿದೆ ಎಂದು ಸರ್ಮಾ ಹೇಳಿದರು. ಈ ತಿಂಗಳ ಆರಂಭದಲ್ಲಿ, ಅಧಿಕಾರದೊಂದಿಗೆ ಜವಾಬ್ದಾರಿ ಬರುತ್ತದೆ ಎಂದು ಶರ್ಮಾ ಹೇಳಿದ್ದರು. ಮುಸ್ಲಿಮರು ಅಸ್ಸಾಂನ ಜನಸಂಖ್ಯೆಯಲ್ಲಿ 35 ಪ್ರತಿಶತದಷ್ಟು ಇರುವುದರಿಂದ, ಇಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವುದು ಅವರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದರು.

ಅಸ್ಸಾಂನಲ್ಲಿ ಸರಿಸುಮಾರು ನಾಲ್ಕು ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಯು ಸ್ಥಳೀಯ ಅಸ್ಸಾಮಿ (Assamese) ಭಾಷೆ ಮಾತನಾಡುವ ಮುಸ್ಲಿಮರಾಗಿದ್ದಾರೆ ಮತ್ತು ಬಹುಪಾಲು ಬಂಗಾಳಿ (Bengali) ಭಾಷೆ ಮಾತನಾಡುವವರಾಗಿದ್ದಾರೆ. ಅಸ್ಸಾಂನ ಮುಖ್ಯಮಂತ್ರಿ ಈ ಹಿಂದೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯನ್ನು ಪರಿಶೀಲಿಸಲು ಕರೆ ನೀಡಿದ್ದರು ಮತ್ತು ಹೊಸ ನೋಂದಾವಣಿಗೆ ಒತ್ತಾಯಿಸಿದರು.

Minority Status ದೇಶದ 10 ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರು, ಸುಪ್ರೀಂಗೆ ಕೇಂದ್ರದ ವರದಿ ಸಲ್ಲಿಕೆ!
 

ಹಳೆಯ ರಾಷ್ಟ್ರೀಯ ನಾಗರಿಕರ ನೋಂದಣಿ(NRC)ಯನ್ನು ಪರಿಶೀಲಿಸಬೇಕು ಮತ್ತು ಹೊಸದಾಗಿ ಮಾಡಬೇಕು ಎಂದು ನಾವು ಮೊದಲೇ ಹೇಳಿದ್ದೆವು. ಆಲ್ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟದೊಂದಿಗೆ (ಎಎಎಸ್‌ಯು) ನಮ್ಮ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಎನ್‌ಆರ್‌ಸಿ ಮತ್ತೆ ಮಾಡಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು. 3.3 ಕೋಟಿ ಅರ್ಜಿದಾರರಲ್ಲಿ 19.06 ಲಕ್ಷಕ್ಕೂ ಹೆಚ್ಚು ಜನರನ್ನು ಆಗಸ್ಟ್ 2019 ರಲ್ಲಿ ಪ್ರಕಟಿಸಲಾದ NRC ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

ಹಿಂದೂಗಳು (Hindus) ಬಹುಸಂಖ್ಯಾತರಾಗಿಲ್ಲದೇ ಇದ್ದಲ್ಲಿ, ಅಲ್ಪಸಂಖ್ಯಾತರಿಗೆ (minorities ) ಮೀಸಲಾದ ಹಲವಾರು ಕೇಂದ್ರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ರಾಜ್ಯಗಳು ಹಿಂದುಗಳಿಗೂ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಬಹುದು ಎಂದು ಕೇಂದ್ರ ಸರ್ಕಾರ (Central Government) ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ. ಸುಪ್ರೀಂ ಕೋರ್ಟ್ ಗೆ ನೀಡಿರುವ ಸಲ್ಲಿಕೆಯ ಪ್ರಕಾರ, ದೇಶದಲ್ಲಿ 10 ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಈ ರಾಜ್ಯಗಳಲ್ಲಿ ಹಿಂದುಗಳನ್ನು ಅಲ್ಪಸಂಖ್ಯಾತರೆಂದು ಘೋಷಣೆ ಮಾಡುವುದು ಸಂವಿಧಾನ ಬಾಹಿರವಲ್ಲ ಎಂದು ತಿಳಿಸಿದೆ.

ಅಲ್ಪಸಂಖ್ಯಾತರಾಗಿರುವ ರಾಜ್ಯಗಳಲ್ಲಿನ ಹಿಂದೂಗಳನ್ನು ಸಂಬಂಧಿತ ರಾಜ್ಯ ಸರ್ಕಾರಗಳು ಆರ್ಟಿಕಲ್ 29 ಮತ್ತು 30 ರ ಉದ್ದೇಶಗಳಿಗಾಗಿ ಅಲ್ಪಸಂಖ್ಯಾತರೆಂದು ಘೋಷಣೆ ಮಾಡಬಹುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್, ಲಕ್ಷದ್ವೀಪ, ಲಡಾಖ್, ಕಾಶ್ಮೀರ ಇತ್ಯಾದಿ ರಾಜ್ಯಗಳು ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೋರಿದೆ.  ಟಿಎಂಎ ಪೈ ಪ್ರಕರಣ ಮತ್ತು ಇತರ ಪ್ರಕರಣಗಳಲ್ಲಿನ ಪೂರ್ವ ನಿದರ್ಶನಗಳನ್ನು ಉಲ್ಲೇಖಿಸಿದ ಕೇಂದ್ರವು, ರಾಜ್ಯ ಸರ್ಕಾರದಲ್ಲಿ ಇಡೀ ಜನಸಂಖ್ಯೆಯನ್ನು ಉಲ್ಲೇಖಿಸಿ ಅಲ್ಪಸಂಖ್ಯಾತರನ್ನು ನಿರ್ಧರಿಸಲಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

click me!