ಗಡಿಯಿಂದ ಹಿಂದೆ ಸರಿದಿಲ್ಲ ಚೀನಾ, ಲಡಾಖ್ ಪ್ರಾಂತ್ಯದಲ್ಲಿ 40 ಸಾವಿರ ಸೈನಿಕರ ನಿಯೋಜನೆ!

By Suvarna NewsFirst Published Jul 23, 2020, 2:59 PM IST
Highlights

ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಚೀನಾ ಗಡಿ ಖ್ಯಾತೆಗೆ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಹಲವು ಸುತ್ತಿನ ಮಾತುಕತೆ ಮೂಲಕ ಉಭಯ ದೇಶಗಳು ಗಡಿಯಿಂದ ಸೇನೆ ಹಿಂತೆಗೆದುಕೊಳ್ಳಲು ಒಪ್ಪಿತ್ತು. ಮಾತುಕತೆಯಲ್ಲಿ ತಲೆಯಾಡಿಸಿದ ಚೀನಾ, ಲಡಾಖ್ ಪ್ರಾಂತ್ಯದಿಂದ ಹಿಂದೆ ಸರಿದಿಲ್ಲ. ಇದೀಗ ಬರೋಬ್ಬರಿ 40,000 ಸೈನಿಕರನ್ನು ನಿಯೋಜಿಸುವ ಮೂಲಕ ಚೀನಾ ಮತ್ತೆ ಕಾಲು ಕೆರೆದು ನಿಂತಿದೆ.

ಲಡಾಖ್(ಜು.23): ಗಡಿ ಸಂಘರ್ಷಕ್ಕೆ ಅಂತ್ಯ ಹಾಡಲು ಭಾರತ ನಡೆಸಿದ ಪ್ರಯತ್ನಗಳೆಲ್ಲ ವ್ಯರ್ಥವಾದಂತೆ ತೋರುತ್ತಿದೆ. ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಚೀನಾ ಬರೋಬ್ಬರಿ 40,000 ಸೈನಿಕರನ್ನು ನಿಯೋಜಿಸಿದೆ. ಇಷ್ಟೇ ಅಲ್ಲ ಫಿರಂಗಿ, ಭಾರಿ ಪ್ರಮಾಣ ಶಸ್ತ್ರಾಸ್ತ್ರ, ಯುದ್ಧ ವಿಮಾನ ಸೇರಿದಂತೆ ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಸೇನಾ ವರದಿಗಳು ತಿಳಿಸಿವೆ.

ಗಡೀಲಿ ಶಾಂತಿ ಸ್ಥಾಪನೆ: ಚೀನಾಕ್ಕೆ ಭಾರತದ 15 ಗಂಟೆಗಳ ನೀತಿಪಾಠ!

ಚೀನಿ ಸೈನಿಕರ ಆಕ್ರಮ, ಗಡಿ ತಂಟೆ ಸೇರಿದಂತೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಅತ್ತ ಚೀನಾದ 35ಕ್ಕೂ ಸೈನಿಕರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದರು. ಹೀಗಾಗಿ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ಬೆನ್ನಲ್ಲೇ ಹಲವು ಸುತ್ತಿನ ಮಾತುಕತೆ ಮೂಲಕ ಪರಿಸ್ಥಿತಿ ಶಾಂತಗೊಳಿಸಲು ಭಾರತ ಮುಂದಾಗಿತ್ತು. ಇಷ್ಟೇ ಅಲ್ಲ ಚೀನಾ ಕೂಡ ಮಾತುಕತೆಯಲ್ಲಿ ಭಾರತ ಷರತ್ತಿಗೆ ತಲೆಯಾಡಿಸಿತ್ತು. 

ಜುಲೈ 15 ರಂದು ನಡೆದ ಅಂತಿಮ ಸುತ್ತಿನ ಮಾತುಕತೆಯಲ್ಲಿ ಶಾಂತಿ ಸ್ಥಾಪನೆಗೆ ಚೀನಾ ಮುಂದಾಗಬೇಕು. ಮೊಂಡುತನ ಬಿಟ್ಟು ಸೇನೆ ಹಿಂದೆಕ್ಕೆ ಕರೆಯಿಸಿಕೊಳ್ಳಬೇಕು ಎಂದು ಭಾರತ ಆಗ್ರಹಿಸಿತ್ತು. ಇದಕ್ಕೆ ತಲೆಯಾಡಿಸಿದ ಚೀನಾ ಇದೀಗ ಪೂರ್ವ ಲಡಾಖ್ ಗಡಿ ನಿಯಂತ್ರಣ ರೇಖೆಯಲ್ಲಿ ಸೈನಿಕರನ್ನು ನಿಯೋಜಿಸುವ ಮೂಲಕ ಮತ್ತೆ ಗಡಿ ನಿಯಮ ಉಲ್ಲಂಘಿಸಿದೆ.

click me!