
ಚತ್ತೀಸಘಡ(ಏ.08): ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ನಡೆದ ಅತೀ ಭೀಕರ ನಕ್ಸಲರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ CRPF ಕೋಬ್ರಾ ಕಮಾಂಡೋ ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ನಕ್ಸರ್ ಅಪಹರಣ ಮಾಡಿದ್ದರು. 100 ಗಂಟೆಗಳ ಬಳಿಕ ಇದೀಗ ರಾಕೇಶ್ವರ್ ಸಿಂಗ್ ಮನ್ಹಾಸ್ ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಗಾಯಗೊಂಡಿದ್ದ ಯೋಧನಿಗೆ ತನ್ನ ಪೇಟ ಬಳಸಿ ಸಹಾಯ ಮಾಡಿದ ಸಿಖ್ ಯೋಧ!
ರಾಕೇಶ್ವರ್ ಸಿಂಗ್ ಮನ್ಹಾಸ್ ಬಿಡುಗಡೆ ಸುದ್ದಿ ತಿಳಿಯುತ್ತಿದ್ದಂತೆ, ಕುಟುಂಬಸ್ಥರ ಸಂತಸ ವ್ಯಕ್ತಪಡಿಸಿದ್ದಾರೆ. ಬಿಡುಗಡೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಏಪ್ರಿಲ್ 3 ರಂದು ಚತ್ತೀಸಘಡದ ಬಿಜಾಪುರ್- ಸುಕ್ಮಾ ಅರಣ್ಯ ಪ್ರದೇಶದಲ್ಲಿ ಕಾರ್ಯಚರಣೆಗೆ ಇಳಿದ CRPF ಹಾಗೂ ನಕ್ಸಲ್ ನಿಗ್ರಹ ಪಡೆ 22 ವೀರ ಯೋಧರನ್ನು ಕಳೆದುಕೊಂಡಿತ್ತು. ವಾವೋವಾದಿಗಳ ಮೋಸದ ಬಲೆಗೆ ಬಿದ್ದ ವೀರ ಯೋಧರ ಮೇಲೆ ಸುಮಾರು 400ಕ್ಕೂ ಹೆಚ್ಚಿನ ಮಾವೋವಾದಿಗಳು ದಾಳಿ ನಡೆಸಿದ್ದರು. ಈ ಭೀಕರ ಕಾದಾಟದಲ್ಲಿ ರಾಕೇಶ್ವರ್ ಸಿಂಗ್ ಮನ್ಹಾಸ್ ಕಾಣೆಯಾಗಿದ್ದರು. ಬಳಿಕ ಸ್ಥಳೀಯ ಪತ್ರಕರ್ತನಿಗೆ ಅನಾಮಿಕ ಕರೆಯೊಂದು ಬಂದಿದ್ದು, ವಾವೋವಾದಿಗಳು ರಾಕೇಶ್ವರ್ ಸಿಂಗ್ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವುದಾಗಿ ಮಾಹಿತಿ ನೀಡಿದ್ದರು.
ನಾಪತ್ತೆಯಾಗಿರುವ ಯೋಧ ನಕ್ಸಲರ ಒತ್ತೆಯಾಳು? ಬಿಡಿಸಿಕೊಡುವಂತೆ ಪ್ರಧಾನಿಗೆ ಪುತ್ರಿ ಮನವಿ!
ಇತ್ತ ರಾಕೇಶ್ವರ್ ಪೋಷಕರು, ಪತ್ನಿ ಹಾಗೂ ಪುತ್ರಿ ಯೋಧನ ಬಿಡುಗಡೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದರು. ಪಾಕಿಸ್ತಾನ ಹಿಡಿತದಿಂದ ಯೋಧ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದಂತೆ ರಾಕೇಶ್ವರ್ ಸಿಂಗ್ ಅವರನ್ನು ಬಿಡುಗಡೆ ಮಾಡಿಕೊಡಿ ಎಂದು ಮನವಿ ಮಾಡಿದ್ದರು.
ಅಪಹೃತ ಯೋಧನ ಫೋಟೋ ಬಿಡುಗಡೆ ಮಾಡಿದ ನಕ್ಸಲರು!.
ಇನ್ನು ವಾವೋವಾದಿಗಳು ರಾಕೇಶ್ವರ್ ಸಿಂಗ್ ಮನ್ಹಾಸ್ ತಮ್ಮ ಹಿಡಿತದಲ್ಲಿರುವ ಫೋಟೋ ಒಂದನ್ನು ಬಿಡುಗಡೆ ಮಾಡಿತ್ತು. ಆದರೆ ಇದು ಹಳೇ ಫೋಟೋ ಅನ್ನೋ ವಾದವೂ ಎದ್ದಿತ್ತು. ಇದೀಗ ರಾಕೇಶ್ವರ್ ಸಿಂಗ್ ಮನ್ಹಾಸ್ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ