
ನವದೆಹಲಿ(ಮೇ.20): ಕಾಬ್ ಕಂಪನಿಗಳಾದ ಓಲಾ ಹಾಗೂ ಉಬರ್‌ಗೆ ನ್ಯಾಯಸಮ್ಮತವಲ್ಲದ ವ್ಯಾಪಾರ ಮಾಡಿ ಗ್ರಾಹಕರ ಹಕ್ಕುಗಳ ಉಲ್ಲಂಘನೆ ಮಾಡಿದ್ದಕ್ಕೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಶುಕ್ರವಾರ ನೋಟಿಸ್ ಕಳುಹಿಸಿದೆ.
ಓಲಾ ಹಾಗೂ ಉಬರ್ ವಿರುದ್ಧ ಕಳೆದ ಒಂದು ವರ್ಷಗಳಲ್ಲಿ ಸೇವೆಯಲ್ಲಿ ಲೋಪ ಹಾಗೂ ನ್ಯಾಯಸಮ್ಮತವಲ್ಲದ ವ್ಯಾಪಾರದಲ್ಲಿ ತೊಡಗಿರುವ ಕುರಿತು ಸಾಕಷ್ಟುದೂರುಗಳು ದಾಖಲಾಗಿದ್ದವು. ದೇಶಾದ್ಯಂತ ಓಲಾ ಹಾಗೂ ಉಬರ್ ಕ್ಯಾಬ್ ಬಳಕೆದಾರರು ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರು ಸಲ್ಲಿಸಿದ್ದರು. ಸೇವೆಯಲ್ಲಿ ಲೋಪದ ಬಗ್ಗೆ ಓಲಾ ವಿರುದ್ಧ ಶೇ. 54ರಷ್ಟುಹಾಗೂ ಉಬರ್ ವಿರುದ್ಧ ಶೇ. 64ರಷ್ಟುದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಎರಡು ಕಂಪನಿಗಳಿಗೆ ನೊಟೀಸ್ ಕಳುಹಿಸಲಾಗಿದೆ. ಈ ನೋಟಿಸ್‌ಗಳಿಗೆ ಪ್ರತಿಕ್ರಿಯೆ ನೀಡಲು ಎರಡೂ ಕಂಪನಿಗಳಿಗೆ 15 ದಿನಗಳ ಸಮಯಾವಕಾಶವನ್ನು ನೀಡಿಲಾಗಿದೆ ಎಂದು ಸಿಸಿಪಿಎ ಅಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ ಓಲಾ, ಉಬರ್, ಮೇರು, ರಾರಯಪಿಡೊ ಹಾಗೂ ಜುಗ್ನು ಮೊದಲಾದ ವಾಹನ ಸಂಚಾರ ಸೇವೆ ಒದಗಿಸುತ್ತಿರುವ ಕಂಪನಿಗಳ ಪ್ರತಿನಿಧಿಗಳ ಜೊತೆಗೆ ಸಭೆ ನಡೆಸಲಾಗಿದ್ದು, ನ್ಯಾಯಸಮ್ಮತವಾದ ರೀತಿಯಲ್ಲಿ ವ್ಯಾಪಾರ ನಡೆಸದಿದ್ದರೆ ಪ್ರಾಧಿಕಾರವು ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಸಿಪಿಎ ಎಚ್ಚರಿಸಿದೆ.
Ola EV ಓಲಾ ಎಲೆಕ್ಟ್ರಿಕ್ ಸ್ಕೂಟರ್ ರಿವರ್ಸಗೇರ್ ಎಡವಟ್ಟು, ವೃದ್ಧನ ತಲೆಗೆ 10 ಹೊಲಿಗೆ!
ಏನೇನು ದೂರು?
* ಚಾಲಕರೇ ಪ್ರಯಾಣಿಕರಿಗೆ ಬಲವಂತವಾಗಿ ರೈಡ್ ಕ್ಯಾನ್ಸಲ್ ಮಾಡುವಂತೆ ಒತ್ತಡ ಹಾಕುತ್ತಾರೆ.
* ಕೆಲವೊಮ್ಮೆ ಚಾಲಕರೇ ಕ್ಯಾನ್ಸಲ್ ಮಾಡಿದರೂ ರದ್ದತಿ ದಂಡ ಗ್ರಾಹಕರಿಗೆ ಬೀಳುತ್ತದೆ.
* ಕೆಲವು ಚಾಲಕರು ನಗದು ಮಾತ್ರ ಸ್ವೀಕರಿಸುವ, ಆನ್‌ಲೈನ್ ಪಾವತಿ ನಿರಾಕರಣೆ ಮಾಡುತ್ತಾರೆ.
* ಒಂದೇ ಗಮ್ಯ ಸ್ಥಳಗಳಿಗೆ ಬೇರೆ ಬೇರೆ ಗ್ರಾಹಕರಿಗೆ ಬೇರೆ ಬೇರೆ ದರ ವಿಧಿಸಲಾಗುತ್ತದೆ.
* ಬೇಡಿಕೆ ಹೆಚ್ಚಿದ ಸಮಯದಲ್ಲಿ ಸಜ್‌ರ್ ಪ್ರೈಸಿಂಗ್ ಹೆಸರಿನಲ್ಲಿ ಸಾಕಷ್ಟುಸುಲಿಗೆ ಮಾಡಲಾಗುತ್ತದೆ.
* ಒಟಿಪಿ ಇಲ್ಲದ ಅಗ್ರಿಗೇಟರ್ ಆ್ಯಪ್ ದುರ್ಬಳಕೆ ಮಾಡಿ ರೈಡ್ ಆರಂಭಿಸಿ ಚಾಲಕರೇ ಸುಲಿಗೆ ಮಾಡುತ್ತಾರೆ
ಪ್ರವಾಸಿಗನ ಅರ್ಧ ದಾರಿಯಲ್ಲಿ ಬಿಟ್ಟು ಹೋದ ಓಲಾ ಚಾಲಕ
ಓಲಾ ಕ್ಯಾಬ್ ಬುಕ್ ಮಾಡಿ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ವ್ಯಕ್ತಿಯೋರ್ವನನ್ನು ಓಲಾ ಚಾಲಕ ಮಧ್ಯದಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ. ಬೆಂಗಳೂರಿನ ವಿಕಾಸ್ ಗೌಡ ಎಂಬವರು ತಮಗಾದ ಈ ಕರಾಳ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಬುಕ್ ಮಾಡುವಾಗ ಮತ್ತು ಅದರಲ್ಲಿ ಪ್ರಯಾಣಿಸಿದ ಅನೇಕರಿಗೆ ಹಲವು ರೀತಿಯ ಕಹಿ ಅನುಭವಗಳಾಗಿದೆ. ಅಗತ್ಯ ಸಮಯದಲ್ಲಿ ನಿರಾಕರಿಸುವುದರಿಂದ ಹಿಡಿದು ಪಾವತಿ ಸಂಬಂಧಿತ ಸಮಸ್ಯೆಗಳವರೆಗೆ ಅನೇಕರು ತಮ್ಮ ಕಹಿ ಘಟನೆಗಳನ್ನು ಹೇಳಿಕೊಂಡಿದ್ದಾರೆ. ಈಗ ಬೆಂಗಳೂರಿನ ವಿಕಾಸ್ ಗೌಡ ಎಂಬ ಟ್ವಿಟರ್ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ವೆಚ್ಚ ಎಷ್ಟೇ ಇರಲಿ ಓಲಾ ಕ್ಯಾಬ್ ಬುಕ್ ಮಾಡುವುದನ್ನು ನಿಲ್ಲಿಸಿ ಎಂದು ವಿಕಾಸ್ ಗೌಡ ಮನವಿ ಮಾಡಿದ್ದಾರೆ. ತಮ್ಮ ಆತ್ಮೀಯರ ಪೋಷಕರೊಂದಿಗೆ ಮೈಸೂರಿಗೆ ಹಿಂದಿರುಗಲು ಓಲಾ ಕ್ಯಾಬ್ ಬುಕ್ ಮಾಡಿದ್ದೆ. ಆದರೆ ಒಂದೂವರೆ ಗಂಟೆ ಪ್ರಯಾಣದ ನಂತರ ದಾರಿ ಮಧ್ಯೆ ಕೆಲ ರೌಡಿಗಳು ತಮ್ಮ ದ್ವಿಚಕ್ರ ವಾಹನಗಳಲ್ಲಿ ಬಂದು ಕ್ಯಾಬ್ ಅಡ್ಡ ಹಾಕಿದರು. ಅಲ್ಲದೇ ಅವರು ಓಲಾ ಡ್ರೈವರ್‌ಗೆ ತಮ್ಮ ಹಿಂದಿನ ಕಂತುಗಳನ್ನು ಆ ಕ್ಷಣದಲ್ಲಿಯೇ ಪಾವತಿಸುವಂತೆ ಬೆದರಿಕೆ ಹಾಕಿದರು. ಇಲ್ಲದಿದ್ದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಹೇಳಿದರು. ಅಲ್ಲದೇ ನಾನು ಹಾಗೂ ನಮ್ಮ ಕುಟುಂಬದವರನ್ನು ಮಧ್ಯದಲ್ಲಿಯೇ ಕೆಳಗಿಳಿಯುವಂತೆ ಕೇಳಿದ ಅವರು ಬೇರೆ ವಾಹನ ನೊಡಿಕೊಳ್ಳುವಂತೆ ಹೇಳಿದರು ಎಂದು ವಿಕಾಸ್ ಗೌಡ ಹೇಳಿದ್ದಾರೆ.
ಈ ಗಲಾಟೆ ನಡೆಯುತ್ತಿರುವಾಗ, ಕ್ಯಾಬ್ ಕಂಪನಿ ಒದಗಿಸಿದ ತುರ್ತು ಸಹಾಯವಾಣಿ ಸಂಖ್ಯೆಗೆ ವಿಕಾಸ್ ನಿರಂತರವಾಗಿ ಸಂಪರ್ಕ ಮಾಡಲು ಯತ್ನಿಸಿದರು ಆದರೆ ಅದು ವ್ಯರ್ಥವಾಗಿದೆ. ಅಲ್ಲದೇ ಕಸ್ಟಮರ್ ಕೇರ್ ಏಜೆಂಟ್, ಪರಿಸ್ಥಿತಿಯನ್ನು ಪರಿಹರಿಸುವ ಬದಲು ಮತ್ತೊಂದು ಕ್ಯಾಬ್ ಅನ್ನು ಬುಕ್ ಮಾಡಿ ತನ್ನ ಪ್ರಯಾಣವನ್ನು ಮುಂದುವರೆಸುವಂತೆ ಸಲಹೆ ನೀಡಿದರು.
ಗ್ರಾಹಕರ ದೂರು ಇತ್ಯರ್ಥಪಡಿಸದಿದ್ದರೆ ಕಠಿಣ ಕ್ರಮ: ಓಲಾ, ಊಬರ್‌ಗೆ ಸರ್ಕಾರದ ವಾರ್ನಿಂಗ್
ಇಷ್ಟೇ ಅಲ್ಲದೇ ಈ ಕೆಟ್ಟ ಅನುಭವದ ನಂತರವೂ ತಮಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಯಿತು. ಇದು ಓಲಾ ಕ್ಯಾಬ್ ಅವರ ತುರ್ತು ಪ್ರತಿಕ್ರಿಯೆ ತಂಡ ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ. ಈ ಎಲ್ಲಾ ಅಹಿತಕರ ಘಟನೆಗಳ ನಂತರ, ಮಹಿಳೆಯರು, ಕುಟುಂಬಗಳು ಮತ್ತು ಸಾಮಾನ್ಯ ಜನರಿಗೆ ನಮ್ಮ ಕ್ಯಾಬ್ ಸವಾರಿಗಳನ್ನು ಸುರಕ್ಷಿತವಾಗಿಸುವುದರಿಂದ ನಾವು ಬಹಳ ದೂರದಲ್ಲಿದ್ದೇವೆ ಎಂದು ವಿಕಾಸ್ ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ