ಸುಪ್ರೀಂಕೋರ್ಟ್‌ಗೆ 5 ಜಡ್ಜ್‌ಗಳ ನೇಮಕ: ಸುಪ್ರೀಂ ಅತೃಪ್ತಿ ಬೆನ್ನಲ್ಲೇ ಕೇಂದ್ರ ಸರ್ಕಾರ ಅಸ್ತು

By Kannadaprabha NewsFirst Published Feb 5, 2023, 10:17 AM IST
Highlights

ಈ ಐವರು ನ್ಯಾಯಮೂರ್ತಿಗಳ ನೇಮಕಾತಿ ಬೆನ್ನಲ್ಲೇ ಸುಪ್ರೀಂನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ ಏರಿದೆ.

ನವದೆಹಲಿ (ಫೆಬ್ರವರಿ 5, 2023): ನ್ಯಾಯಮೂರ್ತಿಗಳ ನೇಮಕ ವಿಳಂಬ ಆಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಅಸಮಾಧಾನದ ನಡುವೆಯೇ ಕೇಂದ್ರ ಸರ್ಕಾರ ಶನಿವಾರ ಸಂಜೆ, ಕೊಲಿಜಿಯಂ ಶಿಫಾರಸು ಮಾಡಿದ್ದ ಐವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಆಯಾ ರಾಜ್ಯಗಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿದ್ದವರನ್ನು ನೇಮಕ ಮಾಡಲಾಗಿದೆ. ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಪಂಕಜ್‌ ಮಿತ್ತಲ್‌, ಪಟನಾ ಹೈಕೋರ್ಟ್‌ ನ್ಯಾಯಮೂರ್ತಿ ಸಂಜಯ್‌ ಕರೋಲ್‌, ಮಣಿಪುರ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ.ವಿ. ಸಂಜಯ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಟ್ವೀಟ್‌ ಮಾಡಿದ್ದಾರೆ.

ಇನ್ನು ಪಟನಾ ಹೈಕೋರ್ಟ್‌ ನ್ಯಾಯಮೂರ್ತಿ ಆಹ್ಸಾನುದ್ದಿನ್‌ ಅಮನುಲ್ಲಾ, ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಮನೋಜ್‌ ಮಿಶ್ರಾ ಅವರನ್ನು ಕೂಡ ನೇಮಕ ಮಾಡಲಾಗಿದೆ. ಈ ಐವರು ನ್ಯಾಯಮೂರ್ತಿಗಳ (Judges) ನೇಮಕಾತಿ (Appointment) ಬೆನ್ನಲ್ಲೇ ಸುಪ್ರೀಂನ (Supreme Court) ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ ಏರಿದೆ. ಮುಖ್ಯ ನ್ಯಾಯಮೂರ್ತಿ (Chief Justice) ಸೇರಿ ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟು 34 ಹುದ್ದೆಗಳಿವೆ. ಇದರಿಂದಾಗಿ ಇನ್ನು 2 ಹುದ್ದೆ ಮಾತ್ರ ಖಾಲಿ ಉಳಿದಂತಾಗಿದೆ.

ಇದನ್ನು ಓದಿ: ಕೊಲಿಜಿಯಂ: ಸರ್ಕಾರಕ್ಕೆ ಗಡುವು ನೀಡುವಂತೆ ಸುಪ್ರೀಂಗೆ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಒತ್ತಾಯ

ಇತ್ತೀಚೆಗೆ ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ಸೇರಿದಂತೆ ಇಬ್ಬರ ಹೆಸರನ್ನೂ ಇನ್ನೊಂದು ಪಟ್ಟಿಯಲ್ಲಿ ಕೊಲಿಜಿಯಂ (Collegium) ಶಿಫಾರಸು ಮಾಡಿತ್ತು. ಈ ಬಗ್ಗೆ ಇನ್ನೂ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಶುಕ್ರವಾರವಷ್ಟೇ ಸುಪ್ರೀಂ ಕೋರ್ಟು, ನ್ಯಾಯಮೂರ್ತಿಗಳ ನೇಮಕ ವಿಳಂಬಕ್ಕೆ ಸಂಬಂಧಿಸಿದಂತೆ ಸಲ್ಲಿಕೆ ಆಗಿದ್ದ ಅರ್ಜಿ ವಿಚಾರಣೆ ವೇಳೆ, ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. ‘ಇದು ಗಂಭೀರ ಸಮಸ್ಯೆ. ನಾವು ಅನಾನುಕೂಲ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಬೇಡಿ’ ಎಂದು ಎಚ್ಚರಿಸಿತ್ತು. ಆಗ 5 ಜಡ್ಜ್‌ಗಳ ಹೆಸರನ್ನು ಶೀಘ್ರ ಅನುಮೋದಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಇದನ್ನೂ ಓದಿ: ಜಡ್ಜ್‌ಗಳ ಹಿನ್ನೆಲೆ ಕುರಿತ ‘ರಾ’ ವರದಿ ಬಹಿರಂಗ: ಕೊಲಿಜಿಯಂ ನಡೆಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಕಿಡಿ

ಜನರೇ ನಮ್ಮ ಮಾಲೀಕರು: ಕಿರಣ್‌ ರಿಜಿಜು
ಪ್ರಯಾಗ್‌ರಾಜ್‌: ಜಡ್ಜ್‌ಗಳ ನೇಮಕ ಸಂಬಂಧ ನ್ಯಾಯಾಂಗದ ಜತೆ ಘರ್ಷಣೆ ನಡೆಸಿರುವ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು, ‘ಜನರೇ ನಮ್ಮ ಮಾಲೀಕರು. ನಾವು ಅವರ ಸೇವಕರು. ದೇಶ ಸಂವಿಧಾನದ ಅನುಸಾರ ನಡೆಯುತ್ತದೆ. ಇಲ್ಲಿ ಯಾರು ಯಾರಿಗೂ ಎಚ್ಚರಿಕೆ ನೀಡಲು ಆಗದು. ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವರು ಹೇಳಿಕೆ ನೀಡುವ ಮುನ್ನ ಇದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ. ‘ಜಡ್ಜ್‌ಗಳ ನೇಮಕ ವಿಳಂಬ ಏಕೆ?’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.

ಇದನ್ನೂ ಓದಿ: ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್‌; ನಿವೃತ್ತ ಜಡ್ಜ್‌ ಹೇಳಿಕೆಗೆ ಸಚಿವ ಬೆಂಬಲ

click me!