
ನವದೆಹಲಿ (ಡಿಸೆಂಬರ್ 8, 2023): ‘ಮೈಚಾಂಗ್’ ಚಂಡಮಾರುತದಿಂದ ಇತ್ತೀಚೆಗೆ ತಮಿಳುನಾಡಿನ ರಾಜಧಾನಿ ಚೆನ್ನೈ ಎದುರಿಸಿದ ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಮೋದಿ ಸರ್ಕಾರ, ಮಹಾನಗರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಇಂಥ ಯೋಜನೆಯನ್ನು ಚೆನ್ನೈನಲ್ಲಿ ಜಾರಿ ಮಾಡಲು ನಿರ್ಧರಿಸಲಾಗಿದ್ದು, ಯೋಜನೆಗೆ 561 ಕೋಟಿ ರೂ. ಬಿಡುಗಡೆ ಮಾಡಿದೆ.
‘ಚೆನ್ನೈ ನಗರ ವಲಯ ಸಮಗ್ರ ನಗರ ಪ್ರವಾಹ ನಿರ್ವಹಣಾ ಚಟುವಟಿಕೆ’ ಹೆಸರಿನ ಈ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಸುವ ಸವಾಲುಗಳನ್ನು ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಮಗ್ರ ಪ್ರವಾಹ ನಿರ್ವಹಣಾ ಯೋಜನೆಯು ಪ್ರಾಕೃತಿಕ ವಿಕೋಪಗಳ ಸಂದರ್ಭವನ್ನು ಚೆನ್ನೈ ನಗರವು ಯಶಸ್ವಿಯಾಗಿ ನಿರ್ವಹಿಸುವಂತೆ ನೆರವು ನೀಡಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಚೆನ್ನೈನ ಭಾರಿ ಚಂಡಮಾರುತದ ಸುಳಿಗೆ ಸಿಲುಕಿದ್ದ ಆಮೀರ್ ಖಾನ್! ವೈರಲ್ ಚಿತ್ರದಿಂದ ವಿಷಯ ಬಹಿರಂಗ...
‘ಚೆನ್ನೈ ನಗರ ಕಳೆದ 8 ವರ್ಷದಲ್ಲಿ 3 ಬಾರಿ ಭಾರಿ ಪ್ರವಾಹ ಅನುಭವಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ನಗರ ನೆರೆ ನಿರ್ವಹಣೆಗೆಂದು ಮೊದಲ ಬಾರಿ ಚೆನ್ನೈಗೆ 561 ಕೋಟಿ ರು. ಯೋಜನೆಯನ್ನು ರೂಪಿಸಲಾಗಿದೆ. ಯೋಜನೆ ಸಂಪೂರ್ಣ ಅನುಷ್ಠಾನಗೊಂಡರೆ ಚೆನ್ನೈ ಪ್ರವಾಹ ಪ್ರತಿರೋಧಕ ನಗರವಾಗಲಿದೆ’ ಎಂದಿದ್ದಾರೆ.
ಇದೇ ವೇಳೆ ಮೈಚಾಂಗ್ ಚಂಡಮಾರುತದಿಂದ ಅನುಭವಿಸಿರುವ ನಷ್ಟವನ್ನು ತುಂಬಿಕೊಡುವ ಸಲುವಾಗಿ ಆಂಧ್ರಪ್ರದೇಶಕ್ಕೆ 494 ಕೋಟಿ ರು. ಮತ್ತು ತಮಿಳುನಾಡಿಗೆ 450 ಕೋಟಿ ರು. ಬಿಡುಗಡೆ ಮಾಡಲೂ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಇದು ಮೈಚಾಂಗ್ ಉಂಟು ಮಾಡಿದ ನಷ್ಟ ಭರಿಸಲು ಉಭಯ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ 2ನೇ ಕಂತಿನ ನೆರವಿನ ಹಣವಾಗಿದೆ.
ಇದನ್ನೂ ಓದಿ: ಚೆನ್ನೈ ಮಳೆಯಿಂದ ಇಡಿ ದಾಳಿ ವಿಳಂಬ, ಕೇಂದ್ರ ಬಿಜೆಪಿ ಕುಟುಕಿದ ಪ್ರಕಾಶ್ ರಾಜ್‌ಗೆ ನಟ್ಟಿಗರ ಪ್ರಶ್ನೆ!
ಏನಿದು ಯೋಜನೆ?:
ಭಾರೀ ಮಳೆಯಿಂದ ಸೃಷ್ಟಿಯಾಗುವ ಹೆಚ್ಚುವರಿ ನೀರನ್ನು ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯವಾದ ಮೂಲಸೌಕರ್ಯವನ್ನು ಯೋಜನೆ ಮೂಲಕ ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ಪ್ರವಾಹದ ವೇಳೆ ಆಸ್ತಿ, ಪ್ರಾಣ ಹಾನಿ ಉಂಟಾಗದಂತೆ ನೋಡಿಕೊಳ್ಳಲಾಗುವುದು.
ಚೆನ್ನೈನಲ್ಲಿ ಜಾರಿಗೊಳಿಸಲಾಗುತ್ತಿರುವ ಯೋಜನೆ ದೇಶದ ಇತರೆ ಮಹಾನಗರಗಳಿಗೆ ಮಾದರಿಯಾಗಲಿದೆ. ಇದೇ ರೀತಿಯ ಅಪಾಯಗಳನ್ನು ಎದುರಿಸುತ್ತಿರುವ ಇತರ ಮೆಟ್ರೋಪಾಲಿಟನ್ ನಗರಗಳನ್ನು ರಕ್ಷಿಸಲು ಅಳವಡಿಸಿಕೊಳ್ಳಬಹುದಾದ ವಿಶಾಲ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಇದು ಒಂದು ಉತ್ತಮ ಉದಾಹರಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Michaungನಿಂದ ಚೆನ್ನೈನಲ್ಲಿ ಭಾರೀ ಮಳೆ: ನೀರಲ್ಲಿ ಕೊಚ್ಚಿ ಹೋಯ್ತು 10ಕ್ಕೂ ಹೆಚ್ಚು ಕಾರುಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ