
ನವದೆಹಲಿ(ಜ.09): ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಅಪಘಾತದ ಸುದ್ದಿಯನ್ನು ಟಿವಿ ಮಾಧ್ಯಮಗಳು ಕವರೇಜ್ ಮಾಡಿದ ರೀತಿಗೆ ಸಾಮಾಜಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಜೊತೆಗೆ ಹಲವು ಘಟನೆಗಳನ್ನು ಮುಂದಿಟ್ಟು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಪಂತ್ ಸುದ್ದಿ ಪ್ರಸಾರ ಸೇರಿದಂತೆ ಕೆಲ ಸುದ್ದಿ ಪ್ರಸಾರದಲ್ಲಿ ಭಾರತೀಯ ಮಾಧ್ಯಮಗಳು ನೀತಿ ಸಂಹಿತಿ ಪಾಲಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಅಪರಾಧ ಸುದ್ದಿಗಳ ಪ್ರಸಾರ ಅಸಹ್ಯಕರ, ಹೃದಯ ವಿದ್ರಾವಕ ಸುದ್ದಿ ಪ್ರಸಾರದ ವೇಳೆ ನೀತಿ ಸಂಹಿತೆಯನ್ನು ಪಾಲಿಸುವಂತೆ ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಖಡಕ್ ಸೂಚನೆ ನೀಡಿದೆ.
ಇತ್ತೀಚೆಗೆ ಟಿವಿ ಮಾಧ್ಯಮಗಳು ಸುದ್ದಿಗಳ ಪ್ರಸಾರದಲ್ಲಿ ಪದೇ ಪದೇ ತಪ್ಪು ಮಾಡುತ್ತಿದೆ. ಈ ಮೂಲಕ 1995ರ ಕೇಬಲ್ ಟಿವಿ ನೆಟ್‌ವರ್ಕ್ ರೆಗ್ಯೂಲೇಶನ್ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. ಕಳೆದ ಕೆಲ ತಿಂಗಳಲ್ಲೇ ಹಲವು ಬಾರಿ ಟಿವಿ ಮಾಧ್ಯಮಗಳು ನಿಯಮ ಉಲ್ಲಂಘಿಸಿದೆ. ಯಾವ ಸುದ್ದಿಯನ್ನು ಹೇಗೆ ಪ್ರಸಾರ ಮಾಡಬೇಕು ಅನ್ನೋದನ್ನು ಮರೆತು, ಎಲ್ಲವನ್ನೂ ತರಾತುರಿಯಲ್ಲಿ ಸುದ್ದಿ ನೀಡುವ ಸಾಹಸಕ್ಕೆ ಮುಂದಾಗುತ್ತಿದೆ. ಈ ವೇಳೆ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಬೆಟ್ಟಿಂಗ್ ಜಾಹೀರಾತು ನಿಷೇಧ, ಕೇಂದ್ರದ ನಿರ್ಧಾರಕ್ಕೆ ಬೆಚ್ಚಿ ಬಿದ್ದ ಖಾಸಗಿ ಕಂಪನಿ!
ಕ್ರಿಕೆಟಿಗ ರಿಷಭ್ ಪಂತ್ ಅವರ ರಸ್ತೆ ಅಪಘಾತ ಮತ್ತು ಇತರ ಕೆಲವು ಅಪರಾಧ ಸುದ್ದಿಗಳ ಟೀವಿ ಸುದ್ದಿ ಪ್ರಸಾರವನ್ನು ‘ಅಸಹ್ಯಕರ’ ಮತ್ತು ‘ಹೃದಯ ವಿದ್ರಾವಕ’ ಎಂದು ಸರ್ಕಾರ ಸೋಮವಾರ ಕಿಡಿಕಾರಿದೆ ಮತ್ತು ಕಾರ್ಯಕ್ರಮದ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಪ್ರಸಾರ ಮಾಡುವಂತೆ ಸೂಚಿಸಿದೆ.
ಎಲ್ಲ ಖಾಸಗಿ ಉಪಗ್ರಹ ಚಾನೆಲ್‌ಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಲಹಾವಳಿ ಜಾರಿ ಮಾಡಿದೆ. ಕ್ರಿಕೆಟಿಗನ ಕಾರು ಅಪಘಾತ, ಮೃತ ದೇಹಗಳ ಫೋಟೋ ಪ್ರಸಾರ ಮತ್ತು 5 ವರ್ಷದ ಬಾಲಕನನ್ನು ಥಳಿಸಿದ ಮಾಧ್ಯಮ ವರದಿಯನ್ನು ಅದು ಉಲ್ಲೇಖಿಸಿದೆ. ಇಂಥ ವರದಿಗಳು ಸದಭಿರುಚಿ ಮತ್ತು ಸಭ್ಯತೆಯನ್ನು ಮೀರಿವೆ ಎಂದು ಅದು ಕಿಡಿಕಾರಿದೆ.
‘ಟೀವಿ ಚಾನೆಲ್‌ಗಳು ವ್ಯಕ್ತಿಗಳ ಮೃತ ದೇಹಗಳು ಮತ್ತು ಗಾಯಗೊಂಡ ವ್ಯಕ್ತಿಗಳ ಚಿತ್ರಗಳು/ವಿಡಿಯೋಗಳನ್ನು ತೋರಿಸಿವೆ. ಸುತ್ತಮುತ್ತ ರಕ್ತ ಚೆಲ್ಲಿದ ದೃಶ್ಯ, ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ನಿರ್ದಯವಾಗಿ ಥಳಿಸುವ ದೃಶ್ಯ ಪ್ರಸಾರ ಮಾಡಲಾಗಿದೆ. ಮಗುವನ್ನು ಶಿಕ್ಷಕ ಹೊಡೆದ ದೃಶ್ಯಗಳೂ ಪ್ರಸಾರವಾಗಿವೆ. ಪದೇ ಪದೇ ದೃಶ್ಯಗಳನ್ನು ಪ್ರಸಾರದಲ್ಲಿ ಪುನರಾವರ್ತಿಸಲಾಗಿದೆ’ ಎಂದಿದೆ.
ಟೀವಿ ಚಾನಲ್‌ಗಳಲ್ಲಿ ದ್ವೇಷ ಭಾಷಣ: ಸುಪ್ರೀಂಕೋರ್ಟ್ ಕಿಡಿ
‘ಪ್ರಸಾರಕರು ಸಾಮಾಜಿಕ ಮಾಧ್ಯಮದಿಂದ ವೀಡಿಯೊ ಕ್ಲಿಪ್‌ಗಳು ಮತ್ತು ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಅಂತಹ ಕ್ಲಿಪ್‌ಗಳನನ್ನು ಎಡಿಟ್ ಮಾಡುವ ಅಥವಾ ಮಸುಕು ಮಾಡುವ ಗೋಜಿಗೆ ಹೋಗಿಲ್ಲ. ಇದು ಕಾರ‍್ಯಕ್ರಮ ಸಂಹಿತೆಯ ಸ್ಫೂರ್ತಿಗೆ ವಿರುದ್ಧವಾಗಿದೆ’ ಎಂದು ಅದು ಆಕ್ಷೇಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ