Final Salute to Bipin Rawat: ಮಧ್ಯಾಹ್ನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ: ಸೇನಾ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ

By Kannadaprabha News  |  First Published Dec 10, 2021, 7:47 AM IST

*ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ಸಾಧ್ಯತೆ
*ಮಧ್ಯಾಹ್ನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ
*ಮೃತ ವೀರರಿಗೆ ತಮಿಳ್ನಾಡಲ್ಲಿ ಹೃದಯಸ್ಪರ್ಶಿ ವಿದಾಯ
*ದುರಂತಕ್ಕೂ ಕೆಲವೇ ಕ್ಷಣ ಮೊದಲಿನ ವಿಡಿಯೋ ವೈರಲ್‌


ನವದೆಹಲಿ (ಡಿ. 10): ಹೆಲಿಕಾಪ್ಟರ್‌ ದುರಂತದಲ್ಲಿ (IAF Chopper Crash) ಸಾವಿಗೀಡಾದ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ (CDS General Bipin Rawat) ಅವರ ಅಂತ್ಯಸಂಸ್ಕಾರವನ್ನು ಸಕಲ ಸೇನಾ ಗೌರವದೊಂದಿಗೆ (Full Military Honours) ಶುಕ್ರವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನೆರವೇರಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾವತ್‌ ಮತ್ತು ಪತ್ನಿ ಮಧುಲಿಕಾ (Madhulika) ಅವರ ಕಳೇಬರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗುತ್ತದೆ. ಬೆಳಗ್ಗೆ 11.30ರಿಂದ 12.30ರವರೆಗೆ ಸಾರ್ವಜನಿಕರ ವೀಕ್ಷಣೆಗೆ  ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂರೂ ಪಡೆಗಳ ಮಿಲಿಟರಿ ಬ್ಯಾಂಡ್‌ನೊಂದಿಗೆ ಮೆರವಣಿಗೆ ನಡೆಸಿ, 4 ಗಂಟೆಗೆ ಧೌಲಾ ಕುವಾನ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ತಮಿಳುನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್‌ ಪತನದಲ್ಲಿ ಸಾವಿಗೀಡಾದ ಜನರಲ್ ರಾವತ್‌ ಸೇರಿ 13 ಮಂದಿಗೆ ಗುರುವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮತ್ತು ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಅವರು ವೆಲ್ಲಿಂಗ್ಟನ್‌ ಆಸ್ಪತ್ರೆಯಲ್ಲಿ ಗೌರವ ನಮನ ಸಲ್ಲಿಸಿದರು. ಬಳಿಕ ಸೂಳೂರು ಏರ್‌ಬೇಸ್‌ನಿಂದ ಮೃತದೇಹಗಳನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ಕರೆತರಲಾಯಿತು. ನಂತರ ದಿಲ್ಲಿಯ ಸೇನಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.

Tap to resize

Latest Videos

"

ಮೃತ ವೀರರಿಗೆ ತಮಿಳ್ನಾಡಲ್ಲಿ ಹೃದಯಸ್ಪರ್ಶಿ ವಿದಾಯ

ಹೆಲಿಕಾಪ್ಟರ್‌ ಪತನದಲ್ಲಿ ನಿಧನರಾದ ಸಶಸ್ತ್ರ ಪಡೆಯ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರ ಪತ್ನಿ ಸೇರಿ ಇನ್ನಿತರ 13 ಜನರ ಪಾರ್ಥಿವ ಶರೀರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ (Tamil Nadu CM M K Stalin), ತೆಲಂಗಾಣ ರಾಜ್ಯಪಾಲೆ ತಮಿಳಿಸಾಯೊ ಸೌಂದರಾಜನ್‌ (Tamilisai Soundararajan) ಹಾಗೂ ಮಿಲಿಟರಿ ಸಿಬ್ಬಂದಿ ಗುರುವಾರ ಇಲ್ಲಿ ಪುಷ್ಪನಮನ ಸಲ್ಲಿಸಿದರು.‌

Bipin Rawat Death ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ 13 ಸೇನಾಧಿಕಾರಿಗಳಿಗೆ ಮೋದಿ ಗೌರವ ನಮನ!

ನಂತರ ದೇಹಗಳನ್ನು ಮದ್ರಾಸ್‌ ರೆಜಿಮೆಂಟಲ್‌ ಕೇಂದ್ರ ವೆಲ್ಲಿಂಗ್ಟನ್‌ನಿಂದ ಸೂಳೂರು ವಾಯುಪಡೆಯ ಬೇಸ್‌ ಆವರಣಕ್ಕೆ ರವಾನಿಸಲಾಯಿತು. ರಸ್ತೆಯ ಇಕ್ಕೆಲದಲ್ಲಿ ನೆರೆದ ಸ್ಥಳೀಯರು ಕಂಬನಿಗರೆಯುತ್ತ ‘ಜೈ ಹಿಂದ್‌’, ’ವಂದೇ ಮಾತರಂ’ ‘ಭಾರತ ಮಾತಾ ಕೀ ಜೈ’ ಎಂದು ಜೈಕಾರ ಹಾಕಿದರು. ಶವ ಸಾಗಿಸುತ್ತಿರುವ ವಾಹನಗಳ ಮೇಲೆ ಹೂಮಳೆಗೈದು ಮೃತ ಸೇನಾಧಿಕಾರಿಗಳಿಗೆ ಶೃದ್ಧಾಂಜಲಿ ಸಲ್ಲಿಸಿದರು. ಪಾರ್ಥಿವ ಶರೀರಗಳನ್ನು ಸೂಳೂರಿನಿಂದ ಸಿ-130 ಜೆ ಏರ್‌ಕ್ರಾಫ್ಟ್‌ನಲ್ಲಿ ದೆಹಲಿಗೆ ರವಾನಿಸಲಾಯಿತು. 

ದುರಂತಕ್ಕೂ ಕೆಲವೇ ಕ್ಷಣ ಮೊದಲಿನ ಸೇನಾ ಕಾಪ್ಟರ್‌ ವಿಡಿಯೋ ವೈರಲ್‌

ಜ.ಬಿಪಿನ್‌ ರಾವತ್‌ ಸೇರಿ 13 ಜನರ ಸಾವಿಗೆ ಕಾರಣವಾದ ಸೇನಾ ಹೆಲಿಕಾಪ್ಟರ್‌, ಪತನಕ್ಕೂ ಕೆಲವೇ ಕ್ಷಣಗಳ ಮುನ್ನ ತಮಿಳುನಾಡಿನ ನೀಲಗಿರಿಯಲ್ಲಿ (Nilagiri) ಹಾದು ಹೋದ ದೃಶ್ಯವಿರುವ ವಿಡಿಯೋವೊಂದು ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದೆ. ಸುದ್ದಿಸಂಸ್ಥೆಯೊಂದು ಸ್ಥಳೀಯ ಮೂಲಗಳಿಂದ ವಿಡಿಯೋ ಪಡೆದಿದ್ದಾಗಿ ಟ್ವೀಟ್‌ (tweet) ಮಾಡಿದೆ. ‘ಬುಧವಾರ ಮಧ್ಯಾಹ್ನ ವಾಯುಸೇನೆಯ ಎಂಐ-17ವಿ5 ವಿಮಾನ ಪತನಕ್ಕೂ ಕೆಲವೇ ಕ್ಷಣಗಳ ಮುನ್ನ ಸೆರೆ ಹಿಡಿದ ವಿಡಿಯೋ’ ಎಂದು ತಿಳಿಸಿದೆ. 

Bipin Rawat Death ಗೌರವಾರ್ಥ ಸೂಚನೆಯಾಗಿ ಅಂತ್ಯಕ್ರಿಯೆಗೆ ಸೇನಾ ಮುಖ್ಯಸ್ಥರ ಕಳುಹಿಸಲಿದೆ ಶ್ರೀಲಂಕಾ, ಭೂತಾನ್, ನೇಪಾಳ!

ವಿಡಿಯೋದಲ್ಲಿ ಹೆಲಿಕಾಪ್ಟರ್‌ ಅತಿ ಕಡಿಮೆ ಎತ್ತರದಲ್ಲಿ ಮಂಜಿನ ಮಧ್ಯೆ ಹಾದು ಹೋಗುವ ದೃಶ್ಯವಿದೆ. ಅಲ್ಲದೆ ಮಂಜಿನಲ್ಲಿ ಹಾದು ಹೋಗುತ್ತಿದ್ದಂತೆಯೇ ಕಾಪ್ಟರ್‌ ಶಬ್ದ ಬದಲಾಗುತ್ತದೆ. ಆಗ ವಿಡಿಯೋ ಸೆರೆ ಹಿಡಿವ ವ್ಯಕ್ತಿಗಳು ‘ಏನಾಯ್ತು? ಪತನವಾಯಿತಾ?’ ಎಂದು ಪ್ರಶ್ನಿಸುವ ಧ್ವನಿ ಸಹ ಇದೆ. ಆದರೆ ವಿಡಿಯೋದ ಅಧಿಕೃತತೆ ಬಗ್ಗೆ ಭಾರತೀಯ ವಾಯುಸೇನೆ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

click me!