Latest Videos

ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ!

By Santosh NaikFirst Published Jun 29, 2024, 6:07 PM IST
Highlights


ಅಕ್ರಮ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜುಲೈ 12 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
 

ನವದೆಹಲಿ (ಜೂ.29):  ದೆಹಲಿ ನ್ಯಾಯಾಲಯವು ಶನಿವಾರ ಸಿಬಿಐನ ಮನವಿಯನ್ನು ಸ್ವೀಕಾರ ಮಾಡಿದ್ದು, ಆಪಾದಿತ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಎಎಪಿ ಮುಖ್ಯಸ್ಥ ಜುಲೈ 12 ರವರೆಗೆ ಜೈಲಿನಲ್ಲಿ ಇರುತ್ತಾರೆ ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮತ್ತೆ ಮಧ್ಯಾಹ್ನ 2 ಗಂಟೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಫೆಡರಲ್ ತನಿಖಾ ಸಂಸ್ಥೆಯು ಕೇಜ್ರಿವಾಲ್‌ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ಕೋರಿದ ಗಂಟೆಗಳ ನಂತರ ನ್ಯಾಯಾಲಯದ ಆದೇಶ ಬಂದಿದ್ದು, "ತನಿಖೆ ಮತ್ತು ನ್ಯಾಯದ ಹಿತಾಸಕ್ತಿ" ಗಾಗಿ ಅವರ ಸೆರೆವಾಸ ಅಗತ್ಯವಿದೆ ಎಂದು ಹೇಳಿದೆ.

ಕೇಜ್ರಿವಾಲ್ ಅವರ ಮೂರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವಿಶೇಷ ನ್ಯಾಯಾಧೀಶ ಸುನೇನಾ ಶರ್ಮಾ ಅವರು ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದರು. ಕಸ್ಟಡಿ ವಿಚಾರಣೆ ವೇಳೆ ಅರವಿಂದ್ ಕೇಜ್ರಿವಾಲ್ ಸಹಕರಿಸಲಿಲ್ಲ ಎಂದು ಸಿಬಿಐ ತನ್ನ ರಿಮಾಂಡ್ ಅರ್ಜಿಯಲ್ಲಿ ಹೇಳಿಕೊಂಡಿದೆ. ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ದಾಖಲೆಯಲ್ಲಿರುವ ಸಾಕ್ಷ್ಯಗಳಿಗೆ ವಿರುದ್ಧವಾದ ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.

"ಸಾಕ್ಷ್ಯಗಳನ್ನು ಎದುರಲ್ಲಿ ಇಟ್ಟಾಗ, ದೆಹಲಿ 2021-22 ರ ಹೊಸ ಅಬಕಾರಿ ನೀತಿಯಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭದ ಪ್ರಮಾಣವನ್ನು ಶೇಕಡಾ 5 ರಿಂದ 12 ಕ್ಕೆ ಹೆಚ್ಚಿಸುವ ಬಗ್ಗೆ ಯಾವುದೇ ಸರಿಯಾದ ಮತ್ತು ಸತ್ಯವಾದ ವಿವರಣೆಯನ್ನು ನೀಡಲಿಲ್ಲ..' ಎಂದು ಹೇಳಿದೆ. “ಕೋವಿಡ್‌ನ ಎರಡನೇ ಅಲೆಯ ಉತ್ತುಂಗದಲ್ಲಿ, ಸೌತ್‌ ಗ್ರೂಪ್‌ನ ಆರೋಪಿಗಳು ದೆಹಲಿಯಲ್ಲಿ ಮೊಕ್ಕಾಂ ಹೂಡಿದಾಗ, ಪರಿಷ್ಕೃತ ಅಬಕಾರಿ ನೀತಿಗೆ ಕ್ಯಾಬಿನೆಟ್ ಅನುಮೋದನೆಯನ್ನು ಒಂದೇ ದಿನದಲ್ಲಿ ತರಾತುರಿಯಲ್ಲಿ ಚಲಾವಣೆ ಮಾಡುವ ಮೂಲಕ ಏಕೆ ನೀಡಲಾಯಿತು ಅನ್ನೋದನ್ನೂ ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ' ಎಂದು ಸಿಬಿಐ ತಿಳಿಸಿದೆ.

ದೆಹಲಿಯ ಮದ್ಯ ಉದ್ಯಮದ ವಿವಿಧ ಪಾಲುದಾರರೊಂದಿಗೆ ತಮ್ಮ ಸಹವರ್ತಿ ವಿಜಯ್ ನಾಯರ್ ಅವರ ಸಂವಾದದ ಬಗ್ಗೆ ಕೇಜ್ರಿವಾಲ್ ಅವರು ಪ್ರಶ್ನೆಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸಿಬಿಐ ಅರ್ಜಿಯಲ್ಲಿ ಆರೋಪ ಮಾಡಿದೆ. ಕೇಜ್ರಿವಾಲ್ ಅವರು ಮಾಗುಂಟ ಶ್ರೀನಿವಾಸಲು ರೆಡ್ಡಿ ಮತ್ತು ಆರೋಪಿಗಳಾದ ಅರ್ಜುನ್ ಪಾಂಡೆ ಮತ್ತು ಮೂತ ಗೌತಮ್ ಅವರೊಂದಿಗಿನ ಭೇಟಿಗಳಿಗೆ ತೃಪ್ತಿಕರ ವಿವರಣೆಯನ್ನು ನೀಡಲು ಹೆಣಗಾಡಿದರು ಎಂದು ತಿಳಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಕೇಜ್ರಿವಾಲ್ ಪರ ವಕೀಲ ವಿಕ್ರಮ್ ಚೌಧರಿ, 2022 ರಿಂದ ಮದ್ಯ ನೀತಿ ಹಗರಣದ ತನಿಖೆ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಸಂಗ್ರಹಿಸಿದ ಎಲ್ಲಾ ಸಾಕ್ಷ್ಯಗಳನ್ನು ದಾಖಲಿಸಲು ಸಿಬಿಐಗೆ ನಿರ್ದೇಶಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

ತಿಹಾರ್ ಜೈಲಿನಲ್ಲಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಸಿಬಿಐ ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಜೂನ್ 26 ರಂದು ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದ ಬಂಧಿಸಿತ್ತು. ಸಿಬಿಐ ಅವರನ್ನು ಬಂಧಿಸುವ ಸಮಯದಲ್ಲಿ, ಕೇಜ್ರಿವಾಲ್ ಅವರು ಈಗಾಗಲೇ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸುತ್ತಿರುವ ಅದೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.  ಕಳೆದ ವಾರ, ಮುಖ್ಯಮಂತ್ರಿಗೆ ವಿಚಾರಣಾ ನ್ಯಾಯಾಲಯದಿಂದ ಜಾಮೀನು ನೀಡಲಾಯಿತು ಮತ್ತು ದೆಹಲಿ ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿತು.

 

ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನಿಗೆ ತಡೆ ನೀಡಿದ ದೆಹಲಿ ಹೈಕೋರ್ಟ್‌!

click me!