ದೇಶವ್ಯಾಪಿ ಜಾತಿ ಗಣತಿಗೆ ಬಿಹಾರದ ಸರ್ವಪಕ್ಷಗಳ ಮನವಿ: ಪಿಎಂ ಅಂಗಳದಲ್ಲಿ ಚೆಂಡು!

By Suvarna NewsFirst Published Aug 24, 2021, 9:45 AM IST
Highlights

* ಪ್ರಧಾನಿ ಮೋದಿ ಭೇಟಿಯಾಗಿ ನಿತೀಶ್‌, ತೇಜಸ್ವಿ ಆಗ್ರಹ

* ದೇಶವ್ಯಾಪಿ ಜಾತಿ ಗಣತಿಗೆ ಬಿಹಾರದ ಸರ್ವಪಕ್ಷಗಳ ಮನವಿ

* ಜಾತಿಗಣತಿಯಿಂದ ಬಡತನ ನಿವಾರಣೆ ಸಾಧ್ಯ: ಬಿಹಾರ ಸಿಎಂ

ನವದೆಹಲಿ(ಆ.24): ಮುಂದಿನ ಜನಗಣತಿ ವೇಳೆ ಜಾತಿ ಗಣತಿಯನ್ನೂ ನಡೆಸುವಂತೆ ಬಿಹಾರದ 10 ರಾಜಕೀಯ ಪಕ್ಷಗಳ ಮುಖಂಡರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿವೆ. ವಿವಿಧ ಜಾತಿಗಳು ಮತ್ತು ಅವುಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಅಂಕಿ ಅಂಶಗಳು ಸಮಾಜದ ಅತ್ಯಂತ ಹಿಂದುಳಿದ ಮತ್ತು ಕಡುಬಡವರ ಏಳ್ಗೆಗೆ ನೆರವಾಗಬಲ್ಲದು ಎಂದು ಈ ನಿಯೋಗ ಹೇಳಿದೆ.

ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಯೋಗದ ನೇತೃತ್ವ ವಹಿಸಿದ್ದ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್‌ ಕುಮಾರ್‌, ‘ನಾವೆಲ್ಲಾ ಒಂದೇ ಧ್ವನಿಯಲ್ಲಿ ಜಾತಿ ಗಣತಿಗೆ ಒತ್ತಾಯಿಸಿದ್ದೇವೆ. ಇಂಥ ಗಣತಿಯಿಂದ ದೊರೆಯುವ ವಿವಿಧ ಜಾತಿಗಳ ಮಾಹಿತಿಯು ಅವರಿಗಾಗಿ ಪರಿಣಾಮಕಾರಿಯಾದ ಅಭ್ಯುದಯದ ಯೋಜನೆ ರೂಪಿಸಲು ನೆರವಾಗಲಿದೆ ಮತ್ತು ವಾಸ್ತವ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಯಾವುದೇ ಲಾಭದಿಂದ ವಂಚಿತರಾದವರಿಗೆ ಸರ್ಕಾರದ ಯೋಜನೆಗಳ ಲಾಭ ದೊರಕಿಸಿಕೊಡಲು ಅನುವು ಮಾಡಿಕೊಡಲಿದೆ’ ಎಂದು ತಿಳಿಸಿದರು.

Latest Videos

"

ಇನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮಾತನಾಡಿ ‘ಜಾತಿ ಗಣತಿ ರಾಷ್ಟ್ರೀಯ ಹಿತಾಸಕ್ತಿ ಒಳಗೊಂಡಿದೆ ಮತ್ತು ಸಮಾಜದ ಅತ್ಯಂತ ಹಿಂದುಳಿದವರು ಮತ್ತು ಬಡವರ ಏಳ್ಗೆಯ ನಿಟ್ಟಿನಲ್ಲಿ ಐತಿಹಾಸಿಕ ನಿರ್ಧಾರವಾಗಿರಲಿದೆ. ಪ್ರಾಣಿಗಳ ಗಣತಿ ಸಾಧ್ಯವಾದಲ್ಲಿ, ಜಾತಿ ಗಣತಿಯೂ ಸಾಧ್ಯ. ನಮ್ಮೆಲ್ಲರ ಅಹವಾಲನ್ನು ಪ್ರಧಾನಿ ತಾಳ್ಮೆಯಿಂದ ಆಲಿಸಿದ್ದಾರೆ. ನಾವು ಹೇಳಿದ್ದನ್ನು ಅವರು ನಿರಾಕರಿಸಲಿಲ್ಲ’ ಎಂದು ಹೇಳಿದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರು ಇತ್ತೀಚೆಗೆ ರಾಜ್ಯಸಭೆಯಲ್ಲಿ ಹೇಳಿಕೆಯೊಂದನ್ನು ನೀಡಿ, ಜಾತಿ ಗಣತಿ ನಡೆಸುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದ್ದಾರೆ. ಇದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ನಾವು ಈ ವಿಷಯದ ಕುರಿತು ಪ್ರಧಾನಿ ಅವರ ಗಮನ ಸೆಳೆಯಲು ಸರ್ವಪಕ್ಷ ನಿಯೋಗದೊಂದಿಗೆ ಬಂದಿದ್ದೇವೆ ಎಂದು ನಿತೀಶ್‌ ಮತ್ತು ತೇಜಸ್ವಿ ಯಾದವ್‌ ಹೇಳಿದರು.

ಜಾತಿ ಗಣತಿ ಏಕೆ?:

ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರೆ ಹಿಂದುಳಿದ ವರ್ಗದವರ ಪ್ರಮಾಣ ಶೇ.50ಕ್ಕಿಂತ ಹೆಚ್ಚಿದೆ. ಆದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಬಿಸಿ ವರ್ಗಕ್ಕೆ ಶೇ.27ರಷ್ಟುಮೀಸಲಿದೆ. ಹೀಗಾಗಿ ಜಾತಿ ಗಣತಿ ನಡೆದು, ಒಬಿಸಿ ವರ್ಗದ ನಿಖರ ಅಂಕಿ ಸಂಖ್ಯೆ ಹೊರಬಿದ್ದರೆ ಮೀಸಲು ಪ್ರಮಾಣ ಇನ್ನಷ್ಟುಹೆಚ್ಚಿಸಬೇಕೆಂಬ ಬೇಡಿಕೆಗೆ ಇನ್ನಷ್ಟುಬಲ ಸಿಗಲಿದೆ.

ಭಾರೀ ಪರಿಣಾಮ:

ಜಾತಿ ಗಣತಿಯು ದೇಶದ ರಾಜಕೀಯದಲ್ಲಿ ಭಾರೀ ಪರಿಣಾಮಬಲ್ಲ ಶಕ್ತಿ ಹೊಂದಿದೆ. ಹೀಗಾಗಿಯೇ ಬಿಜೆಪಿಯಲ್ಲಿನ ಹಲವು ಒಬಿಸಿ ನಾಯಕರು ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳ ನಾಯಕರು ಹಲವು ಸಮಯದಿಂದ ಜಾತಿ ಗಣತಿಗೆ ಒತ್ತಾಯಿಸುತ್ತಿವೆ. ಜೊತೆಗೆ ಜಾತಿ ಗಣತಿಯು ದಶಕಗಳ ಹಿಂದೆ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಿದ್ದ ಮಂಡಲ್‌ ರಾಜಕೀಯವನ್ನು ಮತ್ತೆ ಮುನ್ನೆಲೆಗೆ ತರುವ ಸಾಧ್ಯತೆ ಇದೆ. ಇದು ಪ್ರಾದೇಶಿಕ ಪಕ್ಷಗಳ ಪಾಲಿಗೆ ದೊಡ್ಡ ಗುರಾಣಿಯಾಗಲಿದೆ. ಜೊತೆಗೆ ಬಿಜೆಪಿಯ ಹಿಂದುತ್ವ ಮತ್ತು ಅಭಿವೃದ್ಧಿ ರಾಜಕೀಯಕ್ಕೆ ಸಡ್ಡು ಹೊಡೆಯುವ ಶಕ್ತಿ ಹೊಂದಿದೆ

click me!