
ನವದೆಹಲಿ(ಆ.24): ದೇಶಕ್ಕೆ ಕೋವಿಡ್ ಮೂರನೇ ಅಲೆ ಅಪ್ಪಳಿಸುವುದು ಸನ್ನಿಹಿತವಾಗಿದೆ. ಅದು ಅಕ್ಟೋಬರ್ ವೇಳೆಗೆ ಗರಿಷ್ಠಕ್ಕೆ ತಲುಪಲಿದ್ದು, ವಯಸ್ಕರಷ್ಟೇ ಮಕ್ಕಳು ಕೂಡ ಅಪಾಯಕ್ಕೆ ತುತ್ತಾಗಬಲ್ಲರು. ಆದರೆ, ಮಕ್ಕಳಿಗೆ ಹೆಚ್ಚಿನ ಸೋಂಕು ತಗಲಿದರೆ ಅವರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವ್ಯವಸ್ಥೆಯ ಸಮೀಪದಲ್ಲೂ ನಾವಿಲ್ಲ. ಶೇ.82ರಷ್ಟುಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವೈದ್ಯರೇ ಇಲ್ಲ. ಹೀಗಾಗಿ ವೈದ್ಯಕೀಯ ಮೂಲಸೌಕರ‍್ಯವನ್ನು ಕೂಡಲೇ ಹೆಚ್ಚಿಸಬೇಕು.
- ಇದು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಐಡಿಎಂ)ಯಡಿ ರಚಿಸಿದ್ದ ತಜ್ಞರ ಸಮಿತಿ ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಿರುವ ವರದಿ.
ದೇಶದಲ್ಲಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವಷ್ಟುವೈದ್ಯರು, ಸಿಬ್ಬಂದಿ, ವೆಂಟಿಲೇಟರ್, ಆ್ಯಂಬುಲೆನ್ಸ್‌ನಂತಹ ಸಲಕರಣೆಗಳು ಇಲ್ಲ. 3ನೇ ಅಲೆಯ ವೇಳೆ ಮಕ್ಕಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡರೆ ಆಗ ಚಿಕಿತ್ಸೆ ನೀಡಲು ಬೇಕಾಗುವ ವ್ಯವಸ್ಥೆಯ ಸನಿಹದಲ್ಲೂ ನಾವಿಲ್ಲ. 3ನೇ ಅಲೆಯಲ್ಲಿ ವಯಸ್ಕರಷ್ಟೇ ಪ್ರಮಾಣದಲ್ಲಿ ಮಕ್ಕಳೂ ಸೋಂಕಿಗೆ ತುತ್ತಾಗುವ ಅಪಾಯವಿದೆ. ಹೀಗಾಗಿ ಸಮರೋಪಾದಿಯಲ್ಲಿ ಮಕ್ಕಳ ಚಿಕಿತ್ಸೆಯ ಮೂಲಸೌಕರ್ಯಗಳನ್ನು ರಾಜ್ಯಗಳು ಹೆಚ್ಚಿಸಿಕೊಳ್ಳಬೇಕು. ಪೂರ್ವರೋಗವಿರುವ ಮಕ್ಕಳಿಗೆ ಹಾಗೂ ಅಂಗವಿಕಲರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಬೇಕು. ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಅಕ್ಟೋಬರ್ ವೇಳೆಗೆ ಸೋಂಕು ಗರಿಷ್ಠಕ್ಕೆ ಹೋಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಕ್ಕಳಿಗೆ ಹೆಚ್ಚು ಸಮಸ್ಯೆಯಿಲ್ಲ:
ಮಕ್ಕಳಿಗೆ ಇನ್ನೂ ಲಸಿಕೆ ನೀಡಿಲ್ಲದಿರುವುದರಿಂದ 3ನೇ ಅಲೆಯಲ್ಲಿ ಅವರಿಗೆ ಇರುವ ಅಪಾಯದ ಬಗ್ಗೆ ಚರ್ಚಿಸಲಾಯಿತು. ಆಗ ಬಹುಪಾಲು ತಜ್ಞರು ಮಕ್ಕಳಿಗೆ ತುಂಬಾ ತೊಂದರೆಯೇನೂ ಆಗುವುದಿಲ್ಲ. ಆದರೆ ಅವರು ಬೇರೆಯವರಿಗೆ ಸೋಂಕು ಹರಡುತ್ತಾರೆ ಎಂದು ಹೇಳಿದ್ದಾರೆ. ಇನ್ನು ಕೆಲವರು 3ನೇ ಅಲೆಯು 2ನೇ ಅಲೆಯಷ್ಟುತೀವ್ರವಾಗಿರುವುದಿಲ್ಲ ಎಂದೂ ಹೇಳಿದ್ದಾರೆ. ಆದರೂ ಮಕ್ಕಳಿಗಾಗಿ ಸಮಗ್ರ ಚಿಕಿತ್ಸಾ ವ್ಯವಸ್ಥೆ ಮಾಡಿಕೊಳ್ಳಬೇಕು. ತಕ್ಷಣವೇ ಮಕ್ಕಳ ಚಿಕಿತ್ಸಾ ಕೇಂದ್ರಗಳನ್ನೂ, ಮಕ್ಕಳ ಮಾನಸಿಕ ಚಿಕಿತ್ಸಾ ಕೇಂದ್ರಗಳನ್ನೂ ಆದ್ಯತೆಯ ಮೇಲೆ ಸ್ಥಾಪಿಸಬೇಕು. ಮಕ್ಕಳ ಜೊತೆಗೆ ಪೋಷಕರು ಕೂಡ ಸುರಕ್ಷಿತವಾಗಿ ಉಳಿದುಕೊಳ್ಳಲು ಸಾಧ್ಯವಿರುವ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಶೇ.82ರಷ್ಟು ಮಕ್ಕಳ ವೈದ್ಯರ ಕೊರತೆ:
ಸಂಸತ್ತಿನ ಸ್ಥಾಯಿ ಸಮಿತಿಯ ಪ್ರಕಾರ, ದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ.82ರಷ್ಟುಮಕ್ಕಳ ತಜ್ಞರ ಕೊರತೆಯಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇ.63ರಷ್ಟುಮಕ್ಕಳ ವೈದ್ಯರ ಹುದ್ದೆ ಖಾಲಿಯಿದೆ. ಪರಿಸ್ಥಿತಿ ಈಗಾಗಲೇ ಗಂಭೀರವಾಗಿದೆ. ಕೋವಿಡ್ ಸನ್ನಡತೆ ಪಾಲಿಸಿ, ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳದೆ ಹೋದರೆ ಅಪಾಯ ಹೆಚ್ಚಲಿದೆ ಎಂದು ವರದಿ ಹೇಳಿದೆ.
2ನೇ ಅಲೆಯಲ್ಲಿ ಸೋಂಕು ತಗಲಿದ ಮಕ್ಕಳ ಪೈಕಿ ಸುಮಾರು ಶೇ.60-70ರಷ್ಟುಮಕ್ಕಳು ಪೂರ್ವರೋಗ ಹಾಗೂ ಕಡಿಮೆ ರೋಗನಿರೋಧಕ ಶಕ್ತಿಯ ಕಾರಣಕ್ಕೆ ಅನಾರೋಗ್ಯ ತೀವ್ರಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಮೊದಲ ಮತ್ತು ಎರಡನೇ ಅಲೆಯಿಂದ ಪಾಠ ಕಲಿತು ನಾವು ಸನ್ನದ್ಧರಾಗಬೇಕು. 3ನೇ ಅಲೆ ಈಗಾಗಲೇ ನಮ್ಮ ಮೇಲೆ ಬಂದು ಕುಳಿತಿದೆ. ಜುಲೈ ಕೊನೆಯ ವಾರದ ನಂತರ ಆರ್ ವ್ಯಾಲ್ಯೂ (ಒಬ್ಬರಿಂದ ಎಷ್ಟುಜನಕ್ಕೆ ಸೋಂಕು ಹರಡುತ್ತದೆ ಎಂಬ ಪ್ರಮಾಣ) 0.9 ಇದ್ದುದು 1ಕ್ಕೆ ಏರಿಕೆಯಾಗಿದೆ. ಕೇರಳದಲ್ಲಂತೂ ಆರ್ ದರ 1.1 ಇದೆ. ಇದು 3ನೇ ಅಲೆ ಆರಂಭದ ಸ್ಪಷ್ಟಸೂಚನೆ ಎಂದು ವರದಿ ಎಚ್ಚರಿಸಿದೆ.
ಲಸಿಕೆ ನೀಡಿದ್ದು ಬಹಳ ಕಡಿಮೆ:
ಕೋವಿಡ್ ವೈರಸ್‌ನ ಹೊಸ ಹೊಸ ರೂಪಾಂತರಗಳು ಬಂದರೆ ಅವು ಸಹಜವಾಗಿ ಅಥವಾ ಲಸಿಕೆಯಿಂದ ಬಂದ ರೋಗನಿರೋಧಕ ಶಕ್ತಿಯನ್ನು ಬೈಪಾಸ್ ಮಾಡಿ ಸೋಂಕು ಹರಡಬಹುದು. ದೇಶದಲ್ಲಿ ಸಾಕಷ್ಟುಜನರಿಗೆ ಲಸಿಕೆ ಕೂಡ ಸಿಕ್ಕಿಲ್ಲ. ಅಮೆರಿಕದಲ್ಲಿ ಶೇ.52ರಷ್ಟುಜನರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಿದ್ದರೆ, ಭಾರತದಲ್ಲಿ ಇನ್ನೂ ಶೇ.9ರಷ್ಟುಜನರಿಗೆ ಮಾತ್ರ ಎರಡು ಡೋಸ್ ಲಭಿಸಿದೆ. ಹೀಗಾಗಿ ಕೋವಿಡ್ ನಿಯಂತ್ರಿಸಲು ಆರೋಗ್ಯ ಕ್ಷೇತ್ರಕ್ಕೆ ವೈಜ್ಞಾನಿಕವಾಗಿ ಹೆಚ್ಚಿನ ಹಣ ತೊಡಗಿಸುವ ಅಗತ್ಯವಿದೆ ಎಂದೂ ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ