ಸಿಎಎ ಪೋರ್ಟಲ್ ಆರಂಭ, ಭಾರತದ ಪೌರತ್ವಕ್ಕಾಗಿ ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ!

By Suvarna NewsFirst Published Mar 12, 2024, 12:24 PM IST
Highlights

ಕೇಂದ್ರ ಬಿಜೆಪಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಸಿಎಎ ವೆಬ್‌ಸೈಟ್ ಲೈವ್ ಆರಂಭಗೊಂಡಿದೆ. ಮುಸ್ಲಿಮೇತರ ವಲಸಿಗರು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಹಾಗೂ ವೆಬ್‌ಸೈಟ್ ವಿವರ ಇಲ್ಲಿದೆ.

ನವದೆಹಲಿ(ಮಾ.12) ಕೇಂದ್ರ ಗೃಹ ಸಚಿವಾಲಯ ಪೌರತ್ವ ತಿದ್ದುಪಡಿ ಕಾಯ್ದೆಅಧಿಸೂಚನೆ ಹೊರಡಿಸುವ ಮೂಲಕ ತನ್ನ ವಾಗ್ದಾನ ಈಡೇರಿಸಿದೆ. ಭಾರತಕ್ಕೆ ವಲಸೆಬಂದಿರುವ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಈ ಕಾಯ್ದೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಇದೀಗ ಸಿಎಎ ವೆಬ್‌ಸೈಟ್ ಆರಂಭಗೊಂಡಿದೆ. ಇದೀಗ ಅರ್ಹರು ಕೇಂದ್ರ ಗೃಹ ಸಚಿವಾಲಯದ https://indiancitizenshiponline.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು.

ಭಾರತಕ್ಕೆ ವಲಸೆ ಬಂದು ನೆಲಸಿರುವ ನೆರೆಯ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತೀಯ ಪೌರತ್ವ ಕಲ್ಪಿಸುವ ಕಾಯ್ದೆಯಾಗಿದೆ. ಈ ಕಾಯ್ದೆಯಿಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಕ್ರೈಸ್ತ, ಜೈನ ಮತ್ತು ಪಾರ್ಸಿ ಜನರಿಗೆ ಸಿಎಎ ಅಡಿ ಭಾರತೀಯ ಪೌರತ್ವ ಅವಕಾಶ ಸಿಗುತ್ತದೆ. ಹೀಗೆ ವಲಸೆ ಬಂದಿರುವವರು ಸಿಎಎ ಅಡಿಯಲ್ಲಿ ಪೌರತ್ವ ಪಡೆಯಲು 2014 ಡಿಸೆಂಬರ್ 31ಕ್ಕಿಂತ ಮೊದಲು ಬಂದು ಇಲ್ಲಿ ನೆಲೆಸಿರಬೇಕು.

ಪೌರತ್ವ ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಟ್ಟಿದ್ದು ಯಾಕೆ? ಇಲ್ಲಿದೆ ಸಿಎಎ ಅರ್ಜಿ ಸಲ್ಲಿಕೆ ವಿವರ!

2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆ ಪಡೆದಿತ್ತು. ಆದರೆ ಅಧಿಸೂಚನೆ ಹಾಗೂ ಜಾರಿ ವಿಳಂಬವಾಗಿತ್ತು. ಹಲವು ಬಾರಿ ಅಧಿಸೂಚನೆ ಅವಧಿ ವಿಸ್ತರಿಸಲಾಗಿತ್ತು. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, 2024ರ ಲೋಕಸಭಾ ಚುನಾವಣೆಗೂ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದರು.

ಮಾರ್ಚ್ 11ರಂದು ಮೋದಿ ಸರ್ಕಾರ ಸಿಎಎ ಜಾರಿ ಅಧಿಸೂಚನೆಯನ್ನು ಹೊರಡಿಸಿತ್ತು.  ಅರ್ಹರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು https://indiancitizenshiponline.nic.in  ಭೇಟಿ ನೀಡಬೇಕು. ಬಳಿಕ ಪೌರತ್ವ ಕಾಯ್ದೆ 2019 ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಬೇಕು. ಬಳಿಕ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ನಮೂದಿಸಿ ಬೇಕು. ಇದರ ಜೊತೆಗೆ ಭಾರತ ಪ್ರವೇಶಿಸಿದ ವರ್ಷ ಹಾಗೂ ಇತರ ದಾಖಲೆಗಳನ್ನು ಸಲ್ಲಿಸಬೇಕು. 

ಲಗತ್ತಿಸಿದ ದಾಖಲೆಗಳನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲನೆ ನಡೆಸಿ ಅರ್ಹರಿಗೆ ಭಾರತೀಯ ಪೌರತ್ವ ನೀಡಲಿದೆ. ಸಾಮಾನ್ಯವಾಗಿ ಭಾರತಕ್ಕೆ ಬಂದು ಕನಿಷ್ಠ 11 ವರ್ಷ ನೆಲೆಸಿದ ವ್ಯಕ್ತಿಗಳು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆದರೆ ಸಿಎಎ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹರು ಕನಿಷ್ಠ 6 ವರ್ಷ ಭಾರತದಲ್ಲಿ ನೆಲೆಸಿರಬೇಕು.

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

ವಿಪಕ್ಷಗಳು ಸಿಎಎ ವಿರೋಧಿಸಿದೆ. ಚುನಾವಣೆ ಸಮೀಪದಲ್ಲಿ ಕೇಂದ್ರ ಸರ್ಕಾರ ಸಿಎಎ ಜಾರಿಗೊಳಿಸಿದೆ. ಇದರ ಹಿಂದೆ ಹುನ್ನಾರವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇತ್ತ ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಸಿಎಎ ಜಾರಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

click me!