ಬಸ್‌ ಚಾಲಕನ ಪುತ್ರ ಈಗ ಹಿಮಾಚಲ ಸಿಎಂ : ಹಾಲಿನ ಬೂತ್‌ ನಡೆಸುತ್ತಿದ್ದ ಸುಖು..!

By Kannadaprabha NewsFirst Published Dec 12, 2022, 9:10 AM IST
Highlights

ಬಸ್‌ ಡ್ರೈವರ್‌ ಪುತ್ರ ಹಿಮಾಚಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಖರ್ಗೆ, ರಾಹುಲ್‌, ಪ್ರಿಯಾಂಕಾ ಸಮ್ಮುಖದಲ್ಲಿ ಸುಖು ಶಪಥ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಕಾಂಗ್ರೆಸ್‌ ಅಧಿಕಾರದ ರಾಜ್ಯಗಳು 3ಕ್ಕೆ ಏರಿಕೆಯಾಗಿದೆ. 

ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) 15ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ (Congress) ಶಾಸಕಾಂಗ ಪಕ್ಷದ ನಾಯಕ ಸುಖ್ವಿಂದರ್‌ ಸಿಂಗ್‌ ಸುಖು (Sukhvinder Singh Sukhu) ಅವರು ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಚಾಲಕರೊಬ್ಬರ ಪುತ್ರರಾಗಿರುವ ಸುಖು ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್‌ ಅವರು ಗೋಪ್ಯತಾ ವಿಧಿ ಬೋಧಿಸಿದರು.

58 ವರ್ಷದ ಸುಖು ಜತೆಗೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮುಕೇಶ್‌ ಅಗ್ನಿಹೋತ್ರಿ (Mukesh Agnihotri) (60) ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮುಖಂಡರಾದ ರಾಹುಲ್‌ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸೇರಿದಂತೆ ಹಲವಾರು ಹಿರಿಯ ನಾಯಕರು ಉಪಸ್ಥಿತರಿದ್ದರು. ಹಿಮಾಚಲದಲ್ಲಿ ಕಾಂಗ್ರೆಸ್‌ ಸಿಎಂ ಪ್ರಮಾಣವಚನ ಸ್ವೀಕಾರದೊಂದಿಗೆ ದೇಶದಲ್ಲಿ ಕಾಂಗ್ರೆಸ್‌ ಆಳ್ವಿಕೆಯ ರಾಜ್ಯಗಳ ಸಂಖ್ಯೆ 3ಕ್ಕೇರಿದೆ. ರಾಜಸ್ಥಾನ, ಛತ್ತೀಸ್‌ಗಢದಲ್ಲೂ ಕಾಂಗ್ರೆಸ್‌ ಸರ್ಕಾರ ಇದೆ.

ಇದನ್ನು ಓದಿ: ಹಿಮಾಚಲ ಪ್ರದೇಶದ ನೂತನ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ ಸ್ವೀಕಾರ

ಹಾಲಿನ ಬೂತ್‌ ನಡೆಸುತ್ತಿದ್ದ ಸುಖು
ಹಿಮಾಚಲಪ್ರದೇಶದ ನೂತನ ಮುಖ್ಯಮಂತ್ರಿ ಸುಖವೀಂದರ್‌ ಸಿಂಗ್‌ ಸುಖು ಸಾಮಾನ್ಯ ಕುಟುಂಬದಿಂದ ಬಂದವರು. ತಂದೆ ಹಿಮಾಚಲ ಸಾರಿಗೆ ಸಂಸ್ಥೆಯಲ್ಲಿ ಬಸ್‌ ಚಾಲಕರಾಗಿದ್ದರು. ಸುಖು ಯುವಕರಾಗಿದ್ದಾಗ ಹಾಲಿನ ಬೂತ್‌ (Milk Booth) ನಡೆಸುತ್ತಿದ್ದರು. ಕಾಲೇಜಿನ ತರಗತಿ ಲೀಡರ್‌ ಚುನಾವಣೆಯಲ್ಲಿ ಗೆಲ್ಲುವುದರೊಂದಿಗೆ ರಾಜಕೀಯ ಆರಂಭಿಸಿದ ಅವರು ವಿದ್ಯಾರ್ಥಿ ಕಾಂಗ್ರೆಸ್‌ ಸೇರಿ ಮೇಲೇರಿದರು. ಬಳಿಕ ಶಿಮ್ಲಾ ನಗರ ಪಾಲಿಕೆಯಲ್ಲಿ 2 ಬಾರಿ ಸದಸ್ಯರಾಗಿದ್ದರು. 2003ರಿಂದ 4 ಬಾರಿ ಶಾಸಕರಾಗಿದ್ದಾರೆ. ಹಿಮಾಚಲ ಕಾಂಗ್ರೆಸ್ಸಿನ ಪ್ರಬಲ ನಾಯಕ ವೀರಭದ್ರ ಸಿಂಗ್‌ ಅವರ ಪ್ರಬಲ ವಿರೋಧಿ. 6 ವರ್ಷ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ದಕ್ಷಿಣ ಹಿಮಾಚಲದಿಂದ ಸಿಎಂ ಆದ ಮೊದಲ ಕಾಂಗ್ರೆಸ್ಸಿಗ ಇವರು.

ಮಾಜಿ ಪತ್ರಕರ್ತ ಈಗ ಡಿಸಿಎಂ
ಹಿಮಾಚಲ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಮುಕೇಶ್‌ ಅಗ್ನಿಹೋತ್ರಿ ಅವರು ಕಾಂಗ್ರೆಸ್ಸಿನ ಬ್ರಾಹ್ಮಣ ಮುಖ. ಪತ್ರಿಕೋದ್ಯಮ ಪದವಿ ಪಡೆದಿರುವ ಅವರು ‘ವೀರ ಪ್ರತಾಪ್‌’ ಪತ್ರಿಕೆಯ ವರದಿಗಾರರಾಗಿದ್ದರು (Reporter) . ಬಳಿಕ ‘ಜನಸತ್ತಾ‘ ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿದ್ದರು. ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಅವರು 2003ರಿಂದ 5 ಬಾರಿ ಶಾಸಕರಾಗಿದ್ದಾರೆ. ಮಾಜಿ ಸಿಎಂ ವೀರಭದ್ರ ಸಿಂಗ್‌ ಅವರ ಅತ್ಯಾಪ್ತರಾಗಿದ್ದ ಅವರು, ವೀರಭದ್ರ ಸಿಎಂ ಆಗಿದ್ದಾಗ ಸಚಿವ ಕೂಡ ಆಗಿದ್ದರು. 2017ರಿಂದ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಗ್ನಿಹೋತ್ರಿ ತಂದೆ ಸರ್ಕಾರಿ ಹುದ್ದೆಯಿಂದ ನಿವೃತ್ತರಾಗಿ 1988ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರಾದರೂ ಪರಾಭವಗೊಂಡಿದ್ದರು.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಸಿಎಂ ಸ್ಥಾನಕ್ಕೆ ಜಿದ್ದಾಜಿದ್ದಿ, ಪ್ರತಿಭಾ ಸಿಂಗ್‌-ಸುಖ್ವಿಂದರ್‌ ಫೈಟ್‌!

ಪ್ರತಿಭಾಗೆ ತಪ್ಪಿದ ಸಿಎಂ ಹುದ್ದೆ:
ಪಕ್ಷದ ಪ್ರಚಾರ ಸಾಥ್ಯ ಹೊತ್ತಿದ್ದ 58 ವರ್ಷದ ಸುಖ್ವಿಂದರ್‌ ಸಿಂಗ್ ಅವರನ್ನು ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ, ಹೈಕಮಾಂಡ್‌ ಸೂಚನೆ ಅನುಸಾರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಳಿಕ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಹೀಗಾಗಿ ಸಿಎಂ ಹುದ್ದೆಗಾಗಿ ಭಾರೀ ಕಸರತ್ತು ನಡೆಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್‌ ಅವರ ಪತ್ನಿ ಪ್ರತಿಭಾ ಸಿಂಗ್‌ ಅವರಿಗೆ ಭಾರಿ ನಿರಾಸೆಯಾಗಿದೆ. 

ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಅವರ ಪತ್ನಿ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಅವರು ಸಹ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿ ಆಗಿದ್ದರು. ಆದರೆ 40 ಶಾಸಕರ ಪೈಕಿ ಅವರಿಗೆ ಕೇವಲ 15 ಶಾಸಕರ ಬೆಂಬಲ ಇತ್ತು. ಇನ್ನೊಂದೆಡೆ, ಸುಖ್ವಿಂದರ್‌ ಸಿಂಗ್‌ಗೆ 20ಕ್ಕೂ ಹೆಚ್ಚು ಶಾಸಕರ ಬೆಂಬಲ ಇತ್ತು. ಮೇಲಾಗಿ ಪ್ರತಿಭಾ ಶಾಸಕಿ ಅಲ್ಲ, ಸಂಸದೆ. ಅವರು ಸಿಎಂ ಆದರೆ ಒಬ್ಬ ಶಾಸಕರ ರಾಜೀನಾಮೆ ಕೊಡಿಸಿ ಉಪಚುನಾವಣೆಗೆ ನಿಲ್ಲಬೇಕಿತ್ತು. ಮತ್ತೊಂದು ಚುನಾವಣೆ ವರಿಷ್ಠರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಸುಖ್ವಿಂದರ್‌ ಪರ ವರಿಷ್ಠರು ಒಲವು ತೋರಿದರು ಎನ್ನಲಾಗಿದೆ. ಆದರೂ ಪ್ರತಿಭಾ ಸಿಂಗ್, ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹಿಮಾಚಲದಲ್ಲಿ ಬಿಜೆಪಿ ಸೋಲು: ಕಾರ್ಯಕರ್ತರಿಂದ ಕೇಂದ್ರ ಸಚಿವರ ಟ್ರೋಲ್

click me!