
ನವದೆಹಲಿ: 2025ರ ಏಪ್ರಿಲ್ 23ರಿಂದ ಪಾಕಿಸ್ತಾನ ರೇಂಜರ್ಸ್‌ನ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಇಂದು ಬೆಳಗ್ಗೆ 10.30ಕ್ಕೆ ಅಮೃತಸರದಲ್ಲಿರುವ ಜಂಟಿ ಚೆಕ್‌ಪೋಸ್ಟ್ ಅಟ್ಟಾರಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಹಸ್ತಾಂತರ ಶಾಂತಿಯುತವಾಗಿ ಮತ್ತು ನಿಗದಿತ ನಿಯಮಗಳ ಪ್ರಕಾರ ನಡೆದಿದೆ.
ಪಂಜಾಬ್ ಬಳಿ ಆಕಸ್ಮಿಕವಾಗಿ ಗಡಿ ದಾಟಿದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧ ಶಾ ಅವರನ್ನು ಪಾಕಿಸ್ತಾನದ ಸೇನೆ ಸೆರೆ ಹಿಡಿದಿತ್ತು. ಯೋಧನ ಬಿಡುಗಡೆಗೆ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ಮಾತುಕತೆ ನಡೆದಿತ್ತು. ‘182ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಪಿ.ಕೆ. ಸಿಂಗ್ ಅವರನ್ನು ಪಾಕಿಸ್ತಾನ ಬಂಧಿಸಿತ್ತು. ಸೇನಾ ಸಮವಸ್ತ್ರದಲ್ಲಿದ್ದ ಅವರು ಬುಧವಾರ ರೈತರ ಜತೆಗೆ ವಿಶ್ರಾಂತಿಗಾಗಿ ನೆರಳನ್ನು ಅರಸಿ ಹೊರಟಿದ್ದರು. ಆ ಸಮಯದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ್ದಾರೆ. ಅವರನ್ನು ಪಾಕ್ ಸೇನೆ ಫಿರೋಜ್‌ಪುರ ಬಳಿ ವಶಕ್ಕೆ ಪಡೆದಿತ್ತು.
ಭಾರತದ ಕರೆಗೆ ಸ್ಪಂದಿಸದ ಪಾಕಿಸ್ತಾನ
ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿದ್ದ ಬಿಎಸ್‌ಎಫ್ ಯೋಧನನ್ನು ವಾಪಸ್ ಕರೆತರಲು ಭಾರತ ಸರ್ಕಾರ ಫ್ಲ್ಯಾಗ್ ಮೀಟಿಂಗ್‌ಗೆ ಕಾಲ್ ಮಾಡಿತ್ತು. ಆದ್ರೆ ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಭಾರತದ ಕರೆಗೆ ಸ್ಪಂದಿಸುತ್ತಿರಲಿಲ್ಲ. ಪಾಕಿಸ್ತಾನದ ರೇಂಜರ್ಸ್‌ನಿಂದ ಭಾರತಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅಂತಿಮವಾಗಿ ಬಿಎಸ್‌ಎಫ್ ಯೋಧನನ್ನು ಸುರಕ್ಷಿತವಾಗಿ ಕರೆತರುವ ಉದ್ದೇಶದಿಂದ ಡಿಪ್ಲೋಮೆಟಿಕ್ ಚಾನೆಲ್ ಸಹಾಯ ಪಡೆದುಕೊಂಡಿತ್ತು.
ಯೋಧನ ಬಿಡುಗಡೆಗೆ ಹಿಂದೇಟು ಯಾಕೆ?
ಬಿಎಸ್‌ಎಫ್ ಮಾಜಿ ಅಧಿಕಾರಿಗಳ ಪ್ರಕಾರ, ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ಪ್ರವೇಶಿಸೋದು ಮಹಾ ಅಪರಾಧವೇನಲ್ಲ. ಕೆಲವು ಪರಿಸ್ಥಿತಿಗಳಲ್ಲಿ ಆಕಸ್ಮಿಕವಾಗಿಮ ಗಡಿಯನ್ನು ದಾಟಿರುತ್ತಾರೆ. ಈ ಹಿಂದೆಯೂ ಎರಡು ದೇಶಗಳ ನಡುವೆ ಇಂತಹ ಘಟನೆಗಳು ನಡೆದಿದ್ದು, ಮಾತುಕತೆ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಕೆಲವು ಗಂಟೆಗಳ ಬಳಿಕ ಯೋಧರನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತೆ ಮತ್ತು ಸಮಸ್ಯೆಯೂ ಇತ್ಯರ್ಥವಾಗುತ್ತದೆ ಎಂದು ಹೇಳುತ್ತಾರೆ.
ಈ ಪ್ರಕರಣ ಸಂಭವಿಸಿದಾಗ ಜಮ್ಮು ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆದಿತ್ತು. ಹಾಗಾಗಿ ಬಿಎಸ್‌ಎಫ್ ಯೋಧನನ್ನು ಹಸ್ತಾಂತರಿಸುವ ಪ್ರಕ್ರಿಯೆ ವಿಳಂಬವಾಗಿರಬಹುದು. ಪಹಲ್ಗಾಮ್ ದಾಳಿ ಬಳಿಕ ಭಾರತ ಆಫರೇಷನ್ ಸಿಂದೂರ್ ಕಾರ್ಯಚರಣೆ ನಡೆಸಿದೆ. ಇತ್ತ ಪಾಕಿಸ್ತಾನದಿಂದಲೂ ಭಾರತದ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆದಿತ್ತು. ಇದೀಗ ಎರಡೂ ದೇಶಗಳ ನಡುವಿನ ಪರಿಸ್ಥಿತಿ ಶಾಂತವಾಗಿದ್ದು, ಬಿಎಸ್‌ಎಫ್ ಯೋಧನ ಬಿಡುಗಡೆಯಾಗಿದೆ ಎಂದು ಮಾಜಿ ಅಧಿಕಾರಿಗಳು ಹೇಳುತ್ತಾರೆ.
ಕಾಶ್ಮೀರದಲ್ಲಿ 3 ಲಷ್ಕರ್ ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆಗಳು ಮಂಗಳವಾರ ನಡೆಸಿದ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಮೂವರನ್ನು ಉಗ್ರರನ್ನು ಹತ್ಯೆಗೈಯಲಾಗಿದೆ. ಹತ್ಯೆಯಾದವರ ಪೈಕಿ ಲಷ್ಕರ್ ಎ ತೊಯ್ಬಾ ಕಮಾಂಡರ್ ಶಾಹಿದ್ ಕುಟ್ಟಾಯ್ ಕೂಡಾ ಸೇರಿದ್ದಾನೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಆರಂಭಿಸಿದ್ದವು. ಆ ವೇಳೆ ಉಗ್ರರು ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿಗೆ ಯತ್ನಿಸಿದರು. ಆಗ ಸೇನೆ ನಡೆಸಿದ ಪ್ರತಿದಾಳಿ ವೇಳೆ ಮೂವರು ಉಗ್ರರು ಹತರಾಗಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮೇ 19ರಂದು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಪಾಕಿಸ್ತಾನದೊಂದಿಗಿನ ಪರಿಸ್ಥಿತಿಯ ಬಗ್ಗೆ ವಿವರಿಸಲಿದ್ದಾರೆ. ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ಭಾರತ ನಡೆಸಿದ ದಾಳಿ, ಎರಡೂ ದೇಶಗಳ ನಡುವಿನ ಸಂಘರ್ಷ ಮತ್ತು ನಂತರ ನಡೆದ ಕದನ ವಿರಾಮದ ಬಗ್ಗೆ ಮಿಸ್ರಿಯವರು ಮೇ 19ರಂದು ಸಮಿತಿಗೆ ಮಾಹಿತಿ ನೀಡಲಿದ್ದಾರೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ