Price Hike: ಹೊಸ ವರ್ಷಕ್ಕೆ ಮತ್ತಷ್ಟು ಬೆಲೆ ಏರಿಕೆ ಶಾಕ್‌: 4ನೇ ಬಾರಿಗೆ ಹೊಡೆತ!

By Kannadaprabha NewsFirst Published Dec 26, 2021, 3:00 AM IST
Highlights

* ಕಚ್ಚಾವಸ್ತು ಬೆಲೆ, ಉತ್ಪಾದನಾ ವೆಚ್ಚ ಹೆಚ್ಚಳ

* ಹೊಸ ವರ್ಷಕ್ಕೆ ಮತ್ತಷ್ಟುಬೆಲೆ ಏರಿಕೆ ಶಾಕ್‌

* ದಿನಬಳಕೆ ವಸ್ತು, ಎಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌ ದರ ಏರಿಸಲು ಸಿದ್ಧತೆ

* ಶೇ.4ರಿಂದ ಶೇ.10ರಷ್ಟುಹೆಚ್ಚಳ ಸಾಧ್ಯತೆ

* ಒಂದೇ ವರ್ಷದಲ್ಲಿ ದಾಖಲೆಯ 4ನೇ ಬಾರಿಗೆ ಏರಿಕೆ ಹೊಡೆತ

 

ನವದೆಹಲಿ(ಡಿ.26): ಈಗಾಗಲೇ ಬೆಲೆ ಏರಿಕೆಯ ಹೊಡೆತ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ಹೊಸ ವರ್ಷದಲ್ಲಿ ಮತ್ತೆ ದರ ಏರಿಕೆಯ ಭರ್ಜರಿ ಶಾಕ್‌ ಹೊಡೆಯುವ ಸಾಧ್ಯತೆ ಇದೆ. ಎಫ್‌ಎಂಸಿಜಿ ಕಂಪನಿಗಳು (ಅತ್ಯಂತ ವೇಗವಾಗಿ ಮಾರಾಟವಾಗುವ ದಿನ ಬಳಕೆ ವಸ್ತುಗಳ ಉತ್ಪಾದನೆ ಕಂಪನಿಗಳು), ಎಲೆಕ್ಟ್ರಾನಿಕ್‌ ಮತ್ತು ಆಟೋಮೊಬೈಲ್‌ ಕಂಪನಿಗಳು ಇನ್ನು 2-3 ತಿಂಗಳಲ್ಲಿ ಕನಿಷ್ಠ ಶೇ.4ರಿಂದ ಗರಿಷ್ಠ ಶೇ.10ರವರೆಗೂ ತಮ್ಮ ಉತ್ಪನ್ನಗಳ ದರ ಏರಿಕೆಯಾಗುವ ಸುಳಿವು ನೀಡಿವೆ.

ಈ ಕಂಪನಿಗಳು 2020ರ ಡಿಸೆಂಬರ್‌ ಬಳಿಕ ಈಗಾಗಲೇ 3 ಬಾರಿ ನಾನಾ ಸ್ತರದಲ್ಲಿ ದರ ಏರಿಕೆ ಮಾಡಿವೆ. ಇನ್ನು 2-3 ತಿಂಗಳಲ್ಲಿ ಮತ್ತೊಮ್ಮೆ ದರ ಏರಿಕೆಯಾದಲ್ಲಿ ಅದು, ಕೇವಲ ಒಂದು ವರ್ಷದ ಅವಧಿಯಲ್ಲಿ ದಾಖಲೆಯ 4ನೇ ಏರಿಕೆಯಾಗಲಿದೆ.

ಬೆಲೆ ಏರಿಕೆ ಏಕೆ?

ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುಗಳ ದರ ಏರಿಕೆ ಮತ್ತು ಸಾಗಣೆ ವೆಚ್ಚದಲ್ಲಿ ಭಾರೀ ಏರಿಕೆ ದಾಖಲಾಗಿರುವ ಹಿನ್ನೆಲೆಯಲ್ಲಿ ಉತ್ಪಾದಿತ ವಸ್ತುಗಳ ದರ ಏರಿಕೆ ಅನಿವಾರ್ಯ. ಈ ಏರಿಕೆ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೂ ದರ ಏರಿಕೆ ಮಾಡದೆ ಅನ್ಯ ಮಾರ್ಗವೇ ಇಲ್ಲ ಎಂದು ಕಂಪನಿಗಳು ತಮ್ಮ ಅಳಲು ತೋಡಿಕೊಂಡಿವೆ.

ಯಾವ ವಸ್ತು ದುಬಾರಿ?

ಸೋಪ್‌, ಎಣ್ಣೆ, ಟೂತ್‌ಪೇಸ್ಟ್‌, ಹಾಲು, ಹಣ್ಣು, ತರಕಾರಿ, ಕಾಫಿ, ಟೀ, ತಂಪು ಪಾನೀಯ ಮೊದಲಾದ ವಸ್ತುಗಳ ಬೆಲೆ 2020ರ ಡಿಸೆಂಬರ್‌ ಬಳಿಕ ಶೇ.5-12ರಷ್ಟುಏರಿಕೆಯಾಗಿದ್ದು, ಮುಂದಿನ 2-3 ತಿಂಗಳಲ್ಲಿ ಮತ್ತೆ ಶೇ.4-10ರಷ್ಟುಏರಿಕೆಯಾಗಲಿವೆ. ಇನ್ನು ರೆಫ್ರಿಜರೇಟರ್‌, ವಾಷಿಂಗ್‌ ಮಶಿನ್‌, ಎ.ಸಿ ಮುಂತಾದ ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಈಗಾಗಲೇ ಶೇ.3ರಿಂದ 5ರಷ್ಟುಬೆಲೆ ಏರಿಕೆಯಾಗಿದೆ. ಮುಂದಿನ ತಿಂಗಳು ಈ ಬೆಲೆ ಶೇ.4ರಿಂದ 10ರಷ್ಟುಹೆಚ್ಚಾಗುವ ಸಾಧ್ಯತೆ ಇದೆ.

ವಾಹನಗಳ ಬೆಲೆಯೂ ತುಟ್ಟಿ

ಮತ್ತೊಂದೆಡೆ ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳೂ ಸಹ ಬೆಲೆ ಏರಿಕೆ ಮಾಡಲಿವೆ. ವಾಹನಗಳ ಬೆಲೆ ಶೇ.4ರಷ್ಟುಹೆಚ್ಚಾಗುವ ಸಾಧ್ಯತೆ ಇದೆ.

ದರ ಏರಿಕೆಗೆ ಕಾರಣಗಳು

ಸಮುದ್ರದ ಮೂಲಕ ನಡೆವ ಸಂಚಾರದ ದರ ಹೆಚ್ಚಳ

ಡೀಸೆಲ್‌ ದರ ಏರಿಕೆ

ಉಕ್ಕಿನ ದರ ಏರಿಕೆ

ಕಚ್ಚಾ ತೈಲ, ಪಾಮ್‌ ಎಣ್ಣೆ, ಪ್ಯಾಕೇಜಿಂಗ್‌ ವೆಚ್ಚ ದುಬಾರಿ

ವಲಯ ಡಿ.2020ರ ಬಳಿಕ ಏರಿಕೆ ಜ.2022ರಿಂದ ಏರಿಕೆ

ದಿನಬಳಕೆ ವಸ್ತು ಶೇ.5-12 ಶೇ.4-10

ಎಲೆಕ್ಟ್ರಾನಿಕ್‌ ವಸ್ತು ಶೇ.3-5 ಶೇ.4-10

ಆಟೋಮೊಬೈಲ್‌ ಶೇ.2-3 ಶೇ.4-5

click me!