ಉದ್ಯಮಿ BR ಶೆಟ್ಟಿ v/s BOB: 1.44 ಲಕ್ಷ ಕೋಟಿ ಪರಿಹಾರ ಕೇಳಿದ ಮಾಜಿ ಬಿಲಿಯನೇರ್, ದೊಪ್ಪೆಂದು ಬಿದ್ದ ಬ್ಯಾಂಕ್ ಷೇರು!

Published : Oct 14, 2026, 10:31 AM IST
bank of baroda VS BR Shetty

ಸಾರಾಂಶ

ಎನ್‌ಎಮ್‌ಸಿ ಹೆಲ್ತ್‌ಕೇರ್ ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ವಿರುದ್ಧ 1.44 ಲಕ್ಷ ಕೋಟಿ ರೂ. ಪರಿಹಾರ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಮುಂದಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳು ವಂಚನೆಗೆ ನೆರವಾಗಿದ್ದಾರೆ ಎಂದು ಅವರು ಆರೋಪಿಸಿದ್ದು, ಬ್ಯಾಂಕ್ ಈ ಆರೋಪಗಳನ್ನು ತಳ್ಳಿಹಾಕಿದೆ. ಈ ಸುದ್ದಿಯ ಬೆನ್ನಲ್ಲೇ ಬ್ಯಾಂಕ್ ಆಫ್ ಬರೋಡಾ ಷೇರುಗಳು ಶೇಕಡಾ 3ರಷ್ಟು ಕುಸಿತ ಕಂಡಿವೆ.

ಎನ್‌ಎಮ್‌ಸಿ ಹೆಲ್ತ್‌ಕೇರ್ (NMC Healthcare) ಹಾಗೂ ಯುಎಇ ಎಕ್ಸ್‌ಚೇಂಜ್ ಸಂಸ್ಥಾಪಕ, ಕರಾವಳಿ ಮೂಲದ ಭಾರತೀಯ ಉದ್ಯಮಿ , ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನೆಲೆಗೊಂಡಿರುವ ಹಲವಾರು ಕಂಪನಿಗಳ ಸ್ಥಾಪಕ ಬಿ.ಆರ್. ಶೆಟ್ಟಿ (ಬವಗುತ್ತು ರಘುರಾಮ್ ಶೆಟ್ಟಿ) ಅವರು, ಬ್ಯಾಂಕ್ ಆಫ್ ಬರೋಡಾ ಮತ್ತು ಇತರ 25 ಪ್ರತಿವಾದಿಗಳ ವಿರುದ್ಧ ಸರಿಸುಮಾರು 1.44 ಲಕ್ಷ ಕೋಟಿ ರೂಪಾಯಿ ($15 ಬಿಲಿಯನ್) ಪರಿಹಾರ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಮುಂದಾಗಿದ್ದಾರೆ. ಬ್ಯಾಂಕ್‌ನ ಕೆಲವು ಹಿರಿಯ ಅಧಿಕಾರಿಗಳು ತಮ್ಮ ಗ್ರೂಪ್ ಕಂಪನಿಗಳಲ್ಲಿ ನಡೆದ ವಂಚನೆಯ ವಹಿವಾಟುಗಳಿಗೆ ನೆರವು ನೀಡಿದ್ದಾರೆ ಹಾಗೂ ತಾವು ಎಂದಿಗೂ ಸಹಿ ಮಾಡದಿರುವ ನಕಲಿ ವೈಯಕ್ತಿಕ ಖಾತರಿ ಪತ್ರಗಳನ್ನು ಬಳಸಿ ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದ್ದಾರೆ ಎಂದು ಶೆಟ್ಟಿ ಆರೋಪಿಸಿದ್ದಾರೆ.

ಶೆಟ್ಟಿ ಅವರ ಪ್ರಮುಖ ಆರೋಪಗಳು:

ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಲು ಸಿದ್ಧಪಡಿಸಲಾದ ಅರ್ಜಿಯಲ್ಲಿ ಶೆಟ್ಟಿ ಅವರು ಮುಖ್ಯವಾಗಿ ಮೂರು ಭಾಗಗಳಲ್ಲಿ ಪರಿಹಾರವನ್ನು ಕೋರಿದ್ದಾರೆ. ನೇರ ನಷ್ಟಕ್ಕೆ ಪರಿಹಾರವಾಗಿ $5 ಬಿಲಿಯನ್, ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಪರಿಣಾಮಕಾರಿ ಹಾನಿಗೆ $5 ಬಿಲಿಯನ್ ಮತ್ತು ಖ್ಯಾತಿ, ಬ್ರ್ಯಾಂಡ್ ಮೌಲ್ಯ ಮತ್ತು ಸದ್ಭಾವನೆಗೆ ಆದ ಧಕ್ಕೆಗೆ $5 ಬಿಲಿಯನ್ ಇದರ ಜೊತೆಗೆ ಪ್ರಕರಣ ಇತ್ಯರ್ಥವಾಗುವವರೆಗೆ ಒಟ್ಟು ಹಾನಿಯ ಮೊತ್ತಕ್ಕೆ ವಾರ್ಷಿಕ ಶೇಕಡಾ 18 ರಷ್ಟು ಬಡ್ಡಿಯನ್ನು ನೀಡಬೇಕೆಂದು ಅವರು ಉಲ್ಲೇಖಿಸಿದ್ದಾರೆ.

ಅರ್ಜಿಯ ಪ್ರಕಾರ, 2019 ರ ಸುಮಾರಿಗೆ ಬ್ಯಾಂಕ್ ಆಫ್ ಬರೋಡಾ ಎನ್‌ಎಮ್‌ಸಿ ಗ್ರೂಪ್‌ನ ಪ್ರಮುಖ ಬ್ಯಾಂಕರ್ ಆಗಿತ್ತು. ಈ ಅವಧಿಯಲ್ಲಿ, ಮುಕ್ತ ಮಾರುಕಟ್ಟೆಯ ಸ್ವತಂತ್ರ ಪೂರೈಕೆದಾರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ಹಣವನ್ನು ಬೇರೆಡೆಗೆ ವರ್ಗಾಯಿಸಲು ಬ್ಯಾಂಕ್ ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ. ಬ್ಯಾಂಕ್‌ನ ಆಂತರಿಕ ವ್ಯವಸ್ಥೆಯಲ್ಲಿ 100 ಕ್ಕೂ ಹೆಚ್ಚು ಅಕ್ರಮ ಹಣ ವರ್ಗಾವಣೆ ಎಚ್ಚರಿಕೆಗಳು ಬಂದಿದ್ದರೂ, ಬ್ಯಾಂಕ್ ಅಧಿಕಾರಿಗಳು ಅವುಗಳನ್ನು ಗಂಭೀರವಾಗಿ ಪರಿಶೀಲಿಸದೆ ಮುಚ್ಚಿಹಾಕಿದ್ದಾರೆ ಎಂಬುದು ಶೆಟ್ಟಿ ಆರೋಪವಾಗಿದೆ.

ಇದಲ್ಲದೆ, ಬ್ಯಾಂಕ್ ಆಫ್ ಬರೋಡಾ ಜೂನ್ 2026 ರಲ್ಲಿ ಅಬುಧಾಬಿ ಗ್ಲೋಬಲ್ ಮಾರ್ಕೆಟ್‌ನಲ್ಲಿ ಎನ್‌ಎಮ್‌ಸಿ ಸಮೂಹದ ಜಂಟಿ ನಿರ್ವಾಹಕರೊಂದಿಗೆ ಸರಿ ಸುಮಾರು ₹5,700 ಕೋಟಿ ಮೊತ್ತಕ್ಕೆ ಮಾಡಿಕೊಂಡ ಪ್ರತ್ಯೇಕ ಇತ್ಯರ್ಥವನ್ನು ಶೆಟ್ಟಿ ಪ್ರಶ್ನಿಸಿದ್ದಾರೆ. ಈ ಇತ್ಯರ್ಥದಲ್ಲಿ ತಾವೊಬ್ಬ ಕಕ್ಷಿದಾರನಾಗಿರಲಿಲ್ಲ, ಹೀಗಾಗಿ ಇದು ಬ್ಯಾಂಕ್ ವಿರುದ್ಧದ ತಮ್ಮ ವೈಯಕ್ತಿಕ ಹಕ್ಕುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರೋಪಗಳನ್ನು ತರಸ್ಕರಿಸಿದ ಬ್ಯಾಂಕ್ ಆಫ್ ಬರೋಡಾ:

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಬರೋಡಾ, ಈ ಮೊಕದ್ದಮೆಯು ಇನ್ನು ಔಪಚಾರಿಕವಾಗಿ ನ್ಯಾಯಾಲಯದಲ್ಲಿ ಸಲ್ಲಿಸಲ್ಪಟ್ಟಿಲ್ಲ ಮತ್ತು ಆರೋಪಗಳು ಇನ್ನೂ ಸಾಬೀತಾಗಿಲ್ಲ ಎಂದಿದೆ. ಒಂದು ವೇಳೆ ದಾವೆ ಸಲ್ಲಿಕೆಯಾದರೆ, ಬ್ಯಾಂಕ್ ಅದನ್ನು ನ್ಯಾಯಾಲಯದಲ್ಲಿ ದೃಢವಾಗಿ ಎದುರಿಸಲಿದೆ ಎಂದು ಸ್ಪಷ್ಟಪಡಿಸಿದೆ.

ಬಿ.ಆರ್. ಶೆಟ್ಟಿ ಅವರಿಂದ ಭಾರತ ಮತ್ತು ಯುಎಇ ಎರಡೂ ದೇಶಗಳಲ್ಲಿ ಒಟ್ಟು ₹2,800 ಕೋಟಿಗೂ ಹೆಚ್ಚು ಬಾಕಿ ವಸೂಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈಗಾಗಲೇ ಅವರ ವಿರುದ್ಧ ಹಲವು ತೀರ್ಪುಗಳು ಬಂದಿವೆ ಎಂದು ಬ್ಯಾಂಕ್ ಉಲ್ಲೇಖಿಸಿದೆ. 2021 ರಲ್ಲಿ ಕರ್ನಾಟಕ ಹೈಕೋರ್ಟ್ ಶೆಟ್ಟಿ ಅವರ ಆಸ್ತಿ ವಿಲೇವಾರಿಗೆ ತಡೆ ನೀಡಿತ್ತು. ನಂತರ ಅವರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಮುಂದೆ ದಿವಾಳಿತನವನ್ನು ಪ್ರತಿಪಾದಿಸಿದ್ದರು. ಇದೇ ರೀತಿಯ ಆರೋಪಗಳೊಂದಿಗೆ ಶೆಟ್ಟಿ ಅವರು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯನ್ನು ಜುಲೈ 2024 ರಲ್ಲಿ ವಜಾಗೊಳಿಸಲಾಗಿತ್ತು ಎಂಬುದನ್ನೂ ಬ್ಯಾಂಕ್ ಉಲ್ಲೇಖಿಸಿದೆ.

ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ:

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕ್ ಆಫ್ ಬರೋಡಾ ಷೇರುಗಳು ಶೇಕಡಾ 3 ರಷ್ಟು ಕುಸಿತ ಕಂಡು, ನಿಫ್ಟಿ 100 ಸೂಚ್ಯಂಕದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದ ಬ್ಯಾಂಕ್ ಆಗಿ ಹೊರಹೊಮ್ಮಿತು. ಪ್ರಸ್ತುತ ಬ್ಯಾಂಕಿನ ಮಾರುಕಟ್ಟೆ ಬಂಡವಾಳೀಕರಣವು ಸರಿಸುಮಾರು ₹1.2 ಲಕ್ಷ ಕೋಟಿಯಷ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ಆರ್ಥಿಕ ಪ್ರಗತಿಯ ಹಿಂದಿನ ರಹಸ್ಯವೇನು? ಬ್ಲೂಮ್‌ಬರ್ಗ್ ವೇದಿಕೆಯಲ್ಲಿ ಮೋದಿ ಭಾಷಣ
Bangla Sahib Gurudwara Row: ಪಂಜಾಬ್ ಚುನಾವಣೆಗೆ ಮುನ್ನವೇ ಬಾಂಗ್ಲಾ ಸಾಹಿಬ್ ಗುರುದ್ವಾರ ರಣರಂಗ!