
ಗಾಜಿಯಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ 15 ವರ್ಷದ ಬಾಲಕನ ಮೇಲೆ ಫಿಟ್‌ಬುಲ್ ಶ್ವಾನವೊಂದು ಮರಣಾಂತಿಕವಾಗಿ ದಾಳಿ ನಡೆಸಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ತನ್ನ ಮೇಲೆ ಮುಗಿಬಿದ್ದು ದಾಳಿ ಮಾಡುತ್ತಿರುವ ನಾಯಿಯಿಂದ ಪಾರಾಗಲು ಬಾಲಕ ಹೋರಾಡುತ್ತಿದ್ದರೆ, ಇತ್ತ ಅಲ್ಲೇ ಇದ್ದ ಕೆಲ ದೊಡ್ಡವರು ನಾಯಿಯಿಂದ ಬಾಲಕನನ್ನು ಬಿಡಿಸಲು ಹೋಗದೇ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿರುವುದು ಕಾಣುತ್ತಿದೆ. ದೆಹಲಿಗೆ ಸಮೀಪದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ಅಲ್ತಾಫ್ ಫಿಟ್‌ಬುಲ್ ದಾಳಿಗೆ ತುತ್ತಾದ ಬಾಲಕ, ಮನೆಯೊಂದರ ಗೇಟ್ ಮುಂಭಾಗದಲ್ಲಿ ನಿಂತಿದ್ದ ವೇಳೆ ಈತನ ಮೇಲೆ ನಾಯಿ ದಾಳಿ ಮಾಡಿ ಕೆಳಕ್ಕೆ ಬೀಳಿಸಿದೆ. ಹಲವು ನಿಮಿಷಗಳ ಹೋರಾಟದ ಬಳಿಕ ಬಾಲಕ ನಾಯಿಯಿಂದ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸಮೀಪದ ಮನೆಯತ್ತ ಹೋಗಿದ್ದಾನೆ. ಆದರೆ ಫಿಟ್‌ಬುಲ್ ಆತನನ್ನು ಬಿಡಲು ಸಿದ್ಧವಿಲ್ಲದೇ ಮತ್ತೆ ದಾಳಿ ಮಾಡಿದೆ. ಈ ವೇಳೆ ಮತ್ತೊಬ್ಬ ಹುಡುಗ ಆ ಜಾಗಕ್ಕೆ ಓಡಿ ಹೋಗಿ ನಾಯಿಯಿಂದ ರಕ್ಷಿಸಲು ನೋಡುತ್ತಾನೆ. ಆದರೆ ಫಿಟ್ಬುಲ್‌ಗೆ ಬೆದರಿದ ಆತ ಅಸಹಾಯಕನಾಗಿ ದೂರ ನಿಂತಿದ್ದನ್ನು ಕಾಣಬಹುದು. ಆದರೆ ವ್ಯಕ್ತಿಯೊಬ್ಬರು ಪ್ರಾರಂಭದಿಂದ ಕೊನೆವರೆಗೂ ಸಿನಿಮಾದಂತೆ ಈ ದೃಶ್ಯವನ್ನು ನೋಡುತ್ತಾ ನಿಂತಿದ್ದು ಅಚ್ಚರಿಗೆ ಕಾರಣವಾಗಿದೆ.
#Watch: ಆಜಾನುಬಾಹು ವ್ಯಕ್ತಿಯ ಮೇಲೆ ದಾಳಿ ಮಾಡಿದ ರಕ್ಕಸ ಬೀದಿ ನಾಯಿಗಳು; ಇನ್ನು ಚಿಕ್ಕ ಮಕ್ಕಳ ಪಾಡೇನು?
ರಕ್ಷಣೆಗೆ ಬಂದ ಬೀದಿ ನಾಯಿಗಳು
ಬಾಲಕನ ರಕ್ಷಣೆಗೆ ಮನುಷ್ಯರು ಬಾರದೇ ಇದ್ದರೂ ಅಲ್ಲೇ ಇದ್ದ ಬೀದಿ ನಾಯಿಗಳು ಫಿಟ್‌ಬುಲ್ ಮೇಲೆ ದಾಳಿಗೆ ಮುಂದಾಗಿವೆ. ಆದರೆ ಈ ಫಿಟ್‌ಬುಲ್ ಆ ನಾಯಿಗಳನ್ನು ಕೂಡ ಕಚ್ಚಿ ಓಡಿಸಿದೆ. ಈ ವೇಳೆ ಆ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಬಾಲಕ ಯಶಸ್ವಿಯಾಗಿದ್ದಾರೆ. ಇತ್ತ ಬಾಲಕ ಮನೆಯೊಳಗೆ ಸೇರಿದ ಬಳಿಕ ಫಿಟ್‌ಬುಲ್ ದೂರ ಹೋಗಿದೆ. ಘಟನೆಯಿಂದಾಗಿ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಬಾಲಕನನ್ನು ದೆಹಲಿಯ ಜಿಟಿಬಿ ನಗರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರದೇಶದಲ್ಲಿ ಫಿಟ್‌ಬುಲ್ ಶ್ವಾನವನ್ನು ಸಾಕುವುದನ್ನು ಈ ಹಿಂದೆಯೇ ನಗರ ಪಾಲಿಕೆ ನಿಷೇಧಿಸಿದೆ. ಆದರೂ ಈ ಘಟನೆ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪದರಲ್ಲೇ ವೈರಲ್ ಆಗಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
14 ಜನರನ್ನು ಐಐಟಿ ಬಾಂಬೆ ಕ್ಯಾಂಪಸ್ಸಲ್ಲಿ ಕಚ್ಚಿದ ನಾಯಿ ರೇಬೀಸ್‌ನಿಂದ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ