
ನವದೆಹಲಿ/ಬೀಜಿಂಗ್(ಜೂ.07): ಕಳೆದೊಂದು ತಿಂಗಳಿನಿಂದ ಪೂರ್ವ ಲಡಾಖ್ ಭಾಗದಲ್ಲಿ ಉದ್ಭವಿಸಿರುವ ಗಡಿ ಸಂಘರ್ಷವನ್ನು ಕೊನೆಗಾಣಿಸಲು ಭಾರತ ಹಾಗೂ ಚೀನಾ ನಡುವೆ ಸೇನಾಧಿಕಾರಿಗಳ ಮಟ್ಟದ ಮಾತುಕತೆ ಶನಿವಾರ ನಡೆಯಿತು. ಮಾತುಕತೆಯ ವಿವರಗಳನ್ನು ಎರಡೂ ದೇಶಗಳು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಎರಡೂ ದೇಶಗಳು ತಮ್ಮ ನಿಲುವಿನ ವಿಚಾರವಾಗಿ ಬಿಗಿಪಟ್ಟು ಹಿಡಿದಿವೆ ಎಂದು ಮೂಲಗಳು ತಿಳಿಸಿವೆ.
ಮೂರು ತಾಸು ನಡೆದ ಈ ಸಭೆ ವೇಳೆ, ಏಪ್ರಿಲ್‌ಗೆ ಮುನ್ನ ಲಡಾಖ್ ಗಡಿಯ ಪ್ಯಾಂಗೋಂಗ್ ಸರೋವರ ಪ್ರದೇಶದಲ್ಲಿ ಯಾವ ಸ್ಥಿತಿ ಇತ್ತೋ, ಅದನ್ನೇ ಪುನಾಸ್ಥಾಪಿಸಬೇಕು. ಜತೆಗೆ ಗಲ್ವಾನ್ ಕಣಿವೆಯಲ್ಲಿ ಚೀನಾ ತನ್ನ ಸೇನಾ ಬಲವನ್ನು ಕಡಿತಗೊಳಿಸಬೇಕು. ಹೆಚ್ಚುವರಿ ಯೋಧರನ್ನು ಅವರ ಮೂಲ ನೆಲೆಗಳಿಗೆ ವಾಪಸ್ ಕಳಿಸಬೇಕು ಎಂದು ಭಾರತ ಪ್ರಮುಖವಾಗಿ ಪ್ರಸ್ತಾಪಿಸಿತು ಎನ್ನಲಾಗಿದೆ.
ಗಡಿ ತಿಕ್ಕಾಟ: ಭಾರತ, ಚೀನಾ ಮಾತುಕತೆ!
ಇದಕ್ಕೆ ಪ್ರತ್ಯುತ್ತರ ನೀಡಿದ ಚೀನಾ, ಲಡಾಖ್ ಗಡಿಯಲ್ಲಿ ರಸ್ತೆ ನಿರ್ಮಾಣವನ್ನು ಭಾರತ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿತು ಎಂದು ಹೇಳಲಾಗಿದೆ. ಆದರೆ ಈ ರಸ್ತೆ ಕಾಮಗಾರಿ ಭಾರತದ ಭೂಭಾಗದೊಳಗೆ ನಡೆಯುತ್ತಿದೆ. ಇದನ್ನು ಚೀನಾ ಆಕ್ಷೇಪಿಸುವುದಕ್ಕೆ ಯಾವುದೇ ಕಾರಣ ಇಲ್ಲ ಎಂದು ಭಾರತ ಪ್ರತಿಪಾದಿಸಿತು ಎಂದು ವರದಿಗಳು ತಿಳಿಸಿವೆ.
ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಅವರು ಭಾರತವನ್ನು ಪ್ರತಿನಿಧಿಸಿದರೆ, ಮೇಜರ್ ಜನರಲ್ ಲಿಯು ಲಿನ್ ಅವರು ಚೀನಾ ಮುಂದಾಳತ್ವ ವಹಿಸಿದ್ದರು. ಚುಶೂಲ್‌ನ ವಾಸ್ತವಿಕ ಗಡಿ ರೇಖೆಯಲ್ಲಿರುವ ಚೀನಾದ ಭಾಗಕ್ಕೆ ಸೇರಿದ ಮಾಲ್ಡೋದಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಮಾತುಕತೆ ನಿಗದಿಯಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ 3 ತಾಸು ವಿಳಂಬವಾಯಿತು. ಭಾರತೀಯ ನಿಯೋಗವನ್ನು ಚೀನಾದ ಹಿರಿಯ ಅಧಿಕಾರಿಗಳು ಆದರದಿಂದ ಬರಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ಮಾತುಕತೆಯ ಕುರಿತಂತೆ ಸೇನೆಯಾಗಲೀ, ವಿದೇಶಾಂಗ ಸಚಿವಾಲಯವಾಗಲೀ ಅಧಿಕೃತ ಮಾಹಿತಿ ನೀಡಿಲ್ಲ. ಮಾತುಕತೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಅಧಿಕಾರಿಗಳು ಮಾತುಕತೆಯ ವಿವರಗಳನ್ನು ತಮ್ಮ ಹಿರಿಯ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಭಾರತ-ಚೀನಾ ಗಡಿ ಬಿಕ್ಕಟ್ಟು;ಇಲ್ಲಿದೆ ಡ್ರ್ಯಾಗನ್ ದೇಶದ ಕೋಪಕ್ಕೆ ಅಸಲಿ ಕಾರಣ !
ಪ್ಯಾಂಗೋಂಗ್ ಸರೋವರಕ್ಕೆ ಸಮೀಪದ ಬಳಿ ಭಾರತ ತನಗೆ ಸೇರಿದ ಜಾಗದಲ್ಲಿ ರಸ್ತೆ ನಿರ್ಮಾಣ ಆರಂಭಿಸಿತ್ತು. ಈ ರಸ್ತೆಯಿಂದ ಗಡಿ ಪಹರೆಗೆ ಅನುಕೂಲವಾಗುತ್ತಿತ್ತು. ಆದರೆ ಇದಕ್ಕೆ ಅಡ್ಡಿಪಡಿಸಿದ್ದ ಚೀನಾ, ಭಾರಿ ಸಂಖ್ಯೆಯ ಯೋಧರನ್ನು ಜಮಾವಣೆ ಮಾಡಿತ್ತು. ಭಾರತ- ಚೀನಾ ಯೋಧರು ಹೊಡೆದಾಡಿಕೊಂಡಿದ್ದರು. ಆನಂತರ ಎರಡೂ ದೇಶಗಳ ನಡುವೆ ಸಮರದ ಭೀತಿ ಸೃಷ್ಟಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ