ಪ್ಯಾಲೆಸ್ತೇನ್‌ ಪರ ಮೆರವಣಿಗೆಗೆ ಅನುಮತಿ ಕೇಳಿದ್ದ ಸಿಪಿಐಎಂ ಪಕ್ಷಕ್ಕೆ ಸೂಚಿಸಿದ ಹೈಕೋರ್ಟ್‌!

Published : Jul 26, 2025, 09:10 AM IST
Bombay High Court

ಸಾರಾಂಶ

ಗಾಜಾ ನರಮೇಧದ ವಿರುದ್ಧ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಿಪಿಐ(ಎಂ) ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯವು 'ಮೊದಲು ನಮ್ಮ ದೇಶದ ನಾಗರಿಕರಿಗೆ ದೇಶಭಕ್ತಿಯನ್ನು ತೋರಿಸಬೇಕು' ಎಂದು ಹೇಳಿದೆ.

ಮುಂಬೈ (ಜು.26): ಗಾಜಾದಲ್ಲಿ (Gaza) ನಡೆದ ನರಮೇಧದ (genocide) ವಿರುದ್ಧ ಪ್ಯಾಲೆಸ್ತೇನ್‌ (Palestine issue) ಪರವಾಗಿ ಆಜಾದ್ ಮೈದಾನದಲ್ಲಿ ಪ್ರತಿಭಟನೆಗೆ ಅನುಮತಿ ನೀಡಲು ಮುಂಬೈ ಪೊಲೀಸರು ನಿರಾಕರಿಸಿದ್ದನ್ನು ಪ್ರಶ್ನಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಲ್ಲಿಸಿದ್ದ (Communist Party of India-Marxist) ಅರ್ಜಿಯನ್ನು ಬಾಂಬೆ ಹೈಕೋರ್ಟ್ ಜುಲೈ 25 (ಶುಕ್ರವಾರ) ವಜಾಗೊಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಸಿಪಿಐ(ಎಂ) ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ, ಆದರೆ ಅಖಿಲ ಭಾರತ ಸಾಲಿಡಾರಿಟಿ ಸಂಘಟನೆಯ (ಎಐಪಿಎಸ್‌ಎಫ್) ಅರ್ಜಿಯನ್ನು ತಿರಸ್ಕರಿಸಿದ್ದನ್ನು ಮಾತ್ರ ಪ್ರಶ್ನಿಸಿ, ಅರ್ಜಿದಾರರು "ಮೊದಲು ನಮ್ಮ ದೇಶದ ನಾಗರಿಕರಿಗೆ ದೇಶಭಕ್ತಿಯನ್ನು ತೋರಿಸಬೇಕು" ಎಂದು ಹೇಳಿದ ಬಾಂಬೆ ಹೈಕೋರ್ಟ್‌ ಪೀಠ ಅರ್ಜಿಯನ್ನು ವಜಾ ಮಾಡಿದೆ.

ಗಾಜಾದಲ್ಲಿ ನಡೆದಿದೆ ಎನ್ನಲಾದ ನರಮೇಧದ ವಿರುದ್ಧ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಎಐಪಿಎಸ್‌ಎಫ್ ಜೂನ್ 17 ರಂದು ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಪೊಲೀಸರು ತಿರಸ್ಕರಿಸಿದ್ದರು. ಸಿಪಿಐ(ಎಂ) ಈ ನಿರಾಕರಣೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸಿಪಿಐ(ಎಂ) ಮುಂಬೈ ಪೊಲೀಸರ ಮುಂದೆ ಅರ್ಜಿದಾರರಲ್ಲದ ಕಾರಣ ಆದೇಶವನ್ನು ಪ್ರಶ್ನಿಸಲು ಅದಕ್ಕೆ ಯಾವುದೇ ಅರ್ಹತೆ ಇಲ್ಲ ಎಂದು ನ್ಯಾಯಾಲಯವು ಗಮನಸೆಳೆದಿದೆ.

ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಕಡ್ ಅವರ ಪೀಠವು ಅರ್ಜಿಯನ್ನು ತಿರಸ್ಕರಿಸಿತು, ಸಾವಿರಾರು ಮೈಲುಗಳಷ್ಟು ದೂರದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಬದಲು, ಪಕ್ಷವು ಭಾರತದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದೆ.

"ನಮ್ಮ ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ನಮಗೆ ಇಂಥವೆಲ್ಲ ಬೇಡ. ಹೇಳಲು ವಿಷಾದಿಸುತ್ತೇನೆ, ನೀವೆಲ್ಲರೂ ದೂರದೃಷ್ಟಿಯಿಲ್ಲದವರು. ನೀವು ಗಾಜಾ ಮತ್ತು ಪ್ಯಾಲೆಸ್ಟೈನ್ ಅನ್ನು ನೋಡುತ್ತಿದ್ದೀರಿ.ಆದರೆ, ನಮ್ಮ ದೇಶಕ್ಕಾಗಿ ನೀವು ಯಾಕೆ ಏನನ್ನಾದರೂ ಮಾಡಬಾರದು. ದೇಶಭಕ್ತರಾಗಿರಿ. ಗಾಜಾ ಮತ್ತು ಪ್ಯಾಲೆಸ್ಟೈನ್ ಪರವಾಗಿ ಮಾತನಾಡುವುದು ದೇಶಭಕ್ತಿಯಲ್ಲ. ನಮ್ಮ ಸ್ವಂತ ದೇಶದಲ್ಲಿನ ಸಮಸ್ಯೆಗಳಿಗಾಗಿ ಮಾತನಾಡಿ. ನೀವು ಏನು ಹೇಳುತ್ತಿರೋ ಅದನ್ನೇ ಅನುಕರಣೆ ಮಾಡಿ..' ಎಂದು ನ್ಯಾಯಮೂರ್ತಿ ಘುಗೆ ಹೇಳಿದ್ದಾರೆ.

ಕಸ ಸುರಿಯುವುದು, ಮಾಲಿನ್ಯ, ಒಳಚರಂಡಿ ಮತ್ತು ಪ್ರವಾಹದಂತಹ ಸ್ಥಳೀಯ ನಾಗರಿಕ ಕಾಳಜಿಗಳನ್ನು ಪಕ್ಷವು ಕೈಗೆತ್ತಿಕೊಳ್ಳಬೇಕು ಎಂದು ನ್ಯಾಯಾಲಯವು ಸೂಚಿಸಿತು.

"ನೀವು ಭಾರತದಲ್ಲಿ ನೋಂದಾಯಿತ ಸಂಸ್ಥೆ. ಕಸ ಸುರಿಯುವುದು, ಮಾಲಿನ್ಯ, ಒಳಚರಂಡಿ, ಪ್ರವಾಹದಂತಹ ಸಮಸ್ಯೆಗಳನ್ನು ನೀವು ಕೈಗೆತ್ತಿಕೊಳ್ಳಬೇಕು. ನಾವು ಉದಾಹರಣೆಗಳನ್ನು ಮಾತ್ರ ನೀಡುತ್ತಿದ್ದೇವೆ. ನೀವು ಅವುಗಳ ಬಗ್ಗೆ ಅಲ್ಲ, ಬದಲಾಗಿ ದೇಶದ ಹೊರಗೆ ಸಾವಿರಾರು ಮೈಲುಗಳಷ್ಟು ದೂರದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ಪ್ರತಿಭಟಿಸುತ್ತಿದ್ದೀರಿ" ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಅರ್ಜಿದಾರರು ಪ್ರತಿಭಟಿಸಲು ಬಯಸುವ ವಿಷಯವನ್ನು ದೇಶದ ವಿದೇಶಾಂಗ ಇಲಾಖೆ ಅಥವಾ ವಿದೇಶಾಂಗ ಸಚಿವಾಲಯಕ್ಕೆ ಬಿಡುವುದು ಉತ್ತಮ ಎಂದು ನ್ಯಾಯಾಧೀಶರು ಹೇಳಿದರು, ಪಕ್ಷದ ನಿಲುವು ಮತ್ತು ಕೇಂದ್ರ ಸರ್ಕಾರದ ನಿಲುವಿನ ನಡುವಿನ ಹೆಚ್ಚೇನೂ ವ್ಯತ್ಯಾಸವಿಲ್ಲ ಎಂದು ಕೋರ್ಟ್‌ ಹೇಳಿದೆ.

'ನಿಮಗೆ ಅನುಮತಿ ನೀಡೋದರಿಂದ ಎಷ್ಟು ಧೂಳನ್ನು ಎಬ್ಬಿಸಬಹುದು ಅನ್ನೋದು ನಿಮಗೆ ತಿಳಿದಿಲ್ಲ. ಪ್ಯಾಲೆಸ್ತೇನ್‌ ಪರ ಅಥವಾ ಇಸ್ರೇಲ್‌ ಪರ ಇರೋದು. ನೀವು ಇದನ್ನು ಯಾಕೆ ಮಾಡಲು ಬಯಸುತ್ತಿದ್ದೀರಿ. ನೀವು ಪ್ರತಿನಿಧಿಸುವ ಪಕ್ಷವನ್ನು ಗಮನಿಸಿದರೆ, ಇದು ದೇಶದ ವಿದೇಶಾಂಗ ವ್ಯವಹಾರಗಳಿಗೆ ಏನು ಮಾಡಬಹುದು ಎಂದು ನಿಮಗೆ ಅರ್ಥವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ" ಎಂದು ನ್ಯಾಯಮೂರ್ತಿ ಘುಗೆ ಹೇಳಿದರು.

ಸಿಪಿಐ(ಎಂ) ಪರವಾಗಿ ಹಾಜರಾದ ಹಿರಿಯ ವಕೀಲ ಮಿಹಿರ್ ದೇಸಾಯಿ, ಪೊಲೀಸರು ಅರ್ಜಿಯನ್ನು ಮುಖ್ಯವಾಗಿ ಎರಡು ಕಾರಣಗಳಿಗಾಗಿ ತಿರಸ್ಕರಿಸಿದ್ದಾರೆ ಎಂದು ವಾದಿಸಿದರು: ಭಾರತದ ವಿದೇಶಾಂಗ ನೀತಿಗೆ ವಿರುದ್ಧವಾಗಿರುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಸಾಧ್ಯತೆ. ವಿದೇಶಾಂಗ ನೀತಿಯ ಪರಿಗಣನೆಗಳನ್ನು ಲೆಕ್ಕಿಸದೆ ನಾಗರಿಕರು ಗೊತ್ತುಪಡಿಸಿದ ಸ್ಥಳಗಳಲ್ಲಿ ಪ್ರತಿಭಟಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ವಾದಿಸಿದರು, ಸುಪ್ರೀಂ ಕೋರ್ಟ್ ತೀರ್ಪುಗಳು ಈ ನಿಲುವನ್ನು ಬೆಂಬಲಿಸುತ್ತವೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ರಾಜ್ಯವನ್ನು ಪ್ರತಿನಿಧಿಸುವ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್, ಪ್ರತಿಭಟನೆಗೆ ಅವಕಾಶ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗಬಹುದು ಎಂದು ನಿರೀಕ್ಷಿಸಲಾಗಿತ್ತು ಮತ್ತು ಪೊಲೀಸರಿಗೆ ಆಕ್ಷೇಪಣೆಗಳು ಬಂದಿವೆ ಎಂದು ಹೇಳಿದರು.

"ನಮ್ಮ ನಾಗರಿಕರು ಅಥವಾ ಸಾಮಾನ್ಯ ಜನರ ಬಗ್ಗೆ ಕಾಳಜಿ ಇಲ್ಲದಿರುವಾಗ ನೀವು ಆ ವಿಷಯವನ್ನು ಏಕೆ ಕೈಗೆತ್ತಿಕೊಳ್ಳುತ್ತಿದ್ದೀರಿ. ಎಲ್ಲೆಂದರಲ್ಲಿ ಕಸ ಎಸೆಯುವುದು ಸಮಸ್ಯೆಯಲ್ಲವೇ? ನಮ್ಮದೇ ನಾಗರಿಕರ ನೂರಾರು ಪ್ರಕರಣಗಳು ಪಟ್ಟಿಯಲ್ಲಿರುವಾಗ ಇಂಥ ವಿಷಯವನ್ನು ಕೇಳಲು ನಮಗೆ ಅಷ್ಟೊಂದು ಸಮಯವಿದೆಯೇ? ಇವು ನಮ್ಮ ಸಾಂವಿಧಾನಿಕ ಸಮಸ್ಯೆಗಳಲ್ಲವೇ?" ಎಂದು ನ್ಯಾಯಮೂರ್ತಿ ಘುಗೆ ಅಭಿಪ್ರಾಯಪಟ್ಟರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ