ಎಲ್ಲರೂ ಪಾರದರ್ಶಕವಾಗಿ ತಮ್ಮ ವ್ಯಾಪಾರ ಮಾಡಿ. ಯಾವುದೇ ಕಾರಣಕ್ಕೂ ಕನ್ವರ ಯಾತ್ರೆಯಲ್ಲಿ ವಿವಾದ ಉಂಟಾಗಬಾರದು ಎಂದು ಸಚಿವರು ಹೇಳಿದರು.
ಲಕ್ನೊ: ಮುಸ್ಲಿಮರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರನ್ನು ಇಡಬೇಡಿ ಎಂದು ಉತ್ತರ ಪ್ರದೇಶ ಸರ್ಕಾರದ ಸಚಿವ ಕಪಿಲ್ ದೇವ್ ಅಗರ್ವಾಲ್ ಹೇಳಿದ್ದಾರೆ. ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಭಕ್ತಾದಿಗಳು ಕನ್ವರ್ ಯಾತ್ರೆಯಲ್ಲಿ ತೊಡಗಿಕೊಳ್ಳುತ್ತಾರೆ. ಕನ್ವರ್ ಯಾತ್ರೆ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರ ಹಾಗೂ ಸ್ಥಳೀಯಾಡಳಿತ ತಯಾರಿ ಮಾಡಿಕೊಳ್ಳುತ್ತಿವೆ. ಇಂದು ಉತ್ತರ ಪ್ರದೇಶ ಸಚಿವ ಕಪಿಲ್ ದೇವ್ ಅಗರ್ವಾಲ್, ಮುಜಾಫರ್ ನಗರದ ಕನ್ವರ್ ಶಿವಿರ ಸಂಚಾಲಕರ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಪಿಲ್ ದೇವ್ ಅಗರ್ವಾಲ್, ಕನ್ವರ್ ಯಾತ್ರೆ ವೇಳೆ ಮುಸ್ಲಿಮರು ಅಂಗಡಿಗಳಿಗೆ ಹಿಂದೂ ದೇವೆತಗಳ ಹೆಸರಿಟ್ಟು ವ್ಯಾಪಾರ ಮಾಡುತ್ತಾರೆ. ಹಾಗಾಗಿ ಆ ರೀತಿ ಮಾಡಬಾರದು ಎಂದು ಹೇಳಿದರು.
ಕ್ವನ್ವರ್ ಯಾತ್ರೆ ಮಾರ್ಗದಲ್ಲಿ ಮುಸ್ಲಿಮರು ವ್ಯಾಪಾರ ಮಾಡೋದಕ್ಕೆ ನಮ್ಮ ವಿರೋಧವಿಲ್ಲ. ವ್ಯಾಪಾರ ಹೆಚ್ಚಳಕ್ಕಾಗಿ ಕೆಲ ಮುಸ್ಲಿಮರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರಿಡುತ್ತಾರೆ. ದೂರದಿಂದ ಯಾತ್ರೆಗೆ ಬರೋ ಹಿಂದೂ ಭಕ್ತಾದಿಗಳು ಇಂತಹ ಅಂಗಡಿಗಳಿಗೆ ತೆರಳಿ ಆಹಾರ ಸೇವಿಸುತ್ತಾರೆ. ಆನಂತರ ಇದು ಅನ್ಯಕೋಮಿನವರ ಅಂಗಡಿ ಎಂದು ತಿಳಿದ್ರೆ ಗಲಾಟೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆ ಎಲ್ಲರೂ ಪಾರದರ್ಶಕವಾಗಿ ತಮ್ಮ ವ್ಯಾಪಾರ ಮಾಡಿ. ಯಾವುದೇ ಕಾರಣಕ್ಕೂ ಕನ್ವರ ಯಾತ್ರೆಯಲ್ಲಿ ವಿವಾದ ಉಂಟಾಗಬಾರದು ಎಂದು ಸಚಿವರು ಹೇಳಿದರು.
ಡಿಜಿಪಿ ಪ್ರಶಾಂತ್ ಕುಮಾರ್ ಸಭೆ
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಾದ (ಡಿಜಿಪಿ)ಪ್ರಶಾಂತ್ ಕುಮಾರ್, ಮುಂಬರುವ ಕನ್ವರ ಯಾತ್ರೆ ಹಾಗೂ ಅದೇ ಸಮಯದಲ್ಲಿ ಬರುವ ಮೊಹರಂ ಮೆರವಣಿಗೆ ಸಂಬಂಧ ಮುಂಜಾಗ್ರತ ಕ್ರಮಗಳ ಬಗ್ಗೆ ಸಭೆ ನಡೆಸಿದ್ದಾರೆ. ಯಾತ್ರೆ ಮತ್ತು ಮೆರವಣಿಗೆ ಸಾಗುವ ಮಾರ್ಗದಲ್ಲಿ ಡಿಜಿಟಲ್ ತಂತ್ರಜ್ಞರು, ಸ್ಥಳೀಯ ಪೊಲೀಸರು ಜೊತೆಯಾಗಿ ಭದ್ರತೆಯ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಮತ್ತೆ ತೀರ್ಥಯಾತ್ರೆ ಹೊರಟ ಗೋಲ್ಡನ್ ಬಾಬಾ: ಮೈತುಂಬಾ ಚಿನ್ನ!
ಕನ್ವರ ಯಾತ್ರೆ ಮಾರ್ಗಗಳನ್ನು ಮುಂಚಿತವಾಗಿಯೇ ಪರಿಶೀಲನೆ ನಡೆಸಬೇಕು. ಯಾವುದೇ ಹೊಸ ಸಂಪ್ರದಾಯಗಳಿಗೆ ಅನುಮತಿ ನೀಡಬಾರದು ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಬೇಕು. ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಎಲ್ಲಾ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಡಿಜಿಪಿ ಸೂಚಿಸಿದ್ದಾರೆ.
ಇಂಟರ್ನೆಟ್ ಮೇಲೆಯೂ ಹದ್ದಿನಗಣ್ಣು
ವಲಯವಾರು ಭದ್ರತೆಯನ್ನು ವಿಂಗಡಿಸಿ ಪೊಲೀಸರನ್ನು ನಿಯೋಜಿಸುವಂತೆಯೂ ತಿಳಿಸಲಾಗಿದೆ. ಬಸ್ ಹಾಗೂ ರೈಲು ನಿಲ್ದಾಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಬೇಕು. ಈ ಭಾಗದಲ್ಲಿಯ ಇಂಟರ್‌ನೆಟ್ ಬಳಕೆದಾರರ ಮೇಲೆಯೂ ಹದ್ದಿನ ಕಣ್ಣು ಇರಿಸಲು ವ್ಯವಸ್ಥಿತವಾದ ತಂಡವನ್ನು ರಚಿಸಿಕೊಳ್ಳುವಂತೆ ಡಿಜಿಪಿ ಆದೇಶ ನೀಡಿದ್ದಾರೆ.