
ಅಹ್ಮದಾಬಾದ್: ಬಿಪರ್ ಜಾಯ್ ಚಂಡಮಾರುತದಿಂದ ಗುಜರಾತ್‌ನಲ್ಲಿ ಭಾರಿ ಆಸ್ತಿ ನಷ್ಟವಾಗಿದೆ ಎಂಬ ವರದಿಯ ಹಿನ್ನೆಲೆ ಬೆಳಂಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಗುಜರಾತ್ ಸಿಎಂಗೆ ಫೋನ್ ಕರೆ ಮಾಡಿದ ಪ್ರಧಾನಿ ಮೋದಿ, ಸಿಎಂ ಭೂಪೇಂದ್ರ ಪಟೇಲ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸೈಕ್ಲೋನ್ ಭೂಕುಸಿತ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಗುಜರಾತ್ ಸಿಎಂರಿಂದ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದುಕೊಂಡಿದ್ದಾರೆ.
ಬಿಪರ್ ಜಾಯ್ ಚಂಡಮಾರುತದ ಕಾರಣಕ್ಕೆ ಈಗಾಗಲೇ ಕಡಲತೀರದ ಒಂದು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ಗುಜರಾತ್ ಕಡಲತೀರದ ಜನರನ್ನು ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ದೇವಭೂಮಿ ದ್ವಾರಕದಲ್ಲಿ ಮೂವರಿಗೆ ಗಾಯಗಳಾಗಿರುವ ವರದಿ ಆಗಿದೆ. ಕೆಲ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಇಂದು ಕೂಡ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. 940 ಗ್ರಾಮಗಳಲ್ಲಿ ಚಂಡ ಮಾರುತದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲವು ವಿದ್ಯುತ್ ಕಂಬಗಳು ಮರಗಳು ನೆಲಕ್ಕುರುಳಿವೆ. ಇನ್ನು ಮೂರು ದಿನಗಳ ಕಾಲ ಗುಜರಾತ್‌ನಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
ಬಿರುಗಾಳಿ ಹೊಡೆತಕ್ಕೆ ಬಿದ್ದ ಮರಗಳು, ಲೈಟು ಕಂಬಗಳು
ಗುಜರಾತ್ಗೆ ಬಿಪೊರ್‌ಜೊಯ್ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ಭಾರಿ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಮರಗಿಡಗಳು ಬುಡಮೇಲಾಗುವ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆಗಳು ನಡೆದಿವೆ. ಕಛ್ ಹಾಗೂ ಸೌರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ದೇವಭೂಮಿ ದ್ವಾರಕಾದಲ್ಲಿ ಮರ ಬಿದ್ದು, ಮೂವರಿಗೆ ಗಾಯಗಳಾಗಿವೆ. ಜಖಾವು ಬಂದರು ಹಾಗೂ ಮಾಂಡವಿಯಲ್ಲಿ ಕೂಡ ಬಿರುಗಾಳಿಯ ಹೊಡೆತಕ್ಕೆ ತಗಡಿನ ಶೀಟುಗಳು ಹಾಗೂ ಪ್ಲಾಸ್ಟಿಕ್ ಶೆಡ್ಗಳು ಹಾರಿ ಹೋಗಿವೆ. ಇದರ ಬೆನ್ನಲ್ಲೇ ಎನ್ಡಿಆರ್ಎಫ್(NDRF), ಎಸ್ಡಿಆರ್ಎಫ್ (SDRF) ತಂಡಗಳು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ಹಾಗೂ ರಸ್ತೆಗಳ ಮೇಲೆ ಬಿದ್ದ ಮರ ತೆರವು ಮಾಡುವಲ್ಲಿ ನಿರತವಾಗಿವೆ. ವಿದ್ಯುತ್ ಇಲಾಖೆ ಸಿಬ್ಬಂದಿ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಶ್ರಮಿಸುತ್ತಿದ್ದಾರೆ.
Ian Cyclone ಅಬ್ಬರ: ನೀರಿನಲ್ಲಿ ಕೊಚ್ಚಿ ಹೋದ 8 ಕೋಟಿ ಮೊತ್ತದ ಕಾರು
ಜಟಾಕು ಬಂದರಿಗೆ ಅಪ್ಪಳಿಸಿದ ಬಿಪರ್‌ಜಾಯ್
ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪೊರ್‌ಜೊಯ್ ಚಂಡಮಾರುತ ಗುರುವಾರ ಸಂಜೆ 6.30ರ ಸುಮಾರಿಗೆ ಗುಜರಾತ್‌ನ ಕಛ್ ಬಳಿ ಇರುವ ಜಟಾಕು ಬಂದರಿಗೆ ಅಪ್ಪಳಿಸಿತ್ತು. ಸುಮಾರು 10 ದಿನಗಳ ಕಾಲ ಅರಬ್ಬೀ ಸಮುದ್ರದಲ್ಲಿ ಸಂಚರಿಸಿದ್ದ ಚಂಡಮಾರುತ ಇದೇ ಮೊದಲ ಬಾರಿಗೆ ಭೂಭಾಗಕ್ಕೆ ಅಪ್ಪಳಿಸಿದೆ. ಚಂಡಮಾರುತದಿಂದ ಉಂಟಾಗಿರುವ ಗಾಳಿಯಿಂದ ಗಂಟೆಗೆ ಸುಮಾರು 145 ಕಿ.ಮೀ. ವೇಗದಲ್ಲಿ ಚಂಡಮಾರುತ ಸಾಗುತ್ತಿದ್ದು, ಕಛ್ ಮತ್ತು ಸೌರಾಷ್ಟ್ರ (Sourashtra) ಕಡಲತೀರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೈ ಅಲರ್ಟ್ ಘೋಷಿಸಲಾಗಿದೆ.
ಈ ಚಂಡಮಾರುತ ಸುಮಾರು 50 ಕಿ.ಮೀ. ವ್ಯಾಸವನ್ನು ಹೊಂದಿದ್ದು, ಇನ್ನೂ 1 ದಿನ ಚಂಡಮಾರುತ ಸಾಗುವ ಹಾದಿಯಲ್ಲಿ ಭಾರಿ ಮಳೆಯಾಗಲಿದೆ. ಕಛ್‌ನಲ್ಲಿ 20.5 ಸೆಂ.ಮೀ., ದ್ವಾರಕಾ, ಜಾಮ್‌ನಗರ, ಪೋರಬಂದರ್, ರಾಜ್‌ಕೋಟ್, ಮೋರ್ಬಿ ಮತ್ತು ಜುನಾಗಢ ಜಿಲ್ಲೆಗಳಲ್ಲಿ 11.5ರಿಂದ 20.4 ಸೆಂ.ಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸುಮಾರು 145 ಕಿ.ಮೀ.ವೇಗದಲ್ಲಿ ಸಾಗಿಬಂದ ಚಂಡಮಾರುತ ಮಧ್ಯರಾತ್ರಿ ವೇಳೆ ತನ್ನ ಅಪ್ಪಳಿಸುವಿಕೆಯನ್ನು ಸಂಪೂರ್ಣಗೊಳಿಸಿತು.
ಗುಜರಾತ್ ತೀರಕ್ಕೆ ಅಪ್ಪಳಿಸಿದ ಬಿಪರ್ ಜಾಯ್: ಮಾಂಡವಿ ಬೀಚ್ ಆಪೋಶನ ತೆಗೆದುಕೊಂಡ ಚಂಡಮಾರುತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ