ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಪೊರ್‌ಜೊಯ್ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಭಾರಿ ಅಲೆಗಳು ಎದ್ದಿದ್ದು, ಕಛ್ ಜಿಲ್ಲೆಯಲ್ಲಿರುವ ಮಾಂಡವಿ ಸಮುದ್ರ ತೀರ ಸಂಪೂರ್ಣ ಮುಳುಗಡೆಯಾಗಿದೆ
ಕಛ್: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಪರ್ ಜಾಯ್ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಭಾರಿ ಅಲೆಗಳು ಎದ್ದಿದ್ದು, ಕಛ್ ಜಿಲ್ಲೆಯಲ್ಲಿರುವ ಮಾಂಡವಿ ಸಮುದ್ರ ತೀರ ಸಂಪೂರ್ಣ ಮುಳುಗಡೆಯಾಗಿದೆ. ಪ್ರತಿನಿತ್ಯ ಇರುತ್ತಿದ್ದ ಪ್ರದೇಶದಿಂದ ಸಮುದ್ರ ಅಲೆಗಳು 500 ಮೀ. ಹೆಚ್ಚು ದೂರ ಚಲಿಸಿದ್ದು, ಇಷ್ಟುಪ್ರದೇಶವೂ ಮುಳುಗಡೆಯಾಗಿದೆ. ಮಾರುತದ ವೇಗವೂ ಸಹ ಗಂಟೆಗೆ 200 ಕಿ.ಮೀ.ಗೆ ಹೆಚ್ಚಾಗಿದ್ದು, ಸಮುದ್ರ ತೀರದಲ್ಲಿದ್ದ ಅಂಗಡಿಗಳು ಮಗುಚಿ ಬಿದ್ದಿವೆ. ಮುಂಜಾಗ್ರತಾ ಕ್ರಮವಾಗಿ ತೀರಪ್ರದೇಶದಲ್ಲಿದ್ದ ಜನರನ್ನು ಈ ಮೊದಲೇ ತೆರವು ಮಾಡಿದ ಕಾರಣದಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿರುಗಾಳಿ ಹೊಡೆತಕ್ಕೆ ಬಿದ್ದ ಮರಗಳು, ಲೈಟು ಕಂಬಗಳು
ಗುಜರಾತ್ಗೆಬಿಪರ್ ಜಾಯ್ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ಭಾರಿ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಮರಗಿಡಗಳು ಬುಡಮೇಲಾಗುವ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆಗಳು ನಡೆದಿವೆ. ಕಛ್ ಹಾಗೂ ಸೌರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ದೇವಭೂಮಿ ದ್ವಾರಕಾದಲ್ಲಿ ಮರ ಬಿದ್ದು, ಮೂವರಿಗೆ ಗಾಯಗಳಾಗಿವೆ. ಜಖಾವು ಬಂದರು ಹಾಗೂ ಮಾಂಡವಿಯಲ್ಲಿ ಕೂಡ ಬಿರುಗಾಳಿಯ ಹೊಡೆತಕ್ಕೆ ತಗಡಿನ ಶೀಟುಗಳು ಹಾಗೂ ಪ್ಲಾಸ್ಟಿಕ್ ಶೆಡ್ಗಳು ಹಾರಿ ಹೋಗಿವೆ. ಇದರ ಬೆನ್ನಲ್ಲೇ ಎನ್‌ಡಿಆರ್‌ಎಫ್(NDRF), ಎಸ್ಡಿಆರ್ಎಫ್ (SDRF) ತಂಡಗಳು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ಹಾಗೂ ರಸ್ತೆಗಳ ಮೇಲೆ ಬಿದ್ದ ಮರ ತೆರವು ಮಾಡುವಲ್ಲಿ ನಿರತವಾಗಿವೆ. ವಿದ್ಯುತ್ ಇಲಾಖೆ ಸಿಬ್ಬಂದಿ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಶ್ರಮಿಸುತ್ತಿದ್ದಾರೆ.
Cyclone Biparjoy: ಬಾಹ್ಯಾಕಾಶದಿಂದ ಬಿಪರ್‌ಜಾಯ್ ರುದ್ರರೂಪದ ಚಿತ್ರ ತೆಗೆದ ಗಗನಯಾತ್ರಿ!
ಜಟಾಕು ಬಂದರಿಗೆ ಅಪ್ಪಳಿಸಿದ ಬಿಪರ್‌ಜಾಯ್
ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪರ ಜಾಯ್ ಚಂಡಮಾರುತ ಗುರುವಾರ ಸಂಜೆ 6.30ರ ಸುಮಾರಿಗೆ ಗುಜರಾತ್‌ನ ಕಛ್ ಬಳಿ ಇರುವ ಜಟಾಕು ಬಂದರಿಗೆ ಅಪ್ಪಳಿಸಿತ್ತು. ಸುಮಾರು 10 ದಿನಗಳ ಕಾಲ ಅರಬ್ಬೀ ಸಮುದ್ರದಲ್ಲಿ ಸಂಚರಿಸಿದ್ದ ಚಂಡಮಾರುತ ಇದೇ ಮೊದಲ ಬಾರಿಗೆ ಭೂಭಾಗಕ್ಕೆ ಅಪ್ಪಳಿಸಿದೆ. ಚಂಡಮಾರುತದಿಂದ ಉಂಟಾಗಿರುವ ಗಾಳಿಯಿಂದ ಗಂಟೆಗೆ ಸುಮಾರು 145 ಕಿ.ಮೀ. ವೇಗದಲ್ಲಿ ಚಂಡಮಾರುತ ಸಾಗುತ್ತಿದ್ದು, ಕಛ್ ಮತ್ತು ಸೌರಾಷ್ಟ್ರ (Sourashtra) ಕಡಲತೀರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೈ ಅಲರ್ಟ್ ಘೋಷಿಸಲಾಗಿದೆ.
ಈ ಚಂಡಮಾರುತ ಸುಮಾರು 50 ಕಿ.ಮೀ. ವ್ಯಾಸವನ್ನು ಹೊಂದಿದ್ದು, ಇನ್ನೂ 1 ದಿನ ಚಂಡಮಾರುತ ಸಾಗುವ ಹಾದಿಯಲ್ಲಿ ಭಾರಿ ಮಳೆಯಾಗಲಿದೆ. ಕಛ್‌ನಲ್ಲಿ 20.5 ಸೆಂ.ಮೀ., ದ್ವಾರಕಾ, ಜಾಮ್‌ನಗರ, ಪೋರಬಂದರ್, ರಾಜ್‌ಕೋಟ್, ಮೋರ್ಬಿ ಮತ್ತು ಜುನಾಗಢ ಜಿಲ್ಲೆಗಳಲ್ಲಿ 11.5ರಿಂದ 20.4 ಸೆಂ.ಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸುಮಾರು 145 ಕಿ.ಮೀ.ವೇಗದಲ್ಲಿ ಸಾಗಿಬಂದ ಚಂಡಮಾರುತ ಮಧ್ಯರಾತ್ರಿ ವೇಳೆ ತನ್ನ ಅಪ್ಪಳಿಸುವಿಕೆಯನ್ನು ಸಂಪೂರ್ಣಗೊಳಿಸಿತು.
ಕೆಲ ಹೊತ್ತಲ್ಲೇ ಭಾರತಕ್ಕೆ ಅಪ್ಪಳಿಸಲಿದೆ ಬಿಪೊರ್‌ಜಾಯ್ ಸೈಕ್ಲೋನ್, ಹಲವು ತೀರ ಪ್ರದೇಶ ಮುಳುಗಡೆ!
ಭಾರಿ ಮುಂಜಾಗ್ರತಾ ಕ್ರಮದಿಂದ ಹೆಚ್ಚು ಪ್ರಾಣಹಾನಿ ಇಲ್ಲ
ತೀವ್ರಗೊಂಡಿರುವ ಚಂಡಮಾರುತ ಗುಜರಾತ್ (Gujarat Coast)ತೀರಕ್ಕೆ ಅಪ್ಪಳಿಸಲಿದೆ ಎಂಬ ಹವಾಮಾನ ಇಲಾಖೆಯ (weather Department) ಮುನ್ಸೂಚನೆಯ ಬೆನ್ನಲ್ಲೇ ಅಗತ್ಯ ಕ್ರಮಗಳನ್ನು ಕೈಗೊಂಡ ರಾಜ್ಯ ಸರ್ಕಾರ ಕರಾವಳಿಯಲ್ಲಿರುವ 8 ಜಿಲ್ಲೆಗಳಿಂದ 1 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತ್ತು. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿತು. ಚಂಡಮಾರುತದ ಪ್ರಭಾವಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಸುಮಾರು 4 ಸಾವಿರ ಜಾಹಿರಾತು ಫಲಕಗಳನ್ನು ತೆಗೆಯಲಾಗಿತ್ತು. ರಾಜ್ಯದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಹಾನಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದಕ್ಕಾಗಿ 15 ಎನ್‌ಡಿಆರ್‌ಎಫ್, 12 ರಾಜ್ಯ ವಿಪತ್ತು ನಿರ್ವಹಣಾ ತಂಡ, ಭಾರತೀಯ ಸೇನೆ, ನೌಕಾದಳ, ವಾಯುಪಡೆ, ಕರಾವಳಿ ಕಾವಲು ಪಡೆ ಮತ್ತು ಗಡಿ ಭದ್ರತಾ ಪಡೆಯ ಯೋಧರ ತಂಡವನ್ನು ಸಿದ್ಧವಾಗಿಡಲಾಗಿದೆ. ಇದಕ್ಕೂ ಮೊದಲು 2021ರಲ್ಲಿ ತೌಕ್ಟೆ ಚಂಡಮಾರುತ ಗುಜರಾತ್ ತೀರಕ್ಕೆ ಅಪ್ಪಳಿಸಿತ್ತು. ಈ ಚಂಡಮಾರುತ ಗಂಟೆಗೆ 185 ಕಿ.ಮೀ.ವೇಗದಲ್ಲಿ ಬೀಸಿ, ಉಷ್ಣವಲಯದಲ್ಲಿ ಸೃಷ್ಟಿಯಾದ ಅತಿ ವೇಗದ ಚಂಡಮಾರುತ ಎನಿಸಿಕೊಂಡಿತ್ತು.