ಸರ್ಕಾರದಿಂದಲೇ Cryptocurrency, ಖಾಸಗಿಗೆ ನಿಷೇಧ: ಅಧಿವೇಶನದಲ್ಲೇ ಮಸೂದೆ ಮಂಡನೆ!

By Kannadaprabha NewsFirst Published Nov 24, 2021, 5:00 AM IST
Highlights

* ಕಾನೂನಿನ ಚೌಕಟ್ಟಿಗೆ ಒಳಪಡದೆ ಭಾರೀ ಪ್ರಮಾಣದಲ್ಲಿ ಚಲಾವಣೆಯಾಗುತ್ತಿರುವ ಕ್ರಿಪ್ಟೋ

* 'ಸರ್ಕಾರದಿಂದಲೇ ಕ್ರಿಪ್ಟೋ ಕರೆನ್ಸಿ, ಖಾಸಗಿಗೆ ನಿಷೇಧ

* ಮುಂದಿನ ಅಧಿವೇಶನದಲ್ಲೇ ಮಸೂದೆ ಮಂಡನೆ

ನವದೆಹಲಿ(ನ.24): ಯಾವುದೇ ಕಾನೂನಿನ ಚೌಕಟ್ಟಿಗೆ ಒಳಪಡದೆ ಭಾರೀ ಪ್ರಮಾಣದಲ್ಲಿ ಚಲಾವಣೆಯಾಗುತ್ತಿರುವ ಕ್ರಿಪ್ಟೋ ಕರೆನ್ಸಿಗಳನ್ನು (Cryptocurrency) ನಿಯಂತ್ರಿಸುವ ಸಲುವಾಗಿ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Winter Session) ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಸ್ತಾಪಿತ ಮಸೂದೆ ಅನ್ವಯ, ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್‌ (Reserve Bank Of India) ಹೊಸ ಕ್ರಿಪ್ಟೋ ಕರೆನ್ಸಿ ಬಿಡುಗಡೆ ಮಾಡಲಿದೆ. ಮತ್ತೊಂದೆಡೆ ಎಲ್ಲಾ ರೀತಿಯ ಖಾಸಗಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ಭಾಗಶಃ ನಿಷೇಧ ಹೇರಲಾಗುವುದು (Ban On Cryptocurrency). ನ.29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅದರಲ್ಲಿ ಕ್ರಿಪ್ಟೋಕರೆನ್ಸಿ ಮಸೂದೆ ಸೇರಿದಂತೆ ಒಟ್ಟು 29 ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ವಿವಾದಿತ ಮೂರು ಕೃಷಿ ಕಾಯ್ದೆ ರದ್ದು (farm Laws), ವಿದ್ಯುತ್‌ ವಲಯ ಸುಧಾರಣಾ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಸೇರಿವೆ.

ಕ್ರಿಪ್ಟೋಗೆ ಕಡಿವಾಣ:

ಸದ್ಯ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗಳಿಗೆ (Cryptocurrency) ಮಾನ್ಯತೆಯೂ ಇಲ್ಲ, ನಿಷೇಧವೂ ಇಲ್ಲ. ಹೀಗಿದ್ದರೂ ಲಕ್ಷಾಂತರ ಭಾರತೀಯರು ಅವುಗಳಲ್ಲಿ ಸಾವಿರಾರು ಕೋಟಿ ರು. ಹೂಡಿಕೆ ಮಾಡುತ್ತಿದ್ದಾರೆ. ಜೊತೆಗೆ ಈ ಡಿಜಿಟಲ್‌ ಕರೆನ್ಸಿ, ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರವಾದಕ್ಕೆ ಹಣ ಪೂರೈಕೆ ಜಾಲವಾಗಿ ಬಳಕೆಯಾಗುತ್ತಿರುವ ಭೀತಿಯೂ ಸರ್ಕಾರವನ್ನು ಕಾಡುತ್ತಿದೆ. ಹೀಗಾಗಿ ಇಡೀ ಕ್ರಿಪ್ಟೋ ಕರೆನ್ಸಿ ವಲಯಕ್ಕೆ ಹೊಸ ಕಾನೂನಿನ ಚೌಕಟ್ಟು ಒದಗಿಸುವ ನಿಟ್ಟಿನಲ್ಲಿ ‘ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್‌ ಕರೆನ್ಸಿ ನಿಯಂತ್ರಣ ಮಸೂದೆ, 2021’ ಅನ್ನು ಸರ್ಕಾರ ಸಿದ್ಧಪಡಿಸಿದೆ.

ಈ ಹೊಸ ಮಸೂದೆಯು, ಆರ್‌ಬಿಐನಿಂದ (Reserve Bank Of India) ಬಿಡುಗಡೆಯಾಗಲಿರುವ ಹೊಸ ಅಧಿಕೃತ ಡಿಜಿಟಲ್‌ ಕರೆನ್ಸಿಗೆ ಚೌಕಟ್ಟು ರೂಪಿಸುವ ಉದ್ದೇಶ ಹೊಂದಿದೆ. ಜೊತೆಗೆ ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಯನ್ನು (Cryptocurrency) ನಿಷೇಧಿಸುವ ಗುರಿ ಹೊಂದಿದೆ. ಆದರೆ ಕ್ರಿಪ್ಟೋ ಕರೆನ್ಸಿ ತಂತ್ರಜ್ಞಾನ ಮತ್ತು ಅದರ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೆಲವೊಂದು ವಿನಾಯ್ತಿ ಇರಲಿದೆ’ ಎಂದು ಸರ್ಕಾರ ಹೇಳಿದೆ.

ಆರ್‌ಬಿಐನಿಂದ ಕ್ರಿಪ್ಟೋ ಕರೆನ್ಸಿ:

ಖಾಸಗಿ ಡಿಜಿಟಲ್‌ ಕರೆನ್ಸಿಗೆ ಯಾವುದೇ ಗ್ಯಾರಂಟಿ ಇಲ್ಲದ ಕಾರಣ, ಸ್ವತಃ ತಾನೇ ಡಿಜಿಟಲ್‌ ಕರೆನ್ಸಿಯನ್ನು (Digital Currency) ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಲಕ್ಷ್ಮೇ ಹೆಸರಲ್ಲಿ ಕ್ರಿಪ್ಟೋಕರೆನ್ಸಿ ಬಿಡುಗಡೆಗೆ ಆರ್‌ಬಿಐ (RBI) ಸಜ್ಜಾಗಿದೆ. ಈ ಕುರಿತು ಅದು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಕೆಲ ವರ್ಷಗಳ ಹಿಂದೆಯೇ ವರದಿಯಾಗಿತ್ತು. ಅದೀಗ ನಿಜವಾಗುತ್ತಿದೆ.

ಸರ್ಕಾರಕ್ಕೆ ಏನು ಲಾಭ?:

ಡಿಜಿಟಲ್‌ ಕರೆನ್ಸಿ ಬಳಕೆಯು ನೋಟು ಮತ್ತು ನಾಣ್ಯಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ. ಅವುಗಳ ಸಾಗಣೆ ಹೊರೆ ತಪ್ಪಿಸುತ್ತದೆ. ತತ್‌ಕ್ಷಣದ ಹಣ ವರ್ಗಾವಣೆ, ಪಾವತಿ ಸಾಧ್ಯ. ನಿರ್ವಹಣೆಯೂ ಅಗ್ಗ. ಜಾಗತಿಕ ಮಟ್ಟದಲ್ಲಿ ವಿನಿಮಯ ಸಮಸ್ಯೆಯೂ ಇರದು ಎಂಬುದು ಸರ್ಕಾರದ ಲೆಕ್ಕಾಚಾರ.

ಖಾಸಗಿಗೆ ಭಾಗಶಃ ನಿಷೇಧ:

ಪ್ರಸ್ತಾವಿತ ಮಸೂದೆಯಲ್ಲಿ (Bill) ಖಾಸಗಿ ಕ್ರಿಪ್ಟೋ ಕರೆನ್ಸಿಗಳಿಗೆ ಚೀನಾ ಮಾದರಿಯಲ್ಲಿ ಪೂರ್ಣ ನಿಷೇಧ ಹೇರುವ ಸಾಧ್ಯತೆ ಇಲ್ಲ. ಅದರ ಬದಲಾಗಿ ಇಂಥ ಕ್ರಿಪ್ಟೋಗಳಿಗೆ ಕರೆನ್ಸಿ ಗೌರವ ನೀಡದಿರುವ ಮತ್ತು ಇವುಗಳನ್ನು ಚಿನ್ನ, ಷೇರಿನ ರೀತಿಯಲ್ಲಿ ಕೇವಲ ಹೂಡಿಕೆಯ ಒಂದು ಸರಕಾಗಿ ಮಾತ್ರ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Cryptocurrency ಯಲ್ಲಿ ಹೂಡಿಕೆ ಮಾಡಿದ್ದಾರಾ ದೈತ್ಯ ಟೆಕ್‌ ಕಂಪನಿ CEO?

ಆಲ್ಫಾಬೆಟ್ (Alphabet) ಮತ್ತು ಗೂಗಲ್ (Google) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸುಂದರ್ ಪಿಚೈ (Sundar Pichai) ಅವರು ತಮ್ಮ ಕ್ರಿಪ್ಟೋಕರೆನ್ಸಿ (Cruptocurrency) ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ ಹಾಗೂ ಸದ್ಯಕ್ಕೆ  ಯಾವುದೂ  ಕ್ರಿಪ್ಟೋಕರೆನ್ಸಿ ಅವರ ಬಲಿ ಇಲ್ಲ ಎಂದು ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಸುಂದರ್‌ ಪಿಚೈ  ನಾನು ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ತಕ್ಕ ಮಟ್ಟಿಗೆ ತೊಡಗಿಸಿಕೊಂಡಿದ್ದೇನೆ, ಅದರ ಒಳಗೆ ಮತ್ತು ಹೊರಗೆ ನನಗೆ ತಿಳಿದಿದೆ" ಎಂದು  ಹೇಳಿದ್ದಾರೆ.

click me!