Covid in India| ಕೋವಿಡ್‌ ಶೇ.76 ಜನ ಡೋಂಟ್‌ಕೇರ್‌: ಸೋಂಕೇ ಇಲ್ಲ ಎನ್ನುತ್ತಿದ್ದಾರೆ ಜನ!

By Kannadaprabha NewsFirst Published Nov 24, 2021, 4:30 AM IST
Highlights

* ಒಂದೇ ತಿಂಗಳಲ್ಲಿ 25 ಲಕ್ಷ ಮದುವೆಗೆ ಸಿದ್ಧತೆ

* ಕೋವಿಡ್‌ ಶೇ.76 ಜನ ಡೋಂಟ್‌ಕೇರ್‌

* ಸೋಂಕೇ ಇಲ್ಲ ಎನ್ನುತ್ತಿದ್ದಾರೆ ಜನ: ಸಮೀಕ್ಷೆ

* ಬರೀ 7579 ಕೇಸ್‌: 543 ದಿನದ ಕನಿಷ್ಠ

ನವದೆಹಲಿ(ನ.24): ಚಳಿಗಾಲದ (Winter) ಅವಧಿಯಾದ ನವೆಂಬರ್‌-ಡಿಸೆಂಬರ್‌ನಲ್ಲಿ ಕೋವಿಡ್‌ ಉಲ್ಬಣದ (Covid Crisis) ಭೀತಿ ಇದ್ದರೂ, ಭಾರತೀಯರು ಮಾತ್ರ ಆ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ. ಈ ಅವಧಿಯಲ್ಲಿ ನಡೆಯುವ ಮದುವೆ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಾಗಿ ಶೇ.76ರಷ್ಟು ಭಾರತೀಯರು ತಿಳಿಸಿದ್ದಾರೆ ಎಂದು ಸಮೀಕ್ಷಾ ವರದಿಯೊಂದು (Survey Report) ತಿಳಿಸಿದೆ. ಈ ಹಿಂದೆ ತಜ್ಞರು ಅಂದಾಜಿಸಿದ್ದಂತೆ ಸೆಪ್ಟೆಂಬರ್‌- ಅಕ್ಟೋಬರ್‌ನಲ್ಲಿ ಕೋವಿಡ್‌ 3ನೇ ಅಲೆ (Third Wave Of Covid) ಕಾಣಿಸಿಕೊಂಡಿಲ್ಲ. ಮತ್ತೊಂದೆಡೆ ದೇಶಾದ್ಯಂತ ಹೊಸ ಸೋಂಕು ಮತ್ತು ಸಾವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಸೋಂಕು ಇಳಿಕೆಗೊಂಡ ಪರಿಣಾಮ ಎಲ್ಲಾ ರಾಜ್ಯಗಳು ವಿವಾಹ (Wedding) ಕಾರ್ಯಕ್ರಮಗಳ ಮೇಲೆ ಹೇರಿದ್ದ ವಿವಿಧ ರೀತಿಯ ನಿರ್ಬಂಧ ತೆರವುಗೊಳಿಸಿವೆ. ಹೀಗಾಗಿ ಪೋಷಕರು ಕೂಡ ಈ ಎರಡೂ ತಿಂಗಳ ಶುಭ ಮುಹೂರ್ತದಲ್ಲಿ ತಮ್ಮ ಮಕ್ಕಳ ವಿವಾಹ ನಿಗದಿ ಮಾಡಿದ್ದಾರೆ. ಕೌಟುಂಬಿಕ ಕಾರ್ಯಕ್ರಮಗಳಿಗಾಗಿ ಕಲ್ಯಾಣ ಮಂಟಪ ಬುಕಿಂಗ್‌ ಕೋವಿಡ್‌ ಪೂರ್ವಸ್ಥಿತಿ ಮೀರಿದೆ. ಒಂದು ಅಂದಾಜಿನ ಪ್ರಕಾರ ನ.14ರಿಂದ ಡಿ.13ರೊಳಗೆ ದೇಶಾದ್ಯಂತ 25 ಲಕ್ಷಕ್ಕೂ ಹೆಚ್ಚು ವಿವಾಹ ಕಾರ್ಯಕ್ರಮಗಳು ನಿಗದಿಯಾಗಿವೆ.

ಈ ಹಿನ್ನೆಲೆಯಲ್ಲಿ ‘ಲೋಕಲ್‌ ಸರ್ಕಲ್ಸ್‌’ (Local Circle) ಎಂಬ ಸಂಸ್ಥೆ ಆನ್‌ಲೈನ್‌ ಮೂಲಕ 17,000 ಜನರ ಸಮೀಕ್ಷೆ ನಡೆಸಿದೆ. ಆದರಲ್ಲಿ ಭಾಗಿಯಾಗಿದ್ದ 10ರಲ್ಲಿ 6 ಜನರು ತಾವು ನವೆಂಬರ್‌- ಡಿಸೆಂಬರ್‌ನಲ್ಲಿ ನಡೆಯುವ ವಿವಾಹ ನಿಶ್ಚಿತಾರ್ಥ, ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.

ಅಲ್ಲದೆ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.76ರಷ್ಟು ಜನರು ಕೋವಿಡ್‌ ಪ್ರಸರಣ ಸಾಧ್ಯತೆ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದಿದ್ದಾರೆ. ಜೊತೆಗೆ ಈ ಮೊದಲಿನ ದಿನಗಳಿಗೆ ಹೋಲಿಸಿದರೆ ನವೆಂಬರ್‌- ಡಿಸೆಂಬರ್‌ನಲ್ಲಿ ನಡೆಯುವ ವಿವಾಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವವರ ಸಂಖ್ಯೆ 3 ಪಟ್ಟು ಹೆಚ್ಚಿ ಸರಾಸರಿ 3000 ಮುಟ್ಟಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಜೊತೆಗೆ ಇಂಥ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಕೋವಿಡ್‌ ಹರಡುತ್ತದೆ ಎಂದು ಅಂದಾಜಿಸಿದವರ ಪ್ರಮಾಣ ಶೇ.60ರಷ್ಟು ಕುಸಿತ ಕಂಡಿದೆ. 2020ರಲ್ಲಿ ಶೇ.57ರಷ್ಟು ಜನರು ವಿವಾಹ ಕಾರ್ಯಕ್ರಮಗಳಿಂದ ಕೋವಿಡ್‌ ಹಬ್ಬುತ್ತದೆ ಎಂದು ಹೇಳಿದ್ದರೆ ಆ ಪ್ರಮಾಣ ಇದೀಗ ಶೇ.22ಕ್ಕೆ ಇಳಿದಿದೆ.

3 ಕೊರೋನಾ ಮುಕ್ತ ಜಿಲ್ಲೆಗಳಲ್ಲಿ ಮತ್ತೆ ಸೋಂಕು

 ರಾಜ್ಯದಲ್ಲಿ ನ.15ರ ವೇಳೆಗೆ ಸಂಪೂರ್ಣ ಕೊರೋನಾ (Coronavirus) ಮುಕ್ತಗೊಂಡಿದ್ದ ಬೀದರ್‌ (Bidar), ಗದಗ (Gadag), ಹಾವೇರಿ (Haveri) ಜಿಲ್ಲೆಗಳಲ್ಲಿ ಪುನಃ ಕೊರೋನಾ (Corona) ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ ಹಲವು ದಿನಗಳಿಂದ ಕೊರೋನಾ ಸೋಂಕು ವರದಿಯಾಗದೆ ಗದಗ, ಬೀದರ್‌ ಹಾಗೂ ಹಾವೇರಿ ಜಿಲ್ಲೆಗಳು ನ.15ರ ವೇಳೆಗೆ ಸಕ್ರಿಯ ಸೋಂಕಿತರೇ ಇಲ್ಲದ ಸಂಪೂರ್ಣ ಕೊರೋನಾ ಮುಕ್ತ ಜಿಲ್ಲೆಗಳಾಗಿದ್ದವು. ಆದರೆ, ಕಳೆದ ಒಂದು ವಾರದಲ್ಲಿ ಮೂರು ಜಿಲ್ಲೆಗಳಲ್ಲೂ ಮತ್ತೆ ಕೊರೋನಾ ಸೋಂಕು ಪತ್ತೆಯಾಗಿದೆ.

ಹೀಗಾಗಿ ರಾಜ್ಯದಲ್ಲಿ (karnataka) ಕೊರೋನಾ ಸಂಪೂರ್ಣ ಮುಕ್ತಗೊಂಡಿರುವ ಜಿಲ್ಲೆಯೇ ಇಲ್ಲದಂತಾಗಿದೆ.  ಬೀದರ್‌ನಲ್ಲಿ ನ.14 ರಂದು ಕೊನೆಯ ಕೊರೋನಾ ಸೋಂಕಿತ ಗುಣಮುಖರಾಗಿದ್ದರು. ಹಾವೇರಿ ಜಿಲ್ಲೆಯಲ್ಲಿ ನ.11 ರಂದು ಅಂತಿಮ ಸೋಂಕಿತ ಗುಣಮುಖ ಹೊಂದಿದ ಮೇಲೆ ಸಕ್ರಿಯ  ಸೋಂಕು ಶೂನ್ಯಕ್ಕೆ ತಲುಪಿತ್ತು. ಇನ್ನು ಗದಗ ಜಿಲ್ಲೆಯಲ್ಲಿ ಅ.16 ರಿಂದಲೇ ಒಬ್ಬರೂ ಸಕ್ರಿಯ ಸೋಂಕಿತರು ಇರಲಿಲ್ಲ. ಇದೀಗ ಕಳೆದ ಒಂದು ವಾರದಲ್ಲಿ ​​​ಗದಗ ಜಿಲ್ಲೆಯಲ್ಲಿ 1, ಹಾವೇರಿಯಲ್ಲಿ 1, ಬೀದರ್‌ ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ವರದಿಯಾಗಿದೆ.

click me!