ವಂದೇ ಭಾರತ್‌ಗೆ ಕಲ್ಲೆಸೆದ ಮೂವರು ಬಾಲಕರ ಬಂಧನ

By Kannadaprabha NewsFirst Published Jan 6, 2023, 10:55 AM IST
Highlights

ಇತ್ತೀಚೆಗೆ ನಡೆದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಕಿಶನ್‌ಗಂಜ್‌ನಲ್ಲಿ ಮೂವರು ಬಾಲಕರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಕಿಶನ್‌ಗಂಜ್‌: ಇತ್ತೀಚೆಗೆ ನಡೆದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಕಿಶನ್‌ಗಂಜ್‌ನಲ್ಲಿ ಮೂವರು ಬಾಲಕರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಡಿ.30ರಂದು ದೇಶದ ಆರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಪ್ರಧಾನಿಗಳು ಉದ್ಘಾಟಿಸಿದ್ದರು,  ಜ.3 ರಂದು ಆ ರೈಲಿನ ಮೇಲೆ ಕಲ್ಲು ತೂರಾಟವಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ವಿಡಿಯೋ ದೃಶ್ಯಾವಳಿ ಆಧರಿಸಿ ನಾಲ್ವರು ಬಾಲಕರನ್ನು ಗುರುತಿಸಿದ್ದರು. ಈ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಇನ್ನೊಬ್ಬನನ್ನು ಹುಡುಕುತ್ತಿದ್ದಾರೆ. 

ಕಲ್ಲೆಸೆದಿದ್ದು ಬಿಹಾರದಲ್ಲಿ!
ಇತ್ತೀಚೆಗೆ ಉದ್ಘಾಟನೆಯಾದ ಹೌರಾ-ನ್ಯೂ ಜಲಪೈಗುರಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಎರಡು ಬಾರಿ ಕಲ್ಲು ತೂರಾಟ ನಡೆದಿರುವುದು ಬಿಹಾರದಲ್ಲಿ ಹೊರತು ಬಂಗಾಳದಲ್ಲಿ ಅಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಮಾಧ್ಯಮಗಳು ಬಂಗಾಳದಲ್ಲಿ ಕಲ್ಲು ತೂರಾಟ ನಡೆದಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿವೆ. ಇದರಿಂದಾಗಿ ರಾಜ್ಯದ ಮರ್ಯಾದೆ ನಷ್ಟವಾಗಿದೆ. ನಾನು ಅಂತಹ ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅವರು ಕಿಡಿಕಾರಿದ್ದರು. ಅಲ್ಲದೇ, ವಂದೇ ಭಾರತ್‌ ರೈಲು ಯಾವುದೇ ವಿಶೇಷ ರೈಲು ಅಲ್ಲ, ಅದು ಹಳೆ ರೈಲಿಗೆ ಹೊಸ ಇಂಜಿನ್‌ ಅಳವಡಿಸಿರುವುದಷ್ಟೆ ಎಂದು ಟೀಕಿಸಿದ್ದರು.

Vande Bharat Express: ಮೈಸೂರು-ಚೆನ್ನೈ ರೈಲಿಗೆ ಹಸು ಡಿಕ್ಕಿ, ಮುಂಭಾಗಕ್ಕೆ ಹಾನಿ!

ವಂದೇ ಭಾರತ್‌ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆಯುತ್ತಿದ್ದನ್ನು ತಡೆಯಲು ಕ್ರಮಕೈಗೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಸ್ಟೇಷನ್‌ನಿಂದ ರೈಲು ನಿರ್ಗಮನಗೊಂಡ ಬಳಿಕ ಅದರ ಚಾಲನೆಯ ಸ್ಥಿತಿಯನ್ನು ತಿಳಿದುಕೊಳ್ಳಲು ವಾಟ್ಸಪ್‌ ಗ್ರೂಪ್‌ವೊಂದನ್ನು ಮಾಡಲಾಗಿದೆ. ಜಲ್ಪೈಗುರಿಯಿಂದ ಹೌರಾ ಸ್ಟೇಷನ್‌ ಮಧ್ಯದಲ್ಲಿ ಸಾಗುವ ಎಲ್ಲಾ ಸ್ಟೇಷನ್‌ಗಳಲ್ಲೂ ಹಾಗೂ ರೈಲಿನೊಳಗೂ 'ರಾಜ್ಯ ರೈಲ್ವೆ ಪೊಲೀಸ್‌ ಪಡೆ' (ಜಿಆರ್‌ಪಿ) ಗಸ್ತು ತಿರುಗಲಿದೆ. ಕಲ್ಲೆಸೆತದಂತಹ ಘಟನೆ ನಡೆದರೆ ಕೂಡಲೇ ನಿಲ್ದಾಣದಲ್ಲಿನ ಪೊಲೀಸರು ಘಟನಾ ಸ್ಥಳಕ್ಕೆ ತೆರಳಲಿದ್ದಾರೆ. ಜತೆಗೆ ಇಂಥ ಘಟನೆ ತಡೆಯಲು ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ವಂದೇ ಭಾರತ್‌ ರೈಲು ಮೇಲೆ ಸೋಮವಾರ ಹಾಗೂ ಮಂಗಳವಾರ ಕಲ್ಲೆಸೆತ ನಡೆದಿದ್ದು, ಒಬ್ಬ ಪ್ರಯಾಣಿಕನ ಮುಖಕ್ಕೆ ಗಾಯವಾಗಿತ್ತು. 

ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ವಂದೇ ಮಾತರಂ ಹಾಡಿದ ಬೆಂಗಳೂರು ವಿದ್ಯಾರ್ಥಿಗಳು!

click me!