
ನವದೆಹಲಿ: ಉತ್ತರಾಖಂಡದ ಹಲ್ದ್ವಾ ನಿಯಲ್ಲಿ ರೈಲ್ವೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ನೆಲೆಸಿದ್ದ 50 ಸಾವಿರ ಜನರ ತೆರವಿಗೆ ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಗುರುವಾರ ತಡೆ ನೀಡಿರುವ ಸುಪ್ರೀಂಕೋರ್ಟ್, ಇದೊಂದು ಮಾನವೀಯ ಪ್ರಕರಣವಾಗಿದ್ದು ರಾತ್ರೋರಾತ್ರಿ 50 ಸಾವಿರ ಜನರನ್ನು ಮನೆಗಳಿಂದ ಹೊರಹಾಕಲಾಗದು ಎಂದು ಹೇಳಿದೆ. ಒತ್ತುವರಿಯಾಗಿದೆ ಎಂದು ಹೇಳಲಾದ ಜಾಗ ತಮಗೆ ಸೇರಿದ್ದು ಎಂದು ಸಾಬೀತುಪಡಿಸುವ ಭೂದಾಖಲೆಗಳು (land records) ತಮ್ಮ ಬಳಿ ಇದೆ ಎಂದು ಹಲವು ನಿವಾಸಿಗಳು ವಾದಿಸುತ್ತಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ಮಾನವೀಯ ನೆಲೆಯಲ್ಲಿ (humanitarian basis) ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ನ್ಯಾ.ಎಸ್.ಕೆ.ಕೌಲ್ (S. K. Kaul) ಮತ್ತು ನ್ಯಾ.ಎ.ಎಸ್.ಓಕಾ (A. S. Oka) ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಜೊತೆಗೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಿವಾಸಿಗಳು ಸಲ್ಲಿಸಿರುವ ಅರ್ಜಿಯ ಕುರಿತು ಉತ್ತರಾಖಂಡ ಸರ್ಕಾರ ಮತ್ತು ರೈಲ್ವೆಗೆ ನೋಟಿಸ್ ಜಾರಿ ಮಾಡಿದೆ.
ಒತ್ತುವರಿಯಾಗಿದೆ ಎನ್ನಲಾದ ಜಾಗದ ಹಕ್ಕಿನ ಬಗ್ಗೆ ಹಲವು ಪ್ರಶ್ನೆಗಳಿವೆ. ಅದು ಯಾವ ರೀತಿಯ ಭೂಮಿ? ಭೂಮಿಯ ಮಾಲೀಕತ್ವ ಯಾರಿಗೆ ಸೇರಿದ್ದು? ಒಂದು ವೇಳೆ ಈ ಜಾಗವನ್ನು ಮಾರಿದ್ದರೆ ಹಕ್ಕುಗಳನ್ನು ನೀಡಿರುವ ರೀತಿ, ಹೀಗೆ ಹಲವು ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ. ಭೂಮಿಯ ಮಾಲೀಕತ್ವ ಹೊಂದಿರುವವರು ಮತ್ತು ಹೊಂದದೇ ಇರುವವರನ್ನು ಪ್ರತ್ಯೇಕಿಸಬೇಕಿದೆ. ಹೀಗಾಗಿ ಅಧಿಕಾರಿಗಳು ಕಾರ್ಯಸಾಧು ಆಗಬಹುದಾದ ಪರಿಹಾರ ಹುಡುಕಬೇಕು ಎಂದು ನ್ಯಾಯಾಲಯ ಹೇಳಿದೆ.
4000 ಮನೆ ಧ್ವಂಸ ವಿರುದ್ಧ ನಿವಾಸಿಗಳು ಸುಪ್ರೀಂಕೋರ್ಟ್‌ಗೆ
ಪ್ರಕರಣ ಹಿನ್ನೆಲೆ:
ಹಲ್ವಾನಿಯ ಬನ್‌ಭೂಲ್‌ಪುರ ಪ್ರದೇಶದಲ್ಲಿ (Banbhoolpur area) ತನಗೆ ಸೇರಿದ 29 ಎಕರೆ ಭೂಮಿ ಒತ್ತುವರಿಯಾಗಿದೆ. ಒಟ್ಟಾರೆ 4,365 ಒತ್ತುವರಿ ಪ್ರಕರಣಗಳಿದ್ದು, ಇದರಲ್ಲಿ 4 ಸಾವಿರ ಕುಟುಂಬಗಳು ವಾಸಿಸುತ್ತಿವೆ ಎಂಬುದು ರೈಲ್ವೆ ವಾದ. ಈ ಬಗ್ಗೆ ರೈಲ್ವೆ ಇಲಾಖೆ ಹೈಕೋರ್ಟ್ ಮೊರೆ ಹೋಗಿತ್ತು. ಈ ಬಗ್ಗೆ ಡಿ.20ರಂದು ಮತ್ತೊಂದು ಆದೇಶ ಹೊರಡಿಸಿದ್ದ ಹೈಕೋರ್ಟ್, ಎಲ್ಲಾ ಒತ್ತುವರಿದಾರರಿಗೆ ಒಂದು ವಾರದ ನೋಟಿಸ್ ಕೊಟ್ಟು ಬಳಿಕ ಅವರನ್ನು ತೆರವುಗೊಳಿಸಬೇಕೆಂದು ಹೇಳಿತ್ತು.
ನಿವಾಸಿಗಳ ವಾದ ಏನು?:
ಹೈಕೋರ್ಟ್ ಆದೇಶ ಪ್ರಶ್ನಿಸಿ ಹಲವು ನಿವಾಸಿಗಳು ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ನಾವು ಹಲವು ದಶಕಗಳಿಂದ ಇದೇ ಜಾಗದಲ್ಲಿ ವಾಸವಿದ್ದೇವೆ. ನಮಗೆ ಭೂಮಿಯ ಮಾಲೀಕತ್ವ ನೀಡುವ ದಾಖಲೆಗಳೂ ಇವೆ ಎಂದು ಹೇಳಿದ್ದಾರೆ. ಇನ್ನು ಕೆಲವರು, 1947ರ ದೇಶ ವಿಭಜನೆ ವೇಳೆ ಸರ್ಕಾರ ಭೂಮಿಯನ್ನು ಹರಾಜು ಹಾಕಿದ ವೇಳೆ ನಾವು ಖರೀದಿಸಿದ್ದೇವೆ ಎಂದು ವಾದಿಸಿದ್ದಾರೆ. ಜೊತೆಗೆ, ಭೂಮಿಯ ಮಾಲೀಕತ್ವದ ಕುರಿತು ವ್ಯಾಜ್ಯ ಈಗಾಗಲೇ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದನ್ನು ಪರಿಗಣಿಸದೆಯೇ ಹೈಕೋರ್ಟ್ ಮನೆ, ಶಾಲೆ, ಕಟ್ಟಡ, ಉದ್ಯಮ, ಮಂದಿರ, ಮಸೀದಿಗಳನ್ನು ಒಳಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲು ಆದೇಶಿಸುವ ಮೂಲಕ ಲೋಪ ಎಸಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಯೋಗಿ ಸರ್ಕಾರ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್, ಒಬಿಸಿ ಮೀಸಲು ಹಗ್ಗಜಗ್ಗಾಟದಲ್ಲಿ ಲಖನೌ ಆದೇಶಕ್ಕೆ ತಡೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ