'ನಕಲಿ ಮದ್ಯ ಕುಡ್ದೋರು, ಸಾಯ್ದೆ ಇನ್ನೇನಾಗ್ತಾರೆ..' ಬಿಹಾರ ಸಿಎಂ ನಿತೀಶ್‌ ಮಾತು, ಸಾವಿನ ಸಂಖ್ಯೆ 39ಕ್ಕೆ ಏರಿಕೆ!

By Santosh Naik  |  First Published Dec 15, 2022, 1:17 PM IST

ಬಿಹಾರದ ಸರನ್‌ನಲ್ಲಿ ಇದುವರೆಗೆ 39 ಮಂದಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಈ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರತಿಪಕ್ಷಗಳ ಆರೋಪಕ್ಕೆ ವಿಧಾನಸಭೆಯಲ್ಲಿ ಉತ್ತರ ನೀಡಿರುವ ನಿತೀಶ್‌ ಕುಮಾರ್‌, ನಕಲಿ ಮದ್ಯ ಯಾರು ಸೇವಿಸ್ತಾರೋ ಅವರು ಸಾಯ್ದೆ ಇನ್ನೇನಾಗ್ತಾರೆ. ಈ ವಿಚಾರದಲ್ಲಿ ಖುದ್ದು ಜನರೇ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.


ನವದೆಹಲಿ (ಡಿ.15): ಮದ್ಯ ನಿಷೇಧ ಮಾಡಿರುವ ರಾಜ್ಯವಾದ ಬಿಹಾರದದ ಛಾಪ್ರಾದ ಸರನ್‌ನಲ್ಲಿ ಈವರೆಗೂ ನಕಲಿ ಮದ್ಯ ಸೇವಿಸಿ 39 ಮಂದಿ ಸಾವು ಕಂಡಿದ್ದು, ಇದರಲ್ಲಿ ಏರಿಕೆ ಆಗುತ್ತಲೇ ಇದೆ. ಈ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ, ಸಿಎಂ ನಿತೀಶ್‌ ಕುಮಾರ್‌ ಹಾಗೂ ಮಹಾಘಟಬಂದನ್‌ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದೆ. ಪ್ರತಿಪಕ್ಷಗಳ ಆರೋಪಕ್ಕೆ ಬಿಹಾರ ವಿಧಾನಸಭೆಯಲ್ಲಿ ಉತ್ತರ ನೀಡಿದ ನಿತೀಶ್‌ ಕುಮಾರ್‌, ಯಾರೆಲ್ಲಾ ನಕಲಿ ಮದ್ಯ ಸೇವಿಸ್ತಾರೋ ಅವರೆಲ್ಲಾ ಸಾಯೋದು ಖಂಡಿತ. ಖುದ್ದು ಜನರೇ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಕೆಲವೊಂದು ವ್ಯಕ್ತಿಗಳು ದುಡ್ಡಿಗಾಗಿ ಈ ಕೆಲಸ ಮಾಡ್ತಾರೆ. ಕೆಲವು ವ್ಯಕ್ತಿಗಳು ನಕಲಿ ಮದ್ಯ ಸೇವಿಸುವ ತಪ್ಪು ಮಾಡ್ತಾರೆ. ಇಂಥವನ್ನೆಲ್ಲಾ ಸೇವಿಸುವ ವ್ಯಕ್ತಿಗಳು ಖಂಡಿತವಾಗಿ ಸಾಯುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ಆರು ವರ್ಷಗಳಿಂದ ಮದ್ಯಕ್ಕೆ ನಿಷೇಧ ವಿಧಿಸಲಾಗಿದೆ. ಹಾಗಿದ್ದರೂ ಜನರು ನಕಲಿಯಾಗಿ ತಯಾರಿಸುವ ಮದ್ಯವನ್ನು ಸೇವಿಸಲು ಹೋಗುತ್ತಾರೆ. ಬೇರೆ ರಾಜ್ಯಗಳಲ್ಲೂ ಕೂಡ ಇಂಥ ಘಟನೆಗಳು ಆಗಿವೆ. ಹಾಗಾಗಿ ಸ್ವತಃ ಜನರೇ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಬಿಹಾರದಲ್ಲಿ ಮದ್ಯಕ್ಕೆ ನಿಷೇಧ ಇರುವ ಕಾರಣ, ಕೆಲವೊಬ್ಬರು ನಕಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ. ಇದನ್ನು ಸೇವಿಸಿದ ಜನರು ಸಾವು ಕಂಡಿದ್ದಾರೆ. ಮದ್ಯ ಕುಡುಯುವುದು ಕೆಟ್ಟ ಅಭ್ಯಾಸ. ಇದನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು ಎಂದು ನಿತೀಶ್‌ ಕುಮಾರರ್‌ ಹೇಳಿದ್ದಾರೆ.

ಈಗಾಗಲೇ ಈ ವಿಚಾರದಲ್ಲಿ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದೇನೆ. ನಕಲಿ ಮದ್ಯ ಕುಡಿಯುವ ಬಡವರನ್ನು ತಡೆಯಿರಿ. ಆದರೆ, ಬಡವರನ್ನು ಹಿಡಿದು ಶಿಕ್ಷೆ ನೀಡಬೇಡಿ.  ಈ ವ್ಯವಹಾರ ಮಾಡುವ ವ್ಯಕ್ತಿಗಳನ್ನು ಹಿಡಿದು ಶಿಕ್ಷೆ ನೀಡಿ ಎಂದು ಸೂಚನೆ ನೀಡಿದ್ದೇನೆ. ಮದ್ಯ ನಿಷೇಧದಿಂದ ಈಗಾಗಲೇ ಸಾಕಷ್ಟು ಜನರಿಗೆ ಲಾಭವಾಗಿದೆ. ಆಲ್ಕೋಹಾಲ್‌ ಕುಡಿಯುವುದನ್ನೇ ಹಲವರು ಬಿಟ್ಟಿದ್ದಾರೆ. ಲಿಕ್ಕರ್‌ ಮಾರಾಟ ಮಾಡುವ ವ್ಯವಹಾರವನ್ನು ಯಾರೂ ಕೂಡ ಮಾಡಬಾರದು. ಮದ್ಯ ಮಾರಾಟ ಮಾಡುವ ವ್ಯವಹಾರವನ್ನು ಬಿಟ್ಟು ಬೇರೆ ಉದ್ಯಮ ಯಾವುದೇ ಮಾಡುವುದಿದ್ದರೆ ಹೇಳಿ, ಸರ್ಕಾರ ನಿಮಗೆ 1 ಲಕ್ಷ ರೂಪಾಯಿ ಕೊಟ್ಟು ಬೇರೆ ಉದ್ಯಮ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 19 ಸಾವು, ವಿಧಾನಸಭೆಯಲ್ಲಿ ಪ್ರತಿಪಕ್ಷಕ್ಕೆ ಬಾಯ್ಮುಚ್ಚಿ ಎಂದ ನಿತೀಶ್‌ ಕುಮಾರ್‌

ಕಳೆದ ಬಾರಿ ನಕಲಿ ಮದ್ಯ ಸೇವಿಸಿ ಜನರು ಸಾವನ್ನಪ್ಪಿದಾಗ ಯಾರೋ ಒಬ್ಬರು ಸರ್ಕಾರ ಈ ಜನರಿಗೆ ಪರಿಹಾರ ನೀಡಬೇಕು ಎಂದು ಹೇಳಿದ್ದರು. ಆದರೆ ವೈನ್‌ನಂಥ ಮದ್ಯ ಕುಡಿದರೆ ಅವನು ಸಾಯುತ್ತಾನೆ. ಇದಕ್ಕೆ ಉದಾಹರಣೆ ನಮ್ಮ ಮುಂದಿದೆ. ಈ ಬಗ್ಗೆ ಸಂತಾಪ ವ್ಯಕ್ತಪಡಿಸಬಹುದು. ಇಂತಹ ಘಟನೆಗಳು ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಜನರಿಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದ್ದಾರೆ.

Tap to resize

Latest Videos

ನಕಲಿ ಮದ್ಯ ಪ್ರಕರಣ ಸಾವಿನ ಸಂಖ್ಯೆ 30ಕ್ಕೆ ಏರಿಕೆ, 'ಇಮ್ಯುನಿಟಿ ಹೆಚ್ಚಿಸಿಕೊಳ್ಳಿ' ಎಂದ ಬಿಹಾರ ಸಚಿವ!

39 ಜನರ ಸಾವು:
ಬಿಹಾರದ ಸರನ್‌ನ ಇಸುಪುರ್ ಮತ್ತು ಮಶ್ರಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಮದ್ಯ ಸೇವಿಸಿ ಈವರೆಗೂ  39 ಜನರು ಸಾವನ್ನಪ್ಪಿದ್ದಾರೆ. ಮೃತರ ಸಂಬಂಧಿಕರ ಪ್ರಕಾರ, ಮದ್ಯಪಾನದಿಂದ ಸಾವು ಸಂಭವಿಸಿದೆ. ಆದರೆ, ಈ ವಿಚಾರದಲ್ಲಿ ಆಡಳಿತ ಮೌನ ವಹಿಸುತ್ತಿದೆ. ಇನ್ನೂ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ.

click me!