India Gate: ನಿತೀಶ್‌ ಪ್ರಧಾನಿ ಕನಸು ರಾಹುಲ್‌ಗೆ ತಣ್ಣೀರು?

By prashanth GFirst Published Sep 16, 2022, 10:57 AM IST
Highlights

ಸೋನಿಯಾ, ಲಾಲುಪ್ರಸಾದ್‌ ಭರವಸೆ ನೀಡಿದ ನಂತರವೇ ಬಿಜೆಪಿ ಮೈತ್ರಿ ತೊರೆದ ಬಿಹಾರ ಸಿಎಂ

India Gate Column by Prashant Natu

ಸಮಾಜವಾದಿ ಹಿನ್ನೆಲೆಯ ನಾಯಕರ ಒಂದು ದೌರ್ಬಲ್ಯ ಎಂದರೆ ಬಹಿರಂಗವಾಗಿಯೇ ಕಿತ್ತಾಡುವುದು. ಹೀಗಾಗಿ ಈ ಸಮಾಜವಾದಿ ನಾಯಕರಿದ್ದ ಸರ್ಕಾರಗಳು ದಿಲ್ಲಿಯಲ್ಲಿ ಎಂದೂ ಪೂರ್ತಿ ಅವಧಿ ಕಂಡಿಲ್ಲ. ಈಗ ನಿತೀಶ್‌ ಮತ್ತೆ ಹಳೆಯ ಜನತಾ ಪರಿವಾರವನ್ನು ಒಗ್ಗೂಡಿಸಲು ಯತ್ನಿಸುತ್ತಿದ್ದಾರೆ. ಸಫಲರಾಗುತ್ತಾರಾ ಎನ್ನುವುದೇ ಪ್ರಶ್ನಾರ್ಥಕ.

ಮಹಾಭಾರತದಲ್ಲಿ ದುರ್ಯೋಧನನ ಪತ್ನಿ ಕಳಿಂಗ ದೇಶದ ಭಾನುಮತಿ ಎಲ್ಲಿಂದಲೋ ಇಟ್ಟಿಗೆ, ಎಲ್ಲಿಂದಲೋ ಕಲ್ಲು, ಎಲ್ಲಿಂದಲೋ ಮಣ್ಣು ತಂದು ತನ್ನ ಪರಿವಾರ ಜೋಡಿಸಿಕೊಂಡು ಕೌರವರನ್ನು ಒಟ್ಟುಗೂಡಿಸಿದಳು ಎಂದು ಪುರಾಣದ ಕಥೆ ಹೇಳುತ್ತದೆ. ಅರ್ಥ ಇಷ್ಟೆ- ಸಮಾನಮನಸ್ಕರು ಅಲ್ಲದ ವ್ಯಕ್ತಿಗಳನ್ನು ಒಂದು ಉದ್ದೇಶಕ್ಕಾಗಿ ಒಟ್ಟಿಗೆ ತರುವುದು. 1977ರಲ್ಲಿ ಜಯಪ್ರಕಾಶ್‌ ನಾರಾಯಣ್‌ ಅವರು ಇಂದಿರಾ ಗಾಂಧಿ ವಿರುದ್ಧ ಆರ್‌ಎಸ್‌ಎಸ್‌, ಸಮಾಜವಾದಿಗಳು ಮತ್ತು ವಾಮಪಂಥೀಯರನ್ನು ಒಟ್ಟಿಗೆ ತಂದರು. 1989ರಲ್ಲಿ ವಿ.ಪಿ.ಸಿಂಗ್‌ ಬೊಫೋರ್ಸ್‌ ಹೆಸರಿನಲ್ಲಿ ರಾಜೀವ್‌ ಗಾಂಧಿ ವಿರುದ್ಧ ಎಲ್ಲರನ್ನೂ ಒಗ್ಗೂಡಿಸಿದರು. 1996ರಲ್ಲಿ ಸಿಪಿಎಂ ಮಹಾ ಪ್ರಧಾನ ಕಾರ್ಯದರ್ಶಿ ಹರಕಿಶನ್‌ ಸಿಂಗ್‌ ಸುರ್ಜೀತ್‌ ಬಿಜೆಪಿ ವಿರುದ್ಧ ಕಾಂಗ್ರೆಸ್‌, ಮಂಡಲವಾದಿಗಳು ಮತ್ತು ಎಡಪಕ್ಷಗಳನ್ನು ಒಟ್ಟಿಗೆ ತಂದರು. ಈಗ 2022ರಲ್ಲಿ 17 ವರ್ಷ ಬಿಜೆಪಿಯೊಟ್ಟಿಗೆ ಇದ್ದ ನಿತೀಶ್‌ಕುಮಾರ್‌ ಮೋದಿ ವಿರುದ್ಧ ಕಾಂಗ್ರೆಸ್‌ ಮತ್ತು ಪ್ರಾದೇಶಿಕ ಪಕ್ಷಗಳನ್ನು ಒಟ್ಟಿಗೆ ತರುವ ಪ್ರಯತ್ನದಲ್ಲಿ ಇದ್ದಾರೆ. ಮೂಲಗಳು ಹೇಳುತ್ತಿರುವ ಪ್ರಕಾರ 2024ರಲ್ಲಿ ಪ್ರಧಾನಿ ಅಭ್ಯರ್ಥಿ ಮಾಡುವ ಕಾಂಗ್ರೆಸ್‌ ಮತ್ತು ಲಾಲು, ಮುಲಾಯಂರ ಭರವಸೆ ನಂತರವೇ ನಿತೀಶ್‌ ಬಿಜೆಪಿ ಸಖ್ಯ ಬಿಟ್ಟು ಬಂದಿದ್ದಾರೆ. ಆದರೆ ರಾಹುಲ್‌, ಮಮತಾ, ಕೇಜ್ರಿವಾಲ್‌, ತೇಜಸ್ವಿ ಯಾದವ್‌, ಅಖಿಲೇಶ್‌ ಯಾದವ್‌, ಕೆಸಿಆರ್‌, ಅಜಿತ್‌ ಪವಾರರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಮೋದಿ ವಿರುದ್ಧ ನಿತೀಶ್‌ ಭಾನುಮತಿಯ ಪರಿವಾರ ಕಟ್ಟಲು ಯಶಸ್ವಿಯಾಗುತ್ತಾರಾ ಅನ್ನುವುದೇ ಪ್ರಶ್ನಾರ್ಥಕ.

India Gate: 2024ಕ್ಕೆ ನರೇಂದ್ರ ಮೋದಿ ಎದುರು ಯಾರು?

ನಿತೀಶ್‌ ಕುಮಾರ್‌ ಪ್ಲಾನ್‌ ಏನು?

ಕಾಂಗ್ರೆಸ್‌ ಮೂಲಗಳು ಹೇಳುವ ಪ್ರಕಾರ ನಿತೀಶ್‌ ಬಿಜೆಪಿ ಸಖ್ಯ ಬಿಟ್ಟು ಬಂದಿದ್ದೇ ಸೋನಿಯಾ ಗಾಂಧಿ ಮತ್ತು ಲಾಲು ಜೊತೆಗಿನ ಮಾತುಕತೆ ನಂತರ. ಈಗಿನ ಪ್ರಕಾರ 2024ರಲ್ಲಿ ಕಾಂಗ್ರೆಸ್‌ ಗಾಂಧಿ ಕುಟುಂಬದ ಯಾರನ್ನೂ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಿಲ್ಲ. ಬದಲಾಗಿ ಹಿಂದಿ ಪ್ರದೇಶದ ಹಿಂದುಳಿದ ಕುರ್ಮಿ ಸಮುದಾಯಕ್ಕೆ ಸೇರಿರುವ ನಿತೀಶ್‌ರನ್ನು ಅಖಿಲೇಶ್‌ ಯಾದವ್‌, ತೇಜಸ್ವಿ ಯಾದವ್‌, ಹೇಮಂತ್‌ ಸೋರೆನ್‌ ಮತ್ತು ಶರದ್‌ ಪವಾರ್‌ ಒಪ್ಪಿದರೆ ಕಾಂಗ್ರೆಸ್‌ ಅಭ್ಯಂತರ ಇಲ್ಲ ಎಂದು ಸೋನಿಯಾ, ನಿತೀಶ್‌, ಲಾಲು ಮಾತುಕತೆಯಲ್ಲಿ ನಿಕ್ಕಿ ಆಗಿದೆ. ಅಲ್ಲಿ ಲಾಲುಗಿರುವ ಆಸಕ್ತಿ ಎಂದರೆ 2024ಕ್ಕೆ ನಿತೀಶ್‌ ಪ್ರಧಾನಿ ಅಭ್ಯರ್ಥಿ ಆಗಿ ದಿಲ್ಲಿಗೆ ಹೋದರೆ ಗೆದ್ದರೂ ಸೋತರೂ 2025ಕ್ಕೆ ತೇಜಸ್ವಿ ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಆಗುತ್ತಾರೆ. ಬಿಹಾರದಲ್ಲಿ 4 ಪ್ರತಿಶತ ಇರುವ ಕುರ್ಮಿಗಳು ಯುಪಿಯಲ್ಲಿ 7 ಪ್ರತಿಶತ ಇದ್ದಾರೆ. ಜಾರ್ಖಂಡ್‌ ಮತ್ತು ಛತ್ತೀಸ್‌ಗಢದಲ್ಲಿ 4ರಿಂದ 5 ಪ್ರತಿಶತ ಇರುವ ಕುರ್ಮಿಗಳು ಗುಜರಾತ್‌ನ ಪಟೇಲರು ಮತ್ತು ಮಹಾರಾಷ್ಟ್ರದ ಕುಣಬಿಗಳು ಕೂಡ ನಮ್ಮವರೇ ಎಂದು ಹೇಳಿಕೊಳ್ಳುತ್ತಾರೆ. ಒಂದು ವೇಳೆ ಯುಪಿ ಮತ್ತು ಬಿಹಾರದ ಯಾದವರು ಕೂಡ ಸ್ಥಳೀಯ ಕಾರಣಗಳಿಗಾಗಿ ನಿತೀಶ್‌ರನ್ನು ಬೆಂಬಲಿಸಿದರೆ ಮೋದಿಗೆ ಸಡ್ಡು ಹೊಡೆಯುವ ಪ್ರಯತ್ನವನ್ನು ಮಾಡಬಹುದು ಎಂಬ ಚಿಂತನೆಯಲ್ಲಿ ಗಾಂಧಿ ಕುಟುಂಬ ಮತ್ತು ಲಾಲು, ನಿತೀಶ್‌ ಇದ್ದ ಹಾಗೆ ಕಾಣುತ್ತಿದೆ. ಮೋದಿ ಅವರಂತೆ ನಿತೀಶ್‌ ಕೂಡ ಹಿಂದುಳಿದ ವರ್ಗದವರು, 17 ವರ್ಷ ರಾಜ್ಯ ಆಳಿದವರು, ಮೋದಿಯಷ್ಟೇ ಪ್ರಾಮಾಣಿಕ. ಕೊನೆಗೆ ಮೋದಿ ಗುಜರಾತಿನ ಹಿಂದುಳಿದ ವರ್ಗದ ನಾಯಕ, ನಿತೀಶ್‌ ಹಿಂದಿ ನಾಡಿನ ಹಿಂದುಳಿದ ನಾಯಕ ಎಂದೆಲ್ಲ ಪ್ರಚಾರ ಮಾಡಿದರೆ ಸ್ವಲ್ಪ ಬಿಜೆಪಿಯನ್ನು ದುರ್ಬಲ ಗೊಳಿಸಬಹುದು ಎಂದು ಲೆಕ್ಕ ಹಾಕಿಯೇ ಬಿಹಾರದ ಹೊಸ ಪ್ರಯೋಗ ನಡೆದಿದೆ.

ಸಮಾಜವಾದಿಗಳ ಬೀದಿ ಜಗಳ

ಮಹಾತ್ಮಾ ಗಾಂಧೀಜಿ ಅನುಯಾಯಿಯಾಗಿದ್ದ, ಪಂಡಿತ ನೆಹರು ಜೊತೆಗಿದ್ದ ಜಯಪ್ರಕಾಶ ನಾರಾಯಣರ ವರ್ಚಸ್ಸು ಮತ್ತು ವ್ಯಕ್ತಿತ್ವದ ಕಾರಣದಿಂದಲೇ ಮೊರಾರ್ಜಿ ದೇಸಾಯಿ, ಚೌಧರಿ ಚರಣಸಿಂಗ್‌, ಬಾಬು ಜಗಜೀವನ್‌ ರಾಮ್‌, ಜಾಜ್‌ರ್‍ ಫರ್ನಾಂಡಿಸ್‌ ಮತ್ತು ನಾನಾಜಿ ದೇಶಮುಖ್‌ ತರಹದ ಎಡದಿಂದ ಬಲದವರೆಗಿನ ನಾಯಕರು ಒಟ್ಟಿಗೆ ಬಂದು, ತಮ್ಮ ತಮ್ಮ ಮೂಲ ಪಕ್ಷಗಳನ್ನು ವಿಸರ್ಜಿಸಿ ಜನತಾ ಪಾರ್ಟಿ ಸ್ಥಾಪಿಸಲು ಸಾಧ್ಯ ಆಯಿತು. 1947ರಲ್ಲಿ ಮಹಾತ್ಮಾ ಗಾಂಧೀಜಿ ಹೇಗೆ ಅಧಿಕಾರ ಬೇಡ ಎಂದು ದೂರ ನಿಂತಿದ್ದರೋ, ಹಾಗೆ 1977ರಲ್ಲಿ ಜೆಪಿ ನಿಂತಿದ್ದರಿಂದಲೇ ದೇಶದಲ್ಲಿ ಇಂದಿರಾ ಸರ್ಕಾರ ಕಿತ್ತೆಸೆದು, ಕಾಂಗ್ರೆಸ್ಸೇತರ ಸರ್ಕಾರ ಬಂತು. ಆದರೆ ಪ್ರಧಾನಿ ಯಾರಾಗಬೇಕೆಂದು ತೀರ್ಮಾನಿಸಲು ಕುಳಿತಾಗ ಜೆಪಿ ಮತ್ತು ಆಚಾರ್ಯ ಕೃಪಲಾನಿ ಅವರು ಮೊರಾರ್ಜಿ ಹೆಸರು ಹೇಳಿದಾಗ ಜಗಜೀವನ ರಾಮ್‌, ಜಾಜ್‌ರ್‍ ಫರ್ನಾಂಡಿಸ್‌, ರಾಜ್‌ ನಾರಾಯಣ ತರಹದವರು ಆಯ್ಕೆ ನಡೆಯುತ್ತಿದ್ದ ದಿಲ್ಲಿಯ ಗಾಂಧಿ ಪೀಸ್‌ ಫೌಂಡೇಶನ್‌ ಹೊರಗಡೆ ಬಂದು, ಇದು ಅನ್ಯಾಯ ಎಂದು ಹೇಳಿ ಸಭೆಗೆ ಬಹಿಷ್ಕಾರ ಹಾಕಿ ಹೋದರು. ಕೊನೆಗೆ ಮೊರಾರ್ಜಿ, ಚರಣಸಿಂಗ್‌, ಜಗಜೀವನ ರಾಮ್‌ ಎಷ್ಟುಕಿತ್ತಾಡಿದರು ಎಂದರೆ ದೇಶದ ಜನತೆ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾರನ್ನು 24 ತಿಂಗಳಲ್ಲಿ ವಾಪಸ್‌ ತಂದು ಪ್ರಧಾನಿ ಮಾಡಿದರು. ಈ ಸಮಾಜವಾದಿ ಹಿನ್ನೆಲೆಯ ನಾಯಕರ ಒಂದು ದೌರ್ಬಲ್ಯ ಎಂದರೆ ಬಹಿರಂಗವಾಗಿಯೇ ಕಿತ್ತಾಡುವುದು. ಹೀಗಾಗಿ ಈ ಸಮಾಜವಾದಿ ನಾಯಕರಿದ್ದ ಸರ್ಕಾರಗಳು ದಿಲ್ಲಿಯಲ್ಲಿ ಎಂದೂ ಪೂರ್ತಿ ಅವಧಿ ಕಾಣಲಿಲ್ಲ.

ವಿ.ಪಿ.ಸಿಂಗ್‌, ಚಂದ್ರಶೇಖರ್‌ ಗುದ್ದಾಟ

ಇಂದಿರಾ ಹತ್ಯೆಯ ನಂತರ ಭಾರೀ ಬಹುಮತ ಪಡೆದಿದ್ದ ರಾಜೀವ್‌ ಗಾಂಧಿ ಸರ್ಕಾರವನ್ನು ಅಲುಗಾಡಿಸಿದ್ದು ಕಾಂಗ್ರೆಸ್‌ನಿಂದ ಹೊರಗೆ ಬಂದು ವಿ.ಪಿ.ಸಿಂಗ್‌ ಮಾಡಿದ ಬೊಫೋರ್ಸ್‌ ಆರೋಪ. ಹೀಗಾಗಿ 1989ರಲ್ಲಿ ಕಾಂಗ್ರೆಸ್‌ ಸೋತು ಜನತಾಪಾರ್ಟಿಯೇ ಜನತಾದಳದ ರೂಪದಲ್ಲಿ ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ಹಿಡಿಯುವ ಅವಕಾಶ ಬಂದಾಗ, ವಿ.ಪಿ.ಸಿಂಗ್‌, ದೇವಿಲಾಲ್‌ ಮತ್ತು ಚಂದ್ರಶೇಖರ್‌ ನಡುವೆ ಪೈಪೋಟಿ ನಡೆಯಿತು. ವಿ.ಪಿ.ಸಿಂಗ್‌ ಮತ್ತು ಚಂದ್ರಶೇಖರ್‌ ನಡುವೆ ಎಷ್ಟುಗುದ್ದಾಟ ನಡೆಯಿತು ಎಂದರೆ, ದೇವಿಲಾಲ್‌ ಹೆಸರಿಗೆ ಹೊರಗೆ ಸರ್ವಸಮ್ಮತಿ ಇತ್ತು. ಆದರೆ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ದೇವಿಲಾಲ್‌ ಅವರೇ ವಿ.ಪಿ.ಸಿಂಗ್‌ ಹೆಸರು ಹೇಳಿದಾಗ, ಚಂದ್ರಶೇಖರ್‌ ಕುಳಿತಲ್ಲಿಯೇ ಇದು ಮೋಸ, ನನಗೆ ಒಪ್ಪಿಗೆ ಇಲ್ಲ ಎಂದು ಹೇಳಿ ಹೊರಗೆ ಹೋದರು. ಒಂದೂವರೆ ವರ್ಷದಲ್ಲಿ ಸರ್ಕಾರ ಬಿದ್ದು 1979ರಲ್ಲಿ ಹೇಗೆ ಚರಣ್‌ಸಿಂಗ್‌ ತಾನು ವಿರೋಧಿಸುತ್ತಿದ್ದ ಇಂದಿರಾ ಜೊತೆ ಹೋಗಿ ಪ್ರಧಾನಿ ಆದರೋ 1990ರಲ್ಲಿ ಚಂದ್ರಶೇಖರ್‌ ಬೊಫೋರ್ಸ್‌ ಆರೋಪ ಹೊತ್ತಿದ್ದ ರಾಜೀವ್‌ ಗಾಂಧಿ ಬೆಂಬಲ ಪಡೆದು ಪ್ರಧಾನಿ ಆಗಬೇಕಾಯಿತು.

ದೇವೇಗೌಡ ಪ್ರಧಾನಿ ಆಗಿದ್ದು ಹೇಗೆ?

1996ರಲ್ಲಿ ಬಿಜೆಪಿಯನ್ನು ತಡೆಯಲು ಹಳೆ ಸಮಾಜವಾದಿಗಳ ಜನತಾದಳಕ್ಕೆ ಕಾಂಗ್ರೆಸ್‌ ಬೆಂಬಲ ಕೊಡುವುದು ಪಕ್ಕಾ ಆದಾಗ ಮುಖ್ಯಮಂತ್ರಿ ಆಗಿದ್ದ ದೇವೇಗೌಡ ಮತ್ತು ಬಿಜು ಪಟ್ನಾಯಕ್‌ ಮೊದಲು ಹೋಗಿ ಪ್ರಧಾನಿ ಆಗಿ ಎಂದು ಕೇಳಿಕೊಂಡಿದ್ದು ವಿ.ಪಿ.ಸಿಂಗ್‌ರನ್ನು. ಆದರೆ ನನಗೆ ಬೇಡವೇ ಬೇಡ ಎಂದು ವಿ.ಪಿ.ಸಿಂಗ್‌ ಹರ್ಯಾಣದ ಸೋಹಣಾದ ಗೆಸ್ಟ್‌ ಹೌಸ್‌ಗೆ ಹೋಗಿ ಕುಳಿತಾಗ ಹೆಸರು ಬಂದಿದ್ದು ಜ್ಯೋತಿ ಬಸುದು. ಆದರೆ ಪ್ರಕಾಶ್‌ ಕಾರಟ್‌ ಪಾಲಿಟ್‌ ಬ್ಯೂರೋದಲ್ಲಿ ವಿರೋಧ ಮಾಡಿದಾಗ ಜ್ಯೋತಿ ಬಸು ಒಲ್ಲೆ ಎಂದರು. ಆಗ ಮುಲಾಯಂ ಮತ್ತು ಲಾಲು ಒಬ್ಬರಿಗೊಬ್ಬರು ಎಷ್ಟುವಿರೋಧಿಸುತ್ತಿದ್ದರು ಎಂದರೆ, ಮಧ್ಯಸ್ಥಿಕೆ ವಹಿಸಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಹರಕಿಶನ್‌ ಸಿಂಗ್‌ ಸುರ್ಜೀತ್‌ಗೆ ಸಾಕು ಸಾಕಾಗಿ ಹೋಯಿತು. ಕೊನೆಗೆ ವೆಸ್ಟರ್ನ್‌ ಕೋರ್ಟ್‌ನಲ್ಲಿ ರೂಮ್‌ ಮಾಡಿ ಕುಳಿತಿದ್ದ ಜಿ.ಕೆ.ಮೂಪನಾರ್‌ಗೆ ಹೋಗಿ ಕೇಳಿದಾಗ ಅವರು ನನಗೆ ಆಗೋಲ್ಲ ಅಂದರು. ಕೊನೆಗೆ ಅನೇಕ ದಿನಗಳ ಗುದ್ದಾಟದ ನಂತರ ತಮಿಳುನಾಡು ಭವನದಲ್ಲಿ ನಡೆದ ಸಭೆಯಲ್ಲಿ ದೇವೇಗೌಡರು ಪ್ರಧಾನಿ ಆಗುವುದು ನಿರ್ಧಾರ ಆಯಿತು. ಅದನ್ನು ರಾಮಕೃಷ್ಣ ಹೆಗಡೆ ವಿರೋಧಿಸಿದರು. ಪ್ರಧಾನಿ ಆದ ಕೆಲವೇ ದಿನಗಳಲ್ಲಿ ದೇವೇಗೌಡರು ಲಾಲು ಮೂಲಕ ಹೆಗಡೆ ಅವರನ್ನೇ ಹೊರಹಾಕಿಸಿದರು. ಬಹುತೇಕ ಕರ್ನಾಟಕದಲ್ಲಿ ಬಿಜೆಪಿ ಇಷ್ಟೊಂದು ಬೆಳೆಯಲು ದೇವೇಗೌಡ ಕೈಗೊಂಡ ಹೆಗಡೆ ಉಚ್ಚಾಟನೆಯ ನಿರ್ಧಾರವೇ ಕಾರಣ ಆಯಿತು. ಏಕೆಂದರೆ ಏಕಾಂಗಿ ಆಗಿದ್ದ ಹೆಗಡೆ ಬಿಜೆಪಿ ಜೊತೆ ಕೈಜೋಡಿಸಿದರು. ಮುಂದೆ ಹೆಗಡೆ ಜೊತೆಗಿದ್ದ ಲಿಂಗಾಯತರು ಯಡಿಯೂರಪ್ಪ ಮುಖ ನೋಡಿ ಬಿಜೆಪಿ ಕಡೆ ವಾಲಿದರು.

ಯಡಿಯೂರಪ್ಪಗೆ ಮೋದಿ ದೊಡ್ಡ ಹುದ್ದೆ ನೀಡಿದ್ದೇಕೆ?

ನಿತೀಶ್‌, ಎಚ್‌ಡಿಕೆ ಚರ್ಚೆ ಏನು?

ಹಳೆಯ ಜನತಾ ಪರಿವಾರದ ನಾಯಕರನ್ನು ದಿಲ್ಲಿಯಲ್ಲಿ ಭೇಟಿ ಆಗೋಣ ಎಂದು ನಿತೀಶ್‌ ಹೇಳಿಕಳಿಸಿದಾಗ ದೇವೇಗೌಡರು ಕಳುಹಿಸಿದ್ದು ಕುಮಾರಸ್ವಾಮಿ ಅವರನ್ನು. ಮೂಲಗಳ ಪ್ರಕಾರ ಕಾಂಗ್ರೆಸ್ಸನ್ನು ಇಷ್ಟಪಡದ ಕುಮಾರಸ್ವಾಮಿಗೆ ನಿತೀಶ್‌ಕುಮಾರ್‌ ರಾಜ್ಯಕ್ಕೆ ಸಂಬಂಧಪಟ್ಟಂತೆ ಒಂದು ಹೊಸ ಪ್ರಸ್ತಾವನೆ ಇಟ್ಟಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಬಲಶಾಲಿ ಆಗಿರುವ ಜೆಡಿಎಸ್‌, ಉತ್ತರ ಕರ್ನಾಟಕದಲ್ಲಿ ಜೆಡಿಯುವನ್ನು ಪುನಶ್ಚೇತನಗೊಳಿಸಿ ಮೈತ್ರಿ ಮಾಡಿಕೊಳ್ಳುವುದು. ಸಾಧ್ಯವಾದಷ್ಟುಬಿಜೆಪಿಗೆ ಡ್ಯಾಮೇಜ್‌ ಮಾಡುವುದು. ಆದರೆ 2023ರಲ್ಲಿ ಕಾಂಗ್ರೆಸ್ಸನ್ನು ತಡೆದರೆ ಅತಂತ್ರ ವಿಧಾನಸಭೆ ಸೃಷ್ಟಿಆಗುತ್ತದೆ. ಆಗ ಮಾತ್ರ ಜೆಡಿಎಸ್‌ನ ಪ್ರಸ್ತುತತೆ ಬೆಂಗಳೂರು, ದಿಲ್ಲಿಯಲ್ಲಿ ಉಳಿದುಕೊಳ್ಳುತ್ತದೆ ಎಂದು ಗೊತ್ತಿರುವ ಕುಮಾರಸ್ವಾಮಿ ನಿತೀಶ್‌ ಪ್ರಸ್ತಾವನೆಗೆ ಹೆಚ್ಚು ಉತ್ಸುಕತೆ ತೋರಿಸುತ್ತಿಲ್ಲ.

ಕೆಸಿಆರ್‌ ಪಾಟ್ನಾ ಪ್ರಸಂಗ

ಕಳೆದ ವಾರ ಕೆಸಿಆರ್‌ ನಿತೀಶ್‌ರನ್ನು ಭೇಟಿ ಆಗಲು ಪಾಟ್ನಾಗೆ ಹೋಗಿದ್ದರು. ಕೆಸಿಆರ್‌ ಬಂದ ರಸ್ತೆಯುದ್ದಕ್ಕೂ ‘ನಿತೀಶ್‌ ಮುಂದಿನ ದಾರಿ ದಿಲ್ಲಿ’ ಎಂಬ ಪೋಸ್ಟರ್‌ಗಳಿದ್ದವು. ತಮಾಷೆ ಎಂದರೆ ನಿತೀಶ್‌ರಿಗೆ ತುಂಬಾ ಆತ್ಮೀಯ ಪತ್ರಕರ್ತ ಒಬ್ಬರು ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್‌ರನ್ನು ಬೆಂಬಲಿಸುತ್ತೀರಾ ಎಂದು ಕೆಸಿಆರ್‌ಗೆ ಕೇಳಿದರು. ಆಗ ಕೆಸಿಆರ್‌ ಅದೆಲ್ಲ ಈಗೇಕೆ ಎಂದು ಹೇಳಲು ಹೋದಾಗ, ನಿತೀಶ್‌ ನಡೆಯಿರಿ ಹೋಗೋಣ ಎಂದು ಕರೆದರು. ಕೆಸಿಆರ್‌ ಏಳಲು ತಯಾರಿರಲಿಲ್ಲ. ಒಮ್ಮೆ ಊಹಿಸಿ ನೋಡಿ. ನಿತೀಶ್‌ಕುಮಾರ್‌, ಮಮತಾ, ಕೇಜ್ರಿವಾಲ್‌, ಅಖಿಲೇಶ್‌, ಮಾಯಾವತಿ, ಕುಮಾರಸ್ವಾಮಿ ಮತ್ತು ರಾಹುಲ್‌ ಗಾಂಧಿ ಒಂದೆಡೆ ಊಟ ಮಾಡುತ್ತಾ ತಮ್ಮಲ್ಲೇ ಒಬ್ಬನನ್ನು ನಾಯಕ ಎಂದು ಆರಿಸಬಹುದೇ? ಇವರೆಲ್ಲ ಒಟ್ಟಿಗೆ ಬರುವುದು ಕಷ್ಟದ ಕೆಲಸ.
 

click me!