ಬಿಹಾರ ಬಿಜೆಪಿ ಮೈತ್ರಿಗೆ ಸಿಎಂ ನಿತೀಶ್‌ ಗುಡ್‌ಬೈ! - ನಿರೀಕ್ಷೆಯಂತೆ ಲಾಲು ಪುತ್ರನ ಜೊತೆ ದೋಸ್ತಿ!

By Kannadaprabha News  |  First Published Aug 10, 2022, 2:30 AM IST
  • ಬಿಹಾರ ಬಿಜೆಪಿ ಮೈತ್ರಿಗೆ ಸಿಎಂ ನಿತೀಶ್‌ ಗುಡ್‌ಬೈ!
  •  ನಿರೀಕ್ಷೆಯಂತೆ ಲಾಲು ಪುತ್ರನ ಜೊತೆ ದೋಸ್ತಿ
  •  ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌, ಎಡರಂಗ ಜತೆ ಸೇರಿ ಮಹಾಗಠಬಂಧನ್‌
  •  ಮತ್ತೆ ಸಿಎಂ ಆಗಿ ನಿತೀಶ್‌, ಡಿಸಿಎಂ ಆಗಿ ತೇಜಸ್ವಿ ಯಾದವ್‌ ಇಂದು ಶಪಥ
  •  ಜೆಡಿಯು ಮುಗಿಸಲು ಹುನ್ನಾರ: ನಿತೀಶ್‌
  • ಜನಾದೇಶಕ್ಕೆ ದ್ರೋಹ: ಬಿಜೆಪಿ
  • ಮುಂದೆ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಆಗಲು ಪ್ರಯತ್ನ?

ಪಟನಾ: (ಆ.10) : ರಾಜ್ಯದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ನಿತೀಶ್‌ ನಿರ್ಧಾರಕ್ಕೆ, 2024ರಲ್ಲಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುವ ದೂರಾಲೋಚನೆಯೂ ಒಂದು ಕಾರಣ ಎಂಬ ವಿಶ್ಲೇಷಣೆ ಕೇಳಿಬಂದಿದೆ. 2024ರಲ್ಲಿ ರಾಜ್ಯದಲ್ಲಿ ಸಿಎಂ ಹುದ್ದೆಯನ್ನು ಆರ್‌ಜೆಡಿ ನಾಯಕ ತೇಜಸ್ವಿಗೆ ಬಿಟ್ಟುಕೊಡುವ ವಾಗ್ದಾನಕ್ಕೂ ಇದೇ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಸಖ್ಯ ತೊರೆದು ಮುಖ್ಯಮಂತ್ರಿ ಹುದ್ದೆಗೆ ಮಂಗಳವಾರ ರಾಜೀನಾಮೆ ಸಲ್ಲಿಸಿದ ನಿತೀಶ್‌ ಕುಮಾರ್‌ ಅವರು ತಮ್ಮ ನೂತನ ಮಿತ್ರ, ಲಾಲು ಪ್ರಸಾದ್‌ ಯಾದವ್‌ ಪುತ್ರ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಜೊತೆ ಕೈಬೀಸಿದ್ದು ಹೀಗೆ.

ದೋಸ್ತಿ ಬಿಟ್ಟಿದ್ದೇಕೆ?

  • ಜೆಡಿಯು(JDU)ವನ್ನು ದುರ್ಬಲಗೊಳಿಸಿ ಬಿಜೆಪಿ(BJP) ಶಕ್ತಿವರ್ಧನೆ ಯತ್ನ ನಡೆಸಿದೆ ಎಂಬ ಆತಂಕ
  •  ಜೆಡಿಯು ತ್ಯಜಿಸಿದ ಆರ್‌ಸಿಪಿ ಸಿಂಗ್‌(RCP Singh)ರನ್ನು ಛೂಬಿಡಲು ಬಿಜೆಪಿ ಯತ್ನಿಸುತ್ತಿರುವ ಶಂಕೆ
  •  ನಿತೀಶ್‌ರನ್ನು ಹಿಂದಕ್ಕೆ ಸರಿಸಿ ತನ್ನದೇ ಸಿಎಂ ಮಾಡಲು ಬಿಜೆಪಿ ಮುಂದಾಗಿದ್ದ ಅನುಮಾನ
  •  ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಉದ್ಧವ್‌ ಠಾಕ್ರೆಗಾದ ಪರಿಸ್ಥಿತಿ ತಮಗೂ ಬರುವ ಭೀತಿ
  •  ತಮ್ಮ ಸರ್ಕಾರದಲ್ಲಿ ಅಮಿತ್‌ ಶಾ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ನಿತೀಶ್‌ ಅಸಮಾಧಾನ
  •  ಪಕ್ಷ, ತಮ್ಮ ಸ್ಥಾನದ ಭದ್ರತೆಗಾಗಿ ಬಿಜೆಪಿ ಮೈತ್ರಿ ತೊರೆಯುವುದು ಸೂಕ್ತ ಎಂಬ ನಿಶ್ಚಯ

Tap to resize

Latest Videos

undefined

ನಿತೀಶ್‌ ಉಲ್ಟಾಪಲ್ಟಾ:

  • 1996: ಜನತಾ ದಳದಲ್ಲಿದ್ದಾಗ ಬಿಜೆಪಿ ಜತೆ ನಿತೀಶ್‌ ಸಖ್ಯ. ವಾಜಪೇಯಿ ಸಂಪುಟದಲ್ಲಿ ಸಚಿವ
  • 2005: 2003ರಲ್ಲಿ ಜೆಡಿಯು ಸ್ಥಾಪನೆ. 2005ರಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸಿಎಂ
  • 2013: ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಬಳಿಕ 17 ವರ್ಷದ ಬಿಜೆಪಿ ಮೈತ್ರಿ ಕಟ್‌
  • 2017: ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌ ದೋಸ್ತಿ. ಜೆಡಿಯು ಅಧಿಕಾರಕ್ಕೆ, ಮತ್ತೆ ನಿತೀಶ್‌ ಸಿಎಂ
  • 2019: ಆರ್‌ಜೆಡಿ ಮೈತ್ರಿ ಮುರಿದ ನಿತೀಶ್‌, ಮತ್ತೆ ಬಿಜೆಪಿ ಸ್ನೇಹ ಸಂಪಾದಿಸಿ ಮುಖ್ಯಮಂತ್ರಿ
  • 2022: ಬಿಜೆಪಿ ಜತೆ ನಿತೀಶ್‌ ಮೈತ್ರಿ ಕಡಿತ, ಹಳೆಯ ಸ್ನೇಹಿತ ಆರ್‌ಜೆಡಿ ಜತೆಗೆ ಮತ್ತೆ ಅಧಿಕಾರಕ್ಕೆ

ಬಿಹಾರ ಬಲಾಬಲ ಎಷ್ಟಿದೆ ಗೊತ್ತಾ?:

  • ಒಟ್ಟು ಸ್ಥಾನ 242
  • ಬಹುಮತಕ್ಕೆ 122
  • ಜೆಡಿಯು+ಆರ್‌ಜೆಡಿ+ಕಾಂಗ್ರೆಸ್‌ ಮೈತ್ರಿಕೂಟ 164
  • ಬಿಜೆಪಿ 77
  • ಖಾಲಿ 1

--ಕಳೆದ ಕೆಲವು ದಿನಗಳಿಂದ ಬಿಜೆಪಿ ಬಗ್ಗೆ ಒಳಗೊಳಗೇ ಕುದಿಯುತ್ತಿದ್ದ ಜೆಡಿಯು ನಾಯಕ ನಿತೀಶ್‌ ಕುಮಾರ್‌(Nitish Kumar) ಅವರು ಮಂಗಳವಾರ ಬಿಹಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಿಜೆಪಿ ಜತೆಗಿನ ಸ್ನೇಹ ಮುರಿದುಕೊಂಡು ತಮ್ಮ ಹಳೆಯ ಮಿತ್ರರಾದ ತೇಜಸ್ವಿ ಯಾದವ್‌ ನೇತೃತ್ವದ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಕೈ ಹಿಡಿದಿದ್ದಾರೆ.

ಬಿಜೆಪಿ ಜೆಡಿಯು ಮೈತ್ರಿಯಲ್ಲಿ ಬಿರುಕು? ಮಹತ್ವದ ಸಭೆ ಕರೆದ ಬಿಹಾರ ಸಿಎಂ ನಿತೀಶ್ ಕುಮಾರ್!

ರಾಜೀನಾಮೆ ಸಲ್ಲಿಸಿದ ಬಳಿಕ ತೇಜಸ್ವಿ ಯಾದವ್‌ ಜತೆಗೂಡಿ ರಾಜ್ಯಪಾಲ ಫಗು ಚವಾಣ್‌ ಅವರನ್ನು ಭೇಟಿ ಮಾಡಿದ ನಿತೀಶ್‌, 164 ಶಾಸಕರ ಬೆಂಬಲ ಹೊಂದಿರುವ ಪತ್ರ ಸಲ್ಲಿಸಿ ಹೊಸ ಸರ್ಕಾರ ರಚನೆಗೆ ನಿತೀಶ್‌ ಹಕ್ಕು ಮಂಡಿಸಿದ್ದಾರೆ. ಅದರ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದು, ಬುಧವಾರ ಮಧ್ಯಾಹ್ನ 2 ಗಂಟೆಗೆ ನಿತೀಶ್‌ ಮುಖ್ಯಮಂತ್ರಿಯಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿತೀಶ್‌ಗೆ ಕಾಂಗ್ರೆಸ್‌, ಎಡಪಕ್ಷ ಹಾಗೂ ಇತರ ಕೆಲವು ಸಣ್ಣಪುಟ್ಟಪಕ್ಷಗಳು ಬೆಂಬಲ ಘೋಷಿಸಿವೆ. ಹೊಸ ‘ಮಹಾ ಮೈತ್ರಿಕೂಟ’ ಭಾರಿ ಬಹುಮತ ಹೊಂದಿದ್ದು, 2024ರವರೆಗೆ ಸ್ಥಿರ ಸರ್ಕಾರ ನೀಡುವ ವಿಶ್ವಾಸದಲ್ಲಿದೆ.

ಮೂಲಗಳ ಪ್ರಕಾರ 2024ರವರೆಗೆ ನಿತೀಶ್‌ ಸ್ಥಾನ ಅಬಾಧಿತವಾಗಿರಲಿದೆ. 2024ರ ಚುನಾವಣೆಯಲ್ಲಿ ತೇಜಸ್ವಿ ಯಾದವ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿ, ಸಿಎಂ ಪಟ್ಟವನ್ನು ಅವರಿಗೆ ಬಿಟ್ಟುಕೊಡಲು ನಿತೀಶ್‌ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಜತೆ ನಿತೀಶ್‌ ಮೈತ್ರಿ ಖತಂ:

ಬಿಹಾರದಲ್ಲಿ ನಿತೀಶ್‌ ಅವರು ಬಿಜೆಪಿ ಜತೆ ಮೈತ್ರಿ ಕಡಿದುಕೊಳ್ಳುವ ಸುಳಿವನ್ನು ಸೋಮವಾರವೇ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಮಂಗಳವಾರ ಬೆಳಗ್ಗೆ ಜೆಡಿಯು ಶಾಸಕರು ಹಾಗೂ ಸಂಸದರ ಸಭೆ ನಡೆಸಿದ ನಿತೀಶ್‌, ಮೈತ್ರಿ ಭಂಗದ ಘೋಷಣೆ ಮಾಡಿದರು. ‘ಜೆಡಿಯುವನ್ನು ಬಿಜೆಪಿ ದುರ್ಬಲಗೊಳಿಸಲು ಯತ್ನಿಸುತ್ತಿದೆ. ಮೊದಲು ನನ್ನ ವಿರುದ್ಧ ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ರನ್ನು ಬಿಜೆಪಿ ಎತ್ತಿಕಟ್ಟಿತು. ಇತ್ತೀಚೆಗೆ ನಮ್ಮದೇ ಪಕ್ಷದ ಮಾಜಿ ಆಧ್ಯಕ್ಷ ಆರ್‌ಸಿಪಿ ಸಿಂಗ್‌ರನ್ನು ನನ್ನ ವಿರುದ್ಧ ಛೂ ಬಿಟ್ಟಿತು’ ಎಂದು ಆಕ್ರೋಶ ಹೊರಹಾಕಿದರು ಎಂದು ಮೂಲಗಳು ಹೇಳಿವೆ.

ಪ್ರಧಾನಿ ಮೋದಿಯಿಂದಲೇ ನೀವಿನ್ನೂ ಜೀವಂತವಾಗಿದ್ದಿರಿ: ಬಿಜೆಪಿ ಸಚಿವ

2013ರಲ್ಲಿ ಬಿಜೆಪಿ ಸ್ನೇಹ ತೊರೆದಿದ್ದ ನಿತೀಶ್‌, 2019ರಲ್ಲಿ ಮತ್ತೆ ಬಿಜೆಪಿ ಜತೆ ಕೈಜೋಡಿಸ್ದಿರು. ಈಗ ನಿತೀಶ್‌ ಬಿಜೆಪಿ ಮೈತ್ರಿ ಬಿಡುತ್ತಿರುವುದು 2ನೇ ಸಲ. ಇನ್ನೊಂದೆಡೆ ಆರ್‌ಜೆಡಿ, ಕಾಂಗ್ರೆಸ್‌ ಹಾಗೂ ಎಡರಂಗದ ಮಹಾಗಠಬಂಧನ ಶಾಸಕರು ತೇಜಸ್ವಿ ಯಾದವ್‌ ನೇತೃತ್ವದಲ್ಲಿ ರಾಬ್ಡಿ ದೇವಿ ನಿವಾಸದಲ್ಲಿ ಮಾತುಕತೆ ನಡೆಸಿದರು ಹಾಗೂ ನಿತೀಶ್‌ ಕುಮಾರ್‌ ಅವರ ಸರ್ಕಾರ ಬೆಂಬಲಿಸುವ ನಿರ್ಣಯ ಕೈಗೊಂಡರು.

ನಿತೀಶ್‌-ಬಿಜೆಪಿ ವಾಕ್ಸಮರ:

‘ಜೆಡಿಯುವನ್ನು ಮುಗಿಸಲು ಬಿಜೆಪಿ ಯತ್ನ ನಡೆಸುತ್ತಿದೆ’ ಎಂದು ತಮ್ಮ ಶಾಸಕರ ಮುಂದೆ ನಿತೀಶ್‌ ನೀಡಿದ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ‘ಜನಾದೇಶಕ್ಕೆ ವಿರುದ್ಧವಾಗಿ ನಡೆದುಕೊಂಡ ಬಿಜೆಪಿ ಮತದಾರರಿಗೆ ದ್ರೋಹ ಮಾಡಿದೆ’ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್‌ ಜೈಸ್ವಾಲ್‌ ಹಾಗೂ ಬಿಜೆಪಿ ಮುಖಂಡ ಮಂಗಲ್‌ ಪಾಂಡೆ ಕಿಡಿಕಾರಿದ್ದಾರೆ.

ಅಲ್ಲದೆ, ಲಾಲು ಅವರು ನಿತೀಶ್‌ರನನ್ನು ‘ಹಾವು’ ಎಂದು ಕರೆದಿದ್ದ ಹಾಗೂ ತೇಜಸ್ವಿ ಯಾದವ್‌ ಅವರು ನಿತೀಶ್‌ರನ್ನು ‘ಪಲ್ಟುಲಾಲ್‌’ ‘ಭ್ರಷ್ಟಾಚಾರದ ಭೀಷ್ಮ ಪಿತಾಮಹ’ ಎಂದು ಕರೆದಿದ್ದ ಹಳೆಯ ಟ್ವೀಟ್‌ಗಳನ್ನು ಬಿಡುಗಡೆ ಮಾಡಿರುವ ಬಿಜೆಪಿ, ನಿತೀಶ್‌ ಕಾಲೆಳೆಯುವ ಯತ್ನ ಮಾಡಿದೆ.

click me!