ಮದುವೆಯಾಗಿ ಬರೋಬ್ಬರಿ 54 ವರ್ಷದ ಬಳಿಕ ದಂಪತಿಗಳಿಬ್ಬರು ಮೊದಲ ಬಾರಿಗೆ ತಂದೆ-ತಾಯಿ ಆಗಿದ್ದಾರೆ. ವಿಶೇಷವೆಂದರೆ, ರಾಜಸ್ಥಾನದಲ್ಲಿ ಆಗಿರುವ ಈ ಘಟನೆಯಲ್ಲಿ ತಮದೆ ಗೋಪಿಚಂದ್‌ಗೆ 75 ವರ್ಷವಾಗಿದ್ದರೆ, ತಾಯಿ ಚಂದ್ರವತಿಗೆ 70 ವರ್ಷ. ರಾಜಸ್ಥಾನದಲ್ಲಿ ಇಳಿವಯಸ್ಸಿನಲ್ಲಿ ದಂಪತಿಗಳಿಬ್ಬರಿಗೆ ಮಗುವಾಗಿರುವ ಕೇಸ್ ಇದೇ ಮೊದಲು ಎಂದು ವೈದ್ಯರು ಹೇಳಿದ್ದಾರೆ.
ಜೈಪುರ (ಆ.9): ಸೋಮವಾರ ರಾಜಸ್ಥಾನದ ಅಲ್ವಾರ್‌ನಲ್ಲಿ 70 ವರ್ಷ ಮೇಲ್ಪಟ್ಟ ವೃದ್ಧ ದಂಪತಿಯ ಮನೆಯಲ್ಲಿ ಮಗುವಿನ ಅಳು ಮೊದಲ ಬಾರಿಗೆ ಕೇಳಿಸಿದೆ. ಇಲ್ಲಿ ತಾಯಿಯ ವಯಸ್ಸು 70 ವರ್ಷ ಮತ್ತು ತಂದೆಯ ವಯಸ್ಸು 75 ವರ್ಷ. ಸುಮಾರು 54 ವರ್ಷಗಳ ದಾಂಪತ್ಯದ ನಂತರ, ಈಗ ಇಬ್ಬರೂ ತಮ್ಮ ಮೊದಲ ಮಗುವಿನ ಸಂಭ್ರಮ ಕಂಡಿದ್ದಾರೆ. ಇಳಿವಯಸ್ಸಿನಲ್ಲಿರುವ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿರುವುದು ರಾಜಸ್ಥಾನದಲ್ಲಿ ಆಗಿರುವ ಮೊದಲ ಪ್ರಕರಣ ಎಂದು ವೈದ್ಯರು ಹೇಳಿಕೊಂಡಿದ್ದಾರೆ. ಐವಿಎಫ್ ತಂತ್ರಜ್ಞಾನದಿಂದ ಈ ದಂಪತಿಗಳು ಗಂಡುಮಗುವನ್ನು ಪಡೆದುಕೊಂಡಿದ್ದಾರೆ. ಈ ತಂತ್ರಜ್ಞಾನದಿಂದ ದೇಶ ಮತ್ತು ವಿದೇಶದಲ್ಲಿ 70-80 ವರ್ಷ ವಯಸ್ಸಿನ ದಂಪತಿಗಳು ಮಗುವನ್ನು ಪಡೆದುಕೊಂಡಿದ್ದಾರೆ. ಆದರೆ, ರಾಜಸ್ಥಾನದಲ್ಲಿ ಇಂಥ ಪ್ರಕರಣ ಇದೇ ಮೊದಲು ಎನ್ನಲಾಗಿದೆ. ಜುಂಜುನುವಿನ ನುಹಾನಿಯಾ ಗ್ರಾಮದ ಮಾಜಿ ಸೈನಿಕ ಗೋಪಿಚಂದ್, ಬಾಂಗ್ಲಾದೇಶದ ಯುದ್ಧದಲ್ಲಿ ಭಾಗವಹಿಸಿದ್ದರು. ಆದರೆ ಕಾಲಿಗೆ ಗುಂಡು ಬಿದ್ದ ಕಾರಣ ಸೇವೆಯಿಂದ ನಿವೃತ್ತರಾಗಿದ್ದರು. ಮದುವೆಯಾಗಿದ್ದ ಇವರಿಗೆ ಹಲವು ವರ್ಷ ಕಾದರೂ ಮಕ್ಕಳಾಗಿರಲಿಲ್ಲ. ಈಗ ಚೊಚ್ಚಲ ಮಗುವಿನ ಸಂತಸವನ್ನು ಹೇಗೆ ವ್ಯಕ್ತಪಡಿಸಬೇಕು ಅನ್ನೋದೇ ಅರ್ಥವಾಗುತ್ತಿಲ್ಲ ಎಂದು ಗೋಪಿಚಂದ್ ಹೇಳುತ್ತಾರೆ.
ಮಗನ ಜನ್ಮದೊಂದಿಗೆ ನಾನೂ ಕೂಡ ಎಲ್ಲರಿಗೂ ಸಮಾನನಾಗಿ ಬಿಟ್ಟಿದ್ದೇನೆ ಎಂದು ಗೋಪಿಚಂದ್ ಹೇಳಿಕೊಂಡಿದ್ದಾರೆ. ಅದಲ್ಲದೆ, ನನ್ನ ಕುಲವೂ ಮುಂದೆ ಹೋಗುತ್ತದೆ ಎನ್ನುವ ಮಾತನ್ನೂ ಆಡಿದ್ದಾರೆ. ಇನ್ನೊಂದೆಡೆ 70 ವರ್ಷದ ತಾಯಿ ಚಂದ್ರವತಿಯ ಕಣ್ಣುಗಳಿಂದ ಪದೇ ಪದೇ ಆನಂದ ಭಾಷ್ಪ ಬರುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ. ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್) ತಜ್ಞ ಡಾ.ಪಂಕಜ್ ಗುಪ್ತಾ, 'ದೇಶಾದ್ಯಂತ ಈ ವಯಸ್ಸಿನಲ್ಲಿ ಮಕ್ಕಳು ಜನಿಸುವ ಕೆಲವೇ ಪ್ರಕರಣಗಳಿವೆ. ಇದು ಬಹುಶಃ ರಾಜಸ್ಥಾನದ ಮೊದಲ ಪ್ರಕರಣ. 75 ವರ್ಷದ ಪುರುಷ ಮತ್ತು 70 ವರ್ಷದ ಮಹಿಳೆ ಮಗುವನ್ನು ಪಡೆದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ' ಎಂದಿದ್ದಾರೆ. ಗೋಪಿಚಂದ್ ಅವರು ತಮ್ಮ ತಂದೆ ನೈನು ಸಿಂಗ್ ಅವರಿಗೆ ನಾನು ಒಬ್ಬನೇ ಮಗ ಎಂದು ಹೇಳಿದ್ದು, ತನ್ನ ಮಗನ ತೂಕ ಮೂರೂವರೆ ಕೆಜಿ ಎಂದು ಹೇಳಿದ್ದಾರೆ.
ಬಂಜೆತನದಿಂದ ಬಳಲೋ ಗಂಡ: ಜೊತೆಗೆ ನಿಲ್ಲೋದು ಹೇಗೆ?
ಐವಿಎಫ್ ಮೂಲಕ ಜಯಿಸಿದ ಮಗು: ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಅನ್ನು ಮೊದಲು ಟೆಸ್ಟ್ ಟ್ಯೂಬ್ ಬೇಬಿ ಎಂದು ಕರೆಯಲಾಗುತ್ತಿತ್ತು. ಈ ಚಿಕಿತ್ಸೆಯಲ್ಲಿ, ಮಹಿಳೆಯ ಅಂಡಾಣುವಿನಲ್ಲಿ ಪುರುಷನ ವೀರ್ಯವನ್ನು ಮಿಶ್ರಣ ಮಾಡಲಾಗುತ್ತದೆ. ಭ್ರೂಣವು ರೂಪುಗೊಂಡಾಗ, ಅದನ್ನು ಮಹಿಳೆಯ ಗರ್ಭದಲ್ಲಿ ಇರಿಸಲಾಗುತ್ತದೆ. ಈ ವಿಧಾನವು ಸಾಕಷ್ಟು ಜಟಿಲವಾಗಿದೆ ಮತ್ತು ದುಬಾರಿಯಾಗಿದೆ, ಆದರೆ ಹಲವು ವರ್ಷಗಳಿಂದ ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವವರಿಗೆ ಇದು ವರದಾನವಾಗಿದೆ. ಈ ಪ್ರಕ್ರಿಯೆಯು ಹಲವಾರು ಹಂತಗಳಿರುತ್ತವೆ. ಇದರಲ್ಲಿ ಅಂಡಾಶಯದ ಪ್ರಚೋದನೆ, ಮಹಿಳೆಯ ಅಂಡಾಶಯದಿಂದ ಅಂಡಾಣು ತೆಗೆಯುವುದು, ಪುರುಷನಿಂದ ವೀರ್ಯವನ್ನು ತೆಗೆದುಕೊಳ್ಳುವುದು, ಫಲೀಕರಣ ಮತ್ತು ಭ್ರೂಣವನ್ನು ಮಹಿಳೆಯ ಗರ್ಭದಲ್ಲಿ ಇಡುವುದು ಹೀಗೆ ಹಲವಾರು ಪ್ರಕ್ರಿಯೆ ನಡೆಯುತ್ತವೆ. ಐವಿಎಫ್‌ನ ಒಂದು ಚಕ್ರವು ಎರಡು ಮೂರು ವಾರಗಳನ್ನು ತೆಗೆದುಕೊಳ್ಳಬಹುದು. ಚಂದ್ರಾವತಿ ಅವರಿಗೆ ಸುಮಾರು 9 ತಿಂಗಳ ಹಿಂದೆ ಕಾರ್ಯವಿಧಾನವನ್ನು ಮಾಡಲಾಗಿತ್ತು. ಗರ್ಭಧಾರಣೆಯ ಅವಧಿ ಮುಗಿದ ನಂತರ ಚಂದ್ರಾವತಿಗೆ 2 ಕೆಜಿ 750 ಗ್ರಾಂ ತೂಕದ ಮಗು ಜನಿಸಿತು. ಜಗತ್ತಿನ ಮೊದಲ ಮೊದಲ ಟೆಸ್ಟ್ ಟ್ಯೂಬ್ ಬೇಬಿ 25 ಜುಲೈ 1978 ರಂದು ಇಂಗ್ಲೆಂಡ್‌ನಲ್ಲಿ ಜನಿಸಿತ್ತು.
Fake Doctor ನಕಲಿ ವೈದ್ಯರ ಐವಿಎಫ್ ಚಿಕಿತ್ಸೆಗೆ ಮಹಿಳೆ ಬಲಿ, 4 ಲಕ್ಷ ರೂ ಪಡೆದು ಟ್ರೀಟ್‌ಮೆಂಟ್
ಬದಲಾಗಿಗೆ ಕಾನೂನು: ಇದರ ನಡುವೆ ಕೇಂದ್ರ ಸರ್ಕಾರು ಐವಿಎಫ್ ಮೂಲಕ ಮಗು ಪಡೆಯಬಹುದಾದ ವಿಚಾರದಲ್ಲಿ ಮಹತ್ವವಾದ ಕಾನೂನು ಬದಲಾವಣೆ ಮಾಡಿದೆ. ಈಗ ಸರ್ಕಾರವು ಟೆಸ್ಟ್ ಟ್ಯೂಬ್ ಬೇಬಿಗೆ ಸಂಬಂಧಿಸಿದಂತೆ ART (ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಿಕ್) ಕಾನೂನನ್ನು ಮಾಡಿದೆ. ಈ ಕಾನೂನು ಜೂನ್ 2022 ರಿಂದ ಜಾರಿಗೆ ಬಂದಿದೆ. ಈ ಕಾನೂನಿನ ಅಡಿಯಲ್ಲಿ, 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಟೆಸ್ಟ್ ಟ್ಯೂಬ್ ತಂತ್ರಜ್ಞಾನದ ಮೂಲಕ ತಾಯಿಯಾಗುವಂತಿಲ್ಲ. ಅಂದರೆ ಟೆಸ್ಟ್ ಟ್ಯೂಬ್ ಬೇಬಿ ಹೊಂದಲು ಮಹಿಳೆಯ ವಯಸ್ಸು 50 ವರ್ಷಕ್ಕಿಂತ ಕಡಿಮೆ ಇರಬೇಕು, ಆದರೆ ಈ ಪ್ರಕರಣವು ಕಾನೂನಿನ ಬರುವುದಕ್ಕಿಂತ ಮುಂಚೆಯೇ ನಡೆದ ಪ್ರಕರಣ. ಹಾಗಾಗಿ ಈ ದಂಪತಿಗೆ 70ನೇ ವಯಸ್ಸಿನಲ್ಲಿ ಮಗುವಾಗಿದೆ.