ಮೇಡ್-ಇನ್-ಇಂಡಿಯಾ ಮಾರ್ಗದ ಮೂಲಕ ಭಾರತೀಯ ಸೇನೆಯು 120 ಲೋಯಿಟರ್ ಯುದ್ಧಸಾಮಗ್ರಿಗಳೊಂದಿಗೆ ಕನಿಷ್ಠ 10 ಸೆಟ್ ವೈಮಾನಿಕ ಗುರಿ ವ್ಯವಸ್ಥೆಗಳನ್ನು ಖರೀದಿಸುವ ನಿಟ್ಟಿನಲ್ಲಿ ಮುಂದಾಗಿದೆ.
ನವದೆಹಲಿ (ನ.4): ಡ್ರೋನ್ ಗೇಮ್‌ನಲ್ಲಿ ಸುಧಾರಣೆ ಕಾಣುವ ನಿಟ್ಟಿನಲ್ಲಿ ಭಾರತೀಯ ಸೇನೆ ಮುಂದಾಗಿದೆ. ಮೊದಲ ಹಂತವಾಗಿ ಭಾರತದ ಸೇನೆ, ಸೂಸೈಡ್ ಡ್ರೋನ್ ಎಂದೇ ಹೆಸರಾಗಿರುವ ಕಾಮಿಕೇಜ್ ಡ್ರೋನ್‌ನ 10 ಸೆಟ್ ಖರೀದಿ ಮಾಡಲು ಸಜ್ಜಾಗಿದೆ. 10 ಸೂಸೈಡ್ ಡ್ರೋನ್‌ಗಳೊಂದಿಗೆ 120 ಲೊಯಿಟರ್ ಯುದ್ಧಸಾಮಗ್ರಿಯನ್ನು ಮೇಡ್ ಇನ್ ಇಂಡಿಯಾ ಮಾರ್ಗದ ಮೂಲಕ ಖರೀದಿಸಲಿದೆ. ಇದೇ ಕಾಮಿಕೇಜ್ ಡ್ರೋನ್‌ಗಳನ್ನು ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ವೇಳೆ ವ್ಯಾಪಕವಾಗಿ ಬಳಸಲಾಗುತ್ತಿದೆ. ಫಾಸ್ಟ್ ಟ್ರ್ಯಾಕ್ ಖರೀದಿ ಮಾಡಲಾಗುತ್ತಿದ್ದು, ಚೀನಾ ಹಾಗೂ ಪಾಕಿಸ್ತಾನದ ಗಡಿಯ ಶಿಖರ ಪ್ರದೇಶಗಳಲ್ಲಿ ಹಾಗೂ ಮರುಭೂಮಿಗಳ ಪ್ರದೇಶದಲ್ಲಿ ನಿಯೋಜನೆ ಮಾಡಲಾಗುತ್ತದೆ. ರಿಕ್ವೆಸ್ಟ್ ಫಾರ್ ಪ್ರಪೋಸಲ್ (ಆರ್‌ಎಫ್‌ಪಿ) ಪ್ರಕಾರ, ವೈಮಾನಿಕ ಗುರಿ ವ್ಯವಸ್ಥೆಗಳು ಕನಿಷ್ಠ 100 ಕಿಲೋಮೀಟರ್ ವ್ಯಾಪ್ತಿ ಹೊಂದಿರಬೇಕು ಮತ್ತು ಉಡಾವಣಾ ಎತ್ತ 4 ಸಾವಿರ ಮೀಟರ್ ಅಥವಾ ಅದಕ್ಕಿಂತ ಎತ್ತರದಲ್ಲಿರಬೇಕು.ಸಿಡಿತಲೆಯ ತೂಕವು ಕನಿಷ್ಠ 8 ಕೆಜಿ ಅಥವಾ ಅದಕ್ಕಿಂತ ಹೆಚ್ಚು ಮತ್ತು ಎರಡು ಗಂಟೆಗಳವರೆಗೆ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿರಬೇಕು ಎಂದು ನಿರ್ದಿಷ್ಟಪಡಿಸಲಾಗಿದೆ.
ಭಾರತೀಯ ವಾಯುಪಡೆಯು ಒಂದು ದಶಕಕ್ಕೂ ಹೆಚ್ಚು ಕಾಲ ದೊಡ್ಡದಾದ ಹರೋಪ್ ಲೊಟರಿಂಗ್ ಯುದ್ಧಸಾಮಗ್ರಿಗಳನ್ನು ನಿರ್ವಹಿಸುತ್ತಿದ್ದರೆ, ಸೇನೆಯು ಈಗ ಕಾಮಿಕೇಜ್ ಡ್ರೋನ್‌ಗಳ ಖರೀದಿಯತ್ತ ಸಾಗುತ್ತಿದೆ. ಈ ಡ್ರೋನ್‌ಗಳು ಉದ್ದೇಶಿತ ಗುರಿಯತ್ತ ದಾಳಿ ಮಾಡುವ ಮುನ್ನ ಗಂಟೆಗಳ ಕಾಲ ಆ ಪ್ರದೇಶದ ಕಡೆ ಅಡ್ಡಾಡುವ ಸಾಮರ್ಥ್ಯವನ್ನು ಹೊಂದಿದೆ.ಇತ್ತೀಚಿನ ತಿಂಗಳುಗಳಲ್ಲಿ ಭಾರತದಲ್ಲಿ ಸಶಸ್ತ್ರ ಪಡೆಗಳಿಗೆ ಡ್ರೋನ್‌ಗಳು ಅಥವಾ ಮಾನವರಹಿತ ವೈಮಾನಿಕ ವಾಹನಗಳು (UAV) ಹೆಚ್ಚು ಆಯ್ಕೆಯ ಅಸ್ತ್ರವಾಗುತ್ತಿರುವ ನಂತರ ಈ ಬೆಳವಣಿಗೆ ಕಂಡುಬಂದಿದೆ.
ಕಾಮಿಕೇಜ್ ಡ್ರೋನ್‌ಗಳು ಸಾಮರ್ಥ್ಯಕ್ಕೆ ಸಾಟಿಯೇ ಇಲ್ಲ: ಕಾಮಿಕೇಜ್ ಡ್ರೋನ್ ವೈಮಾನಿಕ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದ್ದು (Aerial Targeting Defence System), ಇದರಲ್ಲಿರುವ ಯುದ್ಧಸಾಮಗ್ರಿ (loitering munitions) ವಾಯುಮಾರ್ಗದಲ್ಲಿಯೇ ನಿರ್ದಿಷ್ಟವಾಗಿ ಗುರಿಗಾಗಿ ಕಾದು, ಲಾಕ್ ಮಾಡಿದ ಬಳಿಕ ದಾಳಿ ಮಾಡುತ್ತದೆ. ಈ ಯುದ್ಧಸಾಮಗ್ರಿಗಳು ಹೆಚ್ಚು ಆಯ್ದ ಗುರಿಯನ್ನು ಅನುಮತಿಸುತ್ತವೆ. 2ನೇ ಮಹಾಯುದ್ಧದ ಸಮಯದಲ್ಲಿ ಜಪಾನ್‌ನ ಕಾಮಿಕೇಜ್ ಪೈಲಟ್‌ಗಳಿಂದ ತನ್ನ ಹೆಸರು ಪಡೆದುಕೊಂಡಿದೆ. ಸ್ಫೋಟಕ ತುಂಬಿದ ಯುದ್ಧವಿಮಾನಗಳನ್ನು ಎದುರಾಳಿಯ ಟಾರ್ಗೆಟ್‌ನಲ್ಲಿ ಆತ್ಮಹತ್ಯಾ ದಾಳಿಯಾಗಿ ಸ್ಪೋಟಿಸುವ ಮೂಲಕ ಕಾಮಿಕೇಜ್ ಪೈಲಟ್‌ಗಳು ಹೆಸರುವಾಸಿಯಾಗಿದ್ದರು. ರಷ್ಯಾ ತನ್ನ ಮೇಲೆ ಕಾಮಿಕೇಜ್ ಡ್ರೋನ್‌ಗಳಿಂದ ದಾಳಿ ಮಾಡಿದೆ ಎನ್ನುವುದನ್ನು ಇತ್ತೀಚೆಗೆ ಉಕ್ರೇನ್ ಅಧ್ಯಕ್ಷ ಕೂಡ ಹೇಳಿದ್ದರು.
ಹೊಸ ಸೇನಾ ಸಮವಸ್ತ್ರಕ್ಕೆ ಪೇಟೆಂಟ್ ಮಾಡಿಸಿದ ಭಾರತೀಯ ಸೇನೆ
ಲೋಯಿಟರ್ ಯುದ್ಧ ಸಾಮಗ್ರಿ ಎಂದರೇನು?: ಲೋಟರಿಂಗ್ ಯುದ್ಧಸಾಮಗ್ರಿಯು ಶಸ್ತ್ರಾಸ್ತ್ರ ವ್ಯವಸ್ಥೆಗಳ ಒಂದು ವರ್ಗ. ಇದು ಮಾನವರಹಿತವಾಗಿದೆ ಮತ್ತು ಸ್ಫೋಟಕ ಸಿಡಿತಲೆಯೊಂದಿಗೆ ಲೈನ್-ಆಫ್-ಸೈಟ್ ನೆಲದ ಗುರಿಗಳನ್ನು ಮೀರಿ ಯುದ್ಧ ಮಾಡಲು ವಿನ್ಯಾಸಗೊಳಿಸಲಾಗಿದೆ. ಅವು ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಕ್ಷಿಪಣಿ ಮತ್ತು ಡ್ರೋನ್‌ನ ಮಿಶ್ರಣವಾದ ಯುದ್ಧ ಶಸ್ತ್ರಾಸ್ತ್ರವಾಗಿದೆ. ಕ್ಷಿಪಣಿಗಿಂತ ಇದು ಭಿನ್ನವಾಗಿರುವ ಕಾರಣ, ಡ್ರೋನ್‌ನಂತೆಯೇ ಲೊಯ್ಟರ್ ಯುದ್ಧಸಾಮಗ್ರಿಗಳನ್ನು ಉಡಾವಣೆ ಮಾಡಬಹುದು. ಹೆಚ್ಚು ಸಮಯದವರೆಗೆ ಗಾಳಿಯಲ್ಲಿ ತಿರುಗಾಡುವ ಸಾಮರ್ಥ್ಯ ಇದರಲ್ಲಿದ್ದು, ಗುರಿಮಾಡಿದ ಟಾರ್ಗೆಟ್‌ಅನ್ನು ನಿಖರವಾಗಿ ಸಮೀಕ್ಷೆ ಮಾಡಿ, ಎಲ್ಲಿ ದಾಳಿ ಮಾಡಿದರೆ ಸೂಕ್ತ ಎನ್ನುವ ಅಂದಾಜನ್ನೂ ಈ ಡ್ರೋನ್‌ನಿಂದ ಮಾಡಬಹುದು.
ಮೇಕ್ ಇನ್ ಇಂಡಿಯಾ: ಗುಜರಾತ್‌ನಲ್ಲಿ ಬೃಹತ್ ಸೇನಾ ವಿಮಾನ ಘಟಕ
ಗುರಿಯನ್ನು ಗುರುತಿಸಿ ಲಾಕ್ ಮಾಡಿದ ಬಳಿಕ, ಈ ಡ್ರೋನ್ ಕ್ಷಿಪಣಿಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಯುದ್ಧ ಹಾಗೂ ಶಸ್ತ್ರಾಸ್ತ್ರ ಡ್ರೋನ್‌ಗಳಿಗೆ ಹೋಲಿಸಿದ್ದಲ್ಲಿ, ಲೊಯಿಟರ್ ಯುದ್ಧ ಸಾಮಗ್ರಿಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಕಡಿಮೆ ಸಂಕೀರ್ಣ ವ್ಯವಸ್ಥೆಯನ್ನು ಹೊಂದಿದೆ.