Air Pollution: ಗ್ಯಾಸ್‌ ಚೇಂಬರ್‌ ಆದ ದೆಹಲಿ, ಗುಜರಾತ್‌ ಎಲೆಕ್ಷನ್‌ನಲ್ಲಿ ಕೇಜ್ರಿವಾಲ್‌ ಬ್ಯುಸಿ!

By Santosh NaikFirst Published Nov 4, 2022, 11:11 AM IST
Highlights

ಶುಕ್ರವಾರ ದೆಹಲಿಯ ಗಾಳಿಯ ಗುಣಮಟ್ಟ 450 ರಿಂದ 500 ಅಂಕದ ಗಡಿ ತಲುಪುವ ಸಾಧ್ಯತೆ ಇದೆ. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಗುಜರಾತ್‌ ಚುನಾವಣೆಗೆ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವ ರಾಜ್ಯಗಳಲ್ಲಿ ಮಾಡುವ ಸಮಾವೇಶದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
 

ನವದೆಹಲಿ (ನ. 4): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಎಕ್ಯೂಐ (ಏರ್‌ ಕ್ವಾಲಿಟಿ ಇಂಡೆಕ್ಸ್‌) ಗುರುವಾರ ಸಂಜೆಯ ವೇಳೆಗೆ 400ಕ್ಕಿಂತ ಹೆಚ್ಚಿತ್ತು. ಇಂದು ದೆಹಲಿಯ ಎಕ್ಯೂಐ 450 ಆಗುವ ನಿರೀಕ್ಷೆ ಇದ್ದು, ನೋಯ್ಡಾದಲ್ಲಿ ಇದರ ಪ್ರಮಾಣ 500 ಕೂಡ ದಾಟಬಹುದು ಎನ್ನಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ ಕಾರಣ ನೊಯ್ಡಾದಲ್ಲಿ 8ನೇ ತರಗತಿಯವರೆಗೆ  ಆನ್‌ಲೈನ್‌ ತರಗತಿಗಳನ್ನು ನಡೆಸಲು ಸೂಚನೆಯನ್ನು ನೀಡಲಾಗಿದೆ. 9ರಿಂದ 12ರವರೆಗೆ ಆನ್‌ಲೈನ್‌ನಲ್ಲಿ ತರಗತಿ ನಡೆಸಲು ಆದೇಶವೂ ಪ್ರಕಟವಾಗಬಹುದು ಎನ್ನಲಾಗಿದೆ. ದೆಹಲಿಯ ಪರಿಸ್ಥಿತಿ ಗ್ಯಾಸ್‌ ಚೇಂಬರ್‌ನಂತಾಗಿದ್ದರೂ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತೆ ರಾಜಕೀಯ ಚರ್ಚೆಗಳಲ್ಲಿ ತೊಡಗಿಕೊಂಡಿದ್ದಾರೆ.  ದೆಹಲಿಯು ಜನಜೀವನಕ್ಕೆ ಅಪಾಯಕಾರಿಯಾಗುವಂಥ ಮಾಲಿನ್ಯವನ್ನು ಎದುರಿಸುತ್ತಿರುವಾಗ, ಸಿಎಂ ಅರವಿಂದ್‌ ಕೇಜ್ರಿವಾಲ್‌ ಚುನಾವಣೆಗೆ ಒಳಪಡಲಿರುವ ರಾಜ್ಯಗಳನ್ನು ಉದ್ದೇಶಿಸಿ ಮಾತನಾಡಲು ಉತ್ಸುಕರಾಗಿದ್ದಾರೆ. ದೆಹಲಿಯ ಪರಿಸ್ಥಿತಿ ಶೋಚನೀಯವಾಗಿರುವ ನಡುವೆ ಅರವಿಂದ್ ಕೇಜ್ರಿವಾಲ್‌ ಇಂದು ಮಧ್ಯಾಹ್ನ ಗುಜರಾತ್‌ ವಿಧಾನಸಭೆಗೆ ಪಕ್ಷದ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ.

ಒಂದೆಡೆ, ದೆಹಲಿ-ಎನ್‌ಸಿಆರ್‌ನಲ್ಲಿ (New Delhi NCR) ಡೀಸೆಲ್‌ ಕಾರುಗಳು,  ಟ್ರಕ್‌ಗಳ ಪ್ರವೇಶವನ್ನು ನಿಷೇಧಿಸಲು ಸೆಂಟ್ರಲ್ ಪ್ಯಾನಲ್ ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಕಮಿಷನ್ ಸೂಚನೆಗಳನ್ನು ನೀಡಿದೆ. ತುರ್ತು ಸೇವೆಗಳಲ್ಲಿ ತೊಡಗಿರುವ ವಾಹನಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ವಾಣಿಜ್ಯ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಆಸ್ಪತ್ರೆಗಳ ಒಪಿಡಿಗಳಲ್ಲಿ ಉಸಿರಾಟದ ರೋಗಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೊದಲು ಪ್ರತಿದಿನ 20-25 ಉಸಿರಾಟದ ರೋಗಿಗಳು ಒಪಿಡಿಗೆ ಬರುತ್ತಿದ್ದರು, ಈಗ ಈ ಸಂಖ್ಯೆ 70-75 ಕ್ಕೆ ಏರಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಶಾಲೆಗಳನ್ನು ಮುಚ್ಚುವಂತೆ ದೆಹಲಿ ಸರ್ಕಾರವನ್ನು ಒತ್ತಾಯಿಸಿದೆ.

ಮಾಲಿನ್ಯ ಏರಿಕೆಗೆ ಕಾರಣವೇನು?: ಪ್ರಮುಖವಾಗಿ ಗಾಳಿಯಲ್ಲಿ ಆರ್ದ್ರತೆ ಹೆಚ್ಚಾದಂತೆ ಅದರ ವೇಗ ಕಡಿಮೆಯಾಗಲಿದ್ದು, ಧೂಳಿನ ಕಣಗಳು ಹೆಚ್ಚಾಗುತ್ತವೆ. ಮಂಜು ಮತ್ತು ಮಬ್ಬು, ತೇವಾಂಶದ ಕಾರಣ ಮಾಲಿನ್ಯದ ಕಣಗಳು ಏರಲು ಸಾಧ್ಯವಾಗುವುದಿಲ್ಲ ಹಾಗೂ ಹರ್ಯಾಣ, ಪಂಜಾಬ್‌ನಲ್ಲಿ ಹೊಲಗಳಲ್ಲಿ ಹುಲ್ಲು ಸುಡುವ ಘಟನೆಗಳು ಹಠಾತ್ ಹೆಚ್ಚಳವಾಗಿದೆ. ಇನ್ನೊಂದೆಡೆ ನಿಷೇಧದ ನಡುವೆಯೂ ಈ ಬಾರಿ ದೀಪಾವಳಿಯಲ್ಲಿ ಹೆಚ್ಚು ಪಟಾಕಿಗಳನ್ನು ಸುಡಲಾಗಿದೆ ಎನ್ನುವ ಮಾಹಿತಿ ಕೂಡ ಬಂದಿದೆ.

ಗುಜರಾತ್‌ ಚುನಾವಣೆಗೆ ಇಂದು ಆಪ್‌ ಸಿಎಂ ಅಭ್ಯರ್ಥಿ ಘೋಷಣೆ

ಹುಲ್ಲು ಸುಟ್ಟಿದ್ದೇ ಮಾಲಿನ್ಯಕ್ಕೆ ಕಾರಣ: ಸ್ಥಳೀಯ ವಲಯದ ಸಮೀಕ್ಷೆಯ ಪ್ರಕಾರ, ದೆಹಲಿ-ಎನ್‌ಸಿಆರ್‌ನ 53% ರಷ್ಟು ಜನರು, ವಾಯು ಮಾಲಿನ್ಯ (Air Pollution) ಹೆಚ್ಚಾಗಲು ಪಂಜಾಬ್‌ ಭಾಗದಲ್ಲಿ ಹುಲ್ಲುಗಳನ್ನು ಸುಟ್ಟಿರುವುದೇ ಕಾರಣ ಎಂದಿದ್ದಾರೆ. 20 ಸಾವಿರ ಜನರಿಂದ ಈ ಕುರಿತಾಗಿ ಸಮೀಕ್ಷೆ ಮಾಡಲಾಗಿದ್ದು, ಇದರಲ್ಲಿ ಕೇವಲ ಶೇ. 13ರಷ್ಟು ಮಂದಿ ಮಾತ್ರವೇ ವಾಹನಗಳು ಮಾಲಿನ್ಯಕ್ಕೆ ಕಾರಣವೆಂದು ಹೇಳಿದ್ದಾರೆ. ಇನ್ನೊಂದಡೆ ಶೆ. 56ರಷ್ಟು ಜನರು ದೆಹಲಿಯಲ್ಲಿ ಆಡ್‌-ಇವನ್‌ ಪದ್ಧತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Gujarat Election 2022 Asianet Survey: ಮತ್ತೆ ಅರಳಲಿದೆ ಕಮಲ, ಕುಗ್ಗಿದೆ ಕೈ ಬಲ, ಆಪ್‌ಗಿಲ್ಲ ಬೆಂಬಲ

ಗರ್ಭಪಾತಕ್ಕೆ ಕಾರಣವಾಗುತ್ತದೆ ಮಾಲಿನ್ಯ: ಕಲುಷಿತ ಗಾಳಿಯು ಉಸಿರಾಟದ ಕಾಯಿಲೆಗಳು ಮಾತ್ರವಲ್ಲದೆ ಹೃದಯ ಮತ್ತು ಮೆದುಳಿನ ಪಾರ್ಶ್ವವಾಯು ಮತ್ತು ಗರ್ಭಪಾತದ ಅಪಾಯವನ್ನು ಹೆಚ್ಚಿಸಿದೆ. ಎಐಐಎಂಎಸ್ ದೆಹಲಿಯ ಮಾಜಿ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ, ದಿ ಲ್ಯಾನ್ಸೆಟ್‌ನ ಅಧ್ಯಯನವು ವಾಯುಮಾಲಿನ್ಯವು ಅತ್ಯಂತ ಕಳಪೆ ವರ್ಗದಲ್ಲಿರುವುದರಿಂದ, ಗರ್ಭಿಣಿಯರು ಈ ಗಾಳಿಯನ್ನು ಉಸಿರಾಡಿದರೆ ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತೋರಿಸಿದೆ.ಇದು ಭ್ರೂಣದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ, ಜೊತೆಗೆ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ.

click me!