
ಇಂದಿನ ಕಾಲದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೂರು ರೂಪಾಯಿಯ ಗಡಿ ದಾಟಿ ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಲೀಟರ್‌ಗೆ ಒಂದು ರೂಪಾಯಿ ಹೆಚ್ಚಾದರೂ ನಾವು ಬಜೆಟ್ ಲೆಕ್ಕಾಚಾರ ಮಾಡುತ್ತೇವೆ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ನೀವು ನಂಬಲಸಾಧ್ಯವಾದ ಒಂದು ಸತ್ಯಾಂಶ ಹೊರಬರುತ್ತದೆ. ಅದೇನೆಂದರೆ, ಅಂದು ಕೇವಲ 3 ರೂಪಾಯಿ ಜೇಬಿನಲ್ಲಿದ್ದರೆ ಸಾಕಿತ್ತು, ನೀವು ಬೆಂಗಳೂರಿನಿಂದ ಮುಂಬೈಗೆ ಕಾರ್‌ನಲ್ಲಿ ಹೋಗಿ ಬರಬಹುದಿತ್ತು!
ಬೆಂಗಳೂರಿನಿಂದ ಮುಂಬೈ ನಗರಕ್ಕೆ ಇರುವ ದೂರ ಸುಮಾರು 950 ಕಿಲೋಮೀಟರ್‌ಗಳು. ಇಂದಿನ ಸಾಮಾನ್ಯ ಕಾರುಗಳು ಸರಾಸರಿ ಒಂದು ಲೀಟರ್‌ಗೆ 20 ಕಿ.ಮೀ ಮೈಲೇಜ್ ನೀಡುತ್ತವೆ ಎಂದು ಅಂದುಕೊಳ್ಳೋಣ. ಹಾಗಾದರೆ, ಬೆಂಗಳೂರಿನಿಂದ ಮುಂಬೈ ತಲುಪಲು ಸುಮಾರು 48 ಲೀಟರ್ ಪೆಟ್ರೋಲ್ ಅಗತ್ಯವಿರುತ್ತದೆ. ಇಂದಿನ 108 ರೂಪಾಯಿ ದರದಲ್ಲಿ ಈ ಪ್ರಯಾಣಕ್ಕೆ ಸುಮಾರು 5,184 ರೂಪಾಯಿ ವೆಚ್ಚವಾಗುತ್ತದೆ. ಆದರೆ, 1928ರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 6 ಪೈಸೆ ಇತ್ತು! ಆ ದರದಂತೆ ಲೆಕ್ಕ ಹಾಕಿದರೆ, 48 ಲೀಟರ್ ಪೆಟ್ರೋಲ್‌ಗೆ ತಗಲುವ ವೆಚ್ಚ ಕೇವಲ 2.88 ರೂಪಾಯಿಗಳು, ಅಂದರೆ ಅಂದಾಜು 3 ರೂಪಾಯಿ! ಇಂದು ಒಂದು ಕಿಚಡಿ ಪ್ಯಾಕೆಟ್ ಕೂಡ ಸಿಗದ ಆ ಹಣದಲ್ಲಿ ಅಂದು ಮಹಾನಗರಗಳ ನಡುವೆ ಸುದೀರ್ಘ ಪ್ರಯಾಣ ಮಾಡಬಹುದಿತ್ತು.
ಭಾರತದಲ್ಲಿ ಮೊಟ್ಟ ಮೊದಲ ಪೆಟ್ರೋಲ್ ಬಂಕ್ ಆರಂಭವಾಗಿದ್ದು 1928ರಲ್ಲಿ. ಅಂದಿನ ಬಾಂಬೆ (ಈಗಿನ ಮುಂಬೈ) ನಗರದ ಹ್ಯೂಸ್ ರಸ್ತೆಯಲ್ಲಿ (ಈಗಿನ ಅನ್ನಿ ಬೆಸೆಂಟ್ ರಸ್ತೆ) ಈ ಐತಿಹಾಸಿಕ ಪೆಟ್ರೋಲ್ ಕೇಂದ್ರವನ್ನು ತೆರೆಯಲಾಗಿತ್ತು. 'ಬರ್ಮಾ ಶೆಲ್' ಕಂಪನಿಯು ಈ ಬಂಕ್ ಸ್ಥಾಪಿಸಿತ್ತು. ಆ ಕಾಲದಲ್ಲಿ 1 ರೂಪಾಯಿ ನೀಡಿದರೆ ಬರೋಬ್ಬರಿ 16 ಲೀಟರ್ ಪೆಟ್ರೋಲ್ ಸಿಗುತ್ತಿತ್ತು. ಆಗಿನ ವಾಹನಗಳು ಬಹುತೇಕ ಪೆಟ್ರೋಲ್ ಇಂಜಿನ್ ಆಧಾರಿತವಾಗಿದ್ದವು.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಪೆಟ್ರೋಲ್ ಉತ್ಪಾದನೆಯಾಗುತ್ತಿರಲಿಲ್ಲ. ಇಂಧನವನ್ನು ಬರ್ಮಾ, ಇರಾನ್ ಮತ್ತು ಪಶ್ಚಿಮ ಏಷ್ಯಾದ ದೇಶಗಳಿಂದ ಹಡಗುಗಳ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಂದರುಗಳಿಗೆ ಬಂದ ತೈಲವನ್ನು ಕಬ್ಬಿಣದ ಡ್ರಮ್‌ಗಳಲ್ಲಿ ತುಂಬಿಸಿ, ಎತ್ತಿನ ಬಂಡಿ ಅಥವಾ ಟ್ರಕ್‌ಗಳ ಮೂಲಕ ಬಂಕ್‌ಗಳಿಗೆ ತಲುಪಿಸಲಾಗುತ್ತಿತ್ತು. ಇಂದಿನಂತೆ ಆಟೋಮ್ಯಾಟಿಕ್ ಯಂತ್ರಗಳಿರಲಿಲ್ಲ, ಕೈಯಿಂದ ಪಂಪ್ ಮಾಡಿ ವಾಹನಗಳಿಗೆ ಇಂಧನ ತುಂಬಿಸುವ ಸಾಹಸ ಮಾಡಬೇಕಿತ್ತು.
3 ರೂಪಾಯಿಗೆ ಮುಂಬೈಗೆ ಹೋಗಬಹುದಿತ್ತು ಎಂದು ಇಂದು ನಮಗೆ ಖುಷಿ ನೀಡಬಹುದು. ಆದರೆ, 1928ರ ಕಾಲಘಟ್ಟದಲ್ಲಿ ಸಾಮಾನ್ಯ ಜನರ ಸರಾಸರಿ ದೈನಂದಿನ ಆದಾಯವೇ ಒಂದು ರೂಪಾಯಿಗಿಂತ ಕಡಿಮೆ ಇತ್ತು. ಹಾಗಾಗಿ, ಅಂದಿನ ಕಾಲದ ಜನರಿಗೆ ಆ 6 ಪೈಸೆ ಕೂಡ ದೊಡ್ಡ ಮೊತ್ತವಾಗಿಯೇ ಕಾಣುತ್ತಿತ್ತು. ವಾಹನಗಳ ಸಂಖ್ಯೆಯೂ ಬೆರಳೆಣಿಕೆಯಷ್ಟು ಇದ್ದಿದ್ದರಿಂದ ಪೆಟ್ರೋಲ್ ಬಳಕೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು.
ಸುಮಾರು ಐದು ದಶಕಗಳ ಕಾಲ ಭಾರತದಲ್ಲಿ ಸೇವೆ ಸಲ್ಲಿಸಿದ 'ಬರ್ಮಾ ಶೆಲ್' ಕಂಪನಿಯನ್ನು 1976 ರಲ್ಲಿ ಭಾರತ ಸರ್ಕಾರವು ರಾಷ್ಟ್ರೀಕೀಕರಣಗೊಳಿಸಿತು. ಆನಂತರವೇ ಅದು 'ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್' (BPCL) ಎಂದು ನಾಮಕರಣಗೊಂಡಿತು. ಮುಂಬೈನ ಹ್ಯೂಸ್ ರಸ್ತೆಯಲ್ಲಿ ಅಂದು ಸಣ್ಣದಾಗಿ ಆರಂಭವಾದ ಆ ಪಯಣ ಇಂದು ದೇಶದ ಮೂಲೆ ಮೂಲೆಗೂ ವ್ಯಾಪಿಸಿದೆ.
ಕಾಲ ಬದಲಾದಂತೆ ಪೆಟ್ರೋಲ್ ಬೆಲೆ 6 ಪೈಸೆಯಿಂದ 108 ರೂಪಾಯಿಗೆ ಏರಿದೆ. ಅಂದು 3 ರೂಪಾಯಿಯಲ್ಲಿ ಮುಂಬೈ ತಲುಪುತ್ತಿದ್ದ ನಮಗೆ ಇಂದು ಅದೇ ಹಣಕ್ಕೆ ಪೆಟ್ರೋಲ್ ಪಂಪ್‌ನ ನಳಿಕೆಯಿಂದ ಪೆಟ್ರೋಲ್ ಹೊರಬರುವುದನ್ನೂ ನೋಡಲು ಸಾಧ್ಯವಿಲ್ಲ ಎನ್ನುವುದು ವಿಪರ್ಯಾಸವೇ ಸರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ