
- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಇತ್ತೀಚಿನ ಪ್ರಮುಖ ಬೆಳವಣಿಗೆಗಳಲ್ಲಿ, ಅರ್ಜೆಂಟೀನಾ ಮತ್ತು ಮಲೇಷ್ಯಾಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿರುವ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ತೇಜಸ್ ಎಂಕೆ 1ಎ ಖರೀದಿಗೆ ಉತ್ಸಾಹ ತೋರಿಸಿವೆ. ಎರಡೂ ರಾಷ್ಟ್ರಗಳ ಚೀಫ್ ಆಫ್ ಡಿಫೆನ್ಸ್ ಸ್ಟಾಫ್‌ಗಳು ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಈ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಎಚ್ಎಎಲ್ ಎಲ್‌ಸಿಎ ತೇಜಸ್ ಎಂಕೆ 1ಎ ಭಾರತೀಯ ವಾಯುಪಡೆಗೆ 2021ರಲ್ಲಿ ಸೇರ್ಪಡೆಗೊಂಡಿತು. ಈ ಯುದ್ಧ ವಿಮಾನವನ್ನು ಹಲವು ಉದ್ದೇಶಗಳನ್ನು ಪೂರೈಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಅತ್ಯಾಧುನಿಕ ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ಗಳು, ಮಲ್ಟಿ ಮೋಡ್ ರೇಡಾರ್‌ಗಳು, ಬಿಯಾಂಡ್ ವಿಶುವಲ್ ರೇಂಜ್ ಏರ್ ಟು ಏರ್ ಕ್ಷಿಪಣಿಗಳನ್ನು ಹೊಂದಿದೆ. ಮೂಲಗಳ ಪ್ರಕಾರ, ಅರ್ಜೆಂಟೀನಾ 15 ಯುದ್ಧ ವಿಮಾನಗಳು ಮತ್ತು ಮೂರು ತರಬೇತಿ ವಿಮಾನಗಳನ್ನು ಒಳಗೊಂಡ ಒಂದು ಸ್ಕ್ವಾಡ್ರನ್ ಗಾಗಿ ಬೇಡಿಕೆ ಸಲ್ಲಿಸುವ ಸಾಧ್ಯತೆಗಳಿವೆ. ಇದು ಎಲ್‌ಸಿಎ ತೇಜಸ್ ಎಂಕೆ 1ಎ ವಿಚಾರದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದೆ. ಇದು ವಿಮಾನದ ಅಂತಾರಾಷ್ಟ್ರೀಯ ಗುರುತಿಸುವಿಕೆಗೆ ಇನ್ನಷ್ಟು ಉತ್ತೇಜನ ನೀಡಲಿದೆ.
ಏರೋ ಇಂಡಿಯಾಗ 2023ಗೆ ಚಾಲನ ನೀಡಿದ ಮೋದಿ
ಇನ್ನೊಂದೆಡೆ ಮಲೇಷ್ಯಾ ಈಗಾಗಲೇ ಹಳೆಯದಾಗುತ್ತಿರುವ ತನ್ನ ಯುದ್ಧ ವಿಮಾನಗಳ (War Flights) ಪಡೆಯ ಬದಲಿಗೆ, ಬೇರೆ ವಿಮಾನಗಳನ್ನು ಹುಡುಕುತ್ತಿದ್ದು, ಅದಕ್ಕೆ ಎಲ್‌ಸಿಎ ತೇಜಸ್ (LCA Tejas) ಎಂಕೆ 1ಎ ಸೂಕ್ತ ಆಯ್ಕೆಯಾಗಿ ತೋರುತ್ತಿದೆ. ಮಲೇಷ್ಯಾದ ನಿಯೋಗ ಎಚ್ಎಎಲ್ ಜೊತೆ ಏರೋ ಇಂಡಿಯಾ ಪ್ರದರ್ಶನದ ಸಂದರ್ಭದಲ್ಲಿ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
ಎಚ್ಎಎಲ್ ಎಲ್‌ಸಿಎ ತೇಜಸ್ ಎಂಕೆ 1ಎ ಸಂಪೂರ್ಣ ದೇಶೀಯವಾಗಿ ಭಾರತದಲ್ಲೇ ಅಭಿವೃದ್ಧಿ ಹೊಂದಿರುವ ಯುದ್ಧ ವಿಮಾನವಾಗಿದ್ದು, ದೇಶಕ್ಕೆ ಹೆಮ್ಮೆ ತರುವಂತಹ ವಿಮಾನವಾಗಿದೆ. ಅರ್ಜೆಂಟೀನಾ ಮತ್ತು ಮಲೇಷ್ಯಾಗಳು ಇದರ ಖರೀದಿಗೆ ಆಸಕ್ತಿ ತೋರಿಸಿರುವುದು ಪ್ರಮುಖ ಆಯುಧ ರಫ್ತುದಾರ ರಾಷ್ಟ್ರವಾಗಿ ಭಾರತದ ಸ್ಥಾನವನ್ನು ಭದ್ರಪಡಿಸಲು ನೆರವಾಗಲಿದೆ.
ಒಂದು ವೇಳೆ ಅರ್ಜೆಂಟೀನಾ ಮತ್ತು ಮಲೇಷ್ಯಾಗಳು ಎಲ್‌ಸಿಎ ತೇಜಸ್ ಎಂಕೆ 1ಎ ಖರೀದಿಗೆ ಆದೇಶ ಸಲ್ಲಿಸಿದರೆ, ಅದು ಭಾರತೀಯ ಏರೋಸ್ಪೇಸ್ ಉದ್ಯಮಕ್ಕೆ (Indian Aerospace industry) ಪ್ರಮುಖ ಉತ್ತೇಜನ ನೀಡಲಿದೆ. ಅದರೊಡನೆ ಭಾರತದ ದೇಶೀಯ ನಿರ್ಮಾಣದ ಯುದ್ಧ ವಿಮಾನದ ಸಾಮರ್ಥ್ಯವನ್ನು ಸಾಬೀತುಪಡಿಸಲಿದೆ. ಈ ಬೆಳವಣಿಗೆಯನ್ನು ವೈಮಾನಿಕ ವಲಯ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಎಚ್ಎಎಲ್ ಎಲ್‌ಸಿಎ ತೇಜಸ್ ಎಂಕೆ 1ಎಗೆ ಇನ್ನಷ್ಟು ಖರೀದಿ ಆದೇಶ ಬರುವಂತಾಗುವ ಸಾಧ್ಯತೆಗಳಿವೆ.
ಬೆಂಗಳೂರು ಏರ್ ಶೋನಲ್ಲಿ ಏನೇನು ನೋಡಬಹುದು?
ವ್ಯಾಪ್ತಿ ವಿಸ್ತರಣೆ
ಆವೃತ್ತಿಯಿಂದ ಆವೃತ್ತಿಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವ ಏರೋ ಇಂಡಿಯಾ ಈ ಬಾರಿಯೂ ತನ್ನ ಪ್ರದರ್ಶನ ವ್ಯಾಪ್ತಿಯನ್ನು ಶೇ.35ರಷ್ಟು ವಿಸ್ತಾರಗೊಳಿಸಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ (Investment) ಬರುವ ನಿರೀಕ್ಷೆಯಿದ್ದು, ಪ್ರಸ್ತುತ ಖಚಿತಪಟ್ಟಿರುವ ಒಡಂಬಡಿಕೆಗಳ ಮೂಲಕವೇ 75 ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. 2021ರಲ್ಲಿ ನಡೆದ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದಲ್ಲಿ (Aero show) 600 ಮಂದಿ ಪ್ರದರ್ಶಕರು ಭಾಗವಹಿಸಿದ್ದರು. ಈ ಸಂಖ್ಯೆ ಪ್ರಸಕ್ತ ವೈಮಾನಿಕ ಪ್ರದರ್ಶನದಲ್ಲಿ 809ಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ 55 ದೇಶಗಳು ಮಾತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದು, ಪ್ರಸ್ತುತ 98 ದೇಶಗಳು ತಮ್ಮ ಭಾಗವಹಿಸುವಿಕೆ ಖಚಿತಪಡಿಸಿವೆ. ಒಟ್ಟು 251 ಒಡಂಬಡಿಕೆ ಸಿದ್ಧಗೊಂಡಿದ್ದು, ಕಳೆದ ವರ್ಷ 23 ಸಾವಿರ ಚದರ ಮೀಟರ್ ವ್ಯಾಪ್ತಿಗೆ ಸೀಮಿತವಾಗಿದ್ದ ಪ್ರದರ್ಶನ ವ್ಯವಸ್ಥೆಯು ಈ ಬಾರಿ 35,000 ಚದರ ಮೀಟರ್ ವ್ಯಾಪ್ತಿಗೆ ವಿಸ್ತರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ