ಪ್ರತಿ ವರ್ಷ ಹೋಳಿ ಹಬ್ಬವು ಬಣ್ಣಗಳ ಸಂಭ್ರಮವನ್ನು ಹೊತ್ತು ತರುತ್ತದೆ. ಆದರೆ ಈ ಬಾರಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ 'ಹೋಳಿ ಮಿಲನ' ಕಾರ್ಯಕ್ರಮವು ಬಣ್ಣಗಳಿಗಿಂತ ಹೆಚ್ಚಾಗಿ ವಿವಾದ ಮತ್ತು ಚರ್ಚೆಗಳಿಂದ ಸುದ್ದಿಯಲ್ಲಿದೆ. ಕಾನ್ಪುರ ಬಾರ್ ಅಸೋಸಿಯೇಷನ್ (Kanpur Bar Association) ಆಯೋಜಿಸಿದ್ದ ಈ ಕಾರ್ಯಕ್ರಮದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ.
ಕಾನ್ಪುರ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಲಾನ್‌ನಲ್ಲಿ ಮುಂಬರುವ ವಕೀಲರ ಸಂಘದ ಚುನಾವಣೆಯ ಬಿಸಿಯ ನಡುವೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರಂಭದಲ್ಲಿ ಹೂವುಗಳ ಹೋಳಿ ಆಚರಿಸಿದ ವಕೀಲರು, ನಂತರ ಮನರಂಜನೆಗಾಗಿ ವೃತ್ತಿಪರ ಬೆಲ್ಲಿ ಡ್ಯಾನ್ಸರ್‌ಗಳನ್ನು (Belly Dancers) ವೇದಿಕೆಗೆ ಕರೆಸಿದ್ದರು. ಭೋಜಪುರಿ ಮತ್ತು ಬಾಲಿವುಡ್‌ನ ಜನಪ್ರಿಯ ಹಾಡುಗಳಿಗೆ ನರ್ತಕಿಯರು ಹೆಜ್ಜೆ ಹಾಕುತ್ತಿದ್ದಂತೆ, ಅಲ್ಲಿದ್ದ ವಕೀಲರು ಸಹ ಉತ್ಸಾಹದಿಂದ ಅವರ ಜೊತೆಗೂಡಿ ಕುಣಿದು ಸಂಭ್ರಮಿಸಿದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್ ಲೋಕದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.. "ವಕೀಲರ ಕೆಲಸ ಅಂದ್ರೆ ಬರೀ ಟೆನ್ಷನ್. ದಿನವಿಡೀ ಕೋರ್ಟ್ ಕಲಾಪ, ಕ್ಲೈಂಟ್‌ಗಳ ಕಿರಿಕಿರಿ ನಡುವೆ ಇರುವ ಅವರಿಗೆ ವರ್ಷಕ್ಕೊಮ್ಮೆ ಈ ರೀತಿ ಎಂಜಾಯ್ ಮಾಡುವ ಹಕ್ಕಿದೆ. ಇದರಲ್ಲಿ ತಪ್ಪೇನಿದೆ?", "ಕಪ್ಪು ಕೋಟ್ ಹಾಕಿದ ಮಾತ್ರಕ್ಕೆ ಅವರು ಮನುಷ್ಯರಲ್ಲವೇ? ಹಬ್ಬದ ದಿನ ಎಲ್ಲರೂ ತಮ್ಮ ಕೆಲಸ ಮರೆತು ಖುಷಿಪಡುತ್ತಾರೆ. ಇದನ್ನು ಸಂಕುಚಿತ ಮನೋಭಾವದಿಂದ ನೋಡಬಾರದು"
"ಇದು ಬಾರ್ ಅಸೋಸಿಯೇಷನ್‌ನ ಸದಸ್ಯರಿಗಾಗಿ ಮಾಡಿದ ಕಾರ್ಯಕ್ರಮ. ಅವರು ತಮ್ಮವರ ಜೊತೆ ಮೋಜು ಮಾಡಿದ್ದಾರೆ, ಇದರಲ್ಲಿ ಅಶ್ಲೀಲತೆ ಏನೂ ಇಲ್ಲ" ಎಂದು ಕೆಲವರು ಅಭಿಪ್ರಾಯಪಟ್ಟರೆ, ಮತ್ತೆ ಕೆಲವರು "ನ್ಯಾಯದೇವತೆಯ ಮಂದಿರದ ಆವರಣದಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿಸುವುದು ವೃತ್ತಿ ಮರ್ಯಾದೆಗೆ ತಕ್ಕುದಲ್ಲ. ಹೊರಗೆ ಎಲ್ಲಾದರೂ ಮಾಡಿಕೊಳ್ಳಬಹುದಿತ್ತು" ಎಂದು ಹಿರಿಯ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ತಮಾಷೆಯ ಕಾಮೆಂಟ್ಸ್ ಕೂಡ ಬಂದಿದ್ದು, "ಜಡ್ಜ್ ಸಾಹೇಬರು ಈ ಡ್ಯಾನ್ಸ್ ನೋಡಿದರೆ ತೀರ್ಪು ಬದಲಾಗಬಹುದು!", "ಕೋರ್ಟ್ ಅಂದ್ರೆ ಬರೀ ವಾದ ಅಂದುಕೊಂಡಿದ್ದೆವು, ಇಲ್ಲಿ ಡ್ಯಾನ್ಸ್ ಕೂಡ ಸೂಪರ್ ಆಗಿದೆ" ಎಂಬಂತಹ ಫನ್ನಿ ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಹಾಗೆಯೇ "ಕಾನೂನು ಪಾಲಿಸಬೇಕಾದವರೇ ಈ ರೀತಿ ವರ್ತಿಸಿದರೆ ಸಾಮಾನ್ಯ ಜನರ ಕಥೆ ಏನು?" ಎಂದು ಕೆಲವರು ಗಂಭೀರವಾಗಿ ಪ್ರಶ್ನಿಸಿದ್ದಾರೆ.
ಕಾನ್ಪುರದವರೇ ಹೀಗೆ..
ಓರ್ವ ಬಳಕೆದಾರರು "ಕಾನ್ಪುರದ ಜನರು ಏನು ಬೇಕಾದರೂ ಮಾಡಬಹುದು, ಇದು ನಿಜಕ್ಕೂ ಅದ್ಭುತವಾಗಿದೆ!" ಎಂದರೆ, ಉತ್ತರ ಪ್ರದೇಶದ ಒಬ್ಬ ವ್ಯಕ್ತಿ ಹೆಮ್ಮೆಯಿಂದ ಹೀಗೆ ಕಾಮೆಂಟ್ ಮಾಡಿದ್ದಾರೆ.. "ಸಹೋದರ, ನಾವು ಉತ್ತರ ಪ್ರದೇಶದ ಜನರು ಯಾವುದೇ ಹಬ್ಬವಿದ್ದರೂ ಅದನ್ನು ಹೀಗೆಯೇ ಆಚರಿಸುತ್ತೇವೆ. ನಮಗೆ ಆನಂದಿಸುವುದು ಗೊತ್ತು; ಏಕೆಂದರೆ ಜೀವನವು ತುಂಬಾ ಚಿಕ್ಕದಾಗಿದೆ, ಇರುವಷ್ಟು ದಿನ ಖುಷಿಯಾಗಿರಬೇಕು!" ಎಂದ್ದಾರೆ.
ಯಾವುದೇ ಘಟನೆಗೆ ಎರಡು ಮುಖಗಳಿರುವಂತೆ, ಕಾನ್ಪುರದ ಈ ಹೋಲಿ ಆಚರಣೆಯೂ ಜನರ ಗಮನ ಸೆಳೆದಿದೆ. ಒಂದು ವರ್ಗದ ಜನರು ಇದನ್ನು "ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮನರಂಜನೆ" ಎನ್ನುತ್ತಿದ್ದರೆ, ಇನ್ನೊಂದು ವರ್ಗ "ವೃತ್ತಿಯ ಮರ್ಯಾದೆ ಮತ್ತು ಸ್ಥಳದ ಪವಿತ್ರತೆ" ಎಂದು ವಾದಿಸುತ್ತಿದ್ದಾರೆ. ಏನೇ ಇರಲಿ, ಈ ಬೆಲ್ಲಿ ಡ್ಯಾನ್ಸ್ ವಿಡಿಯೋ ಮಾತ್ರ ಸದ್ಯಕ್ಕೆ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ