ಹೈದರಾಬಾದ್ (ಜೂ.04):ಕೋವಿಡ್ ಸೋಂಕು ತಗುಲಿ ಮೃತಪಟ್ಟ ವಯೋವೃದ್ಧೆಯ ಅಂತ್ಯಸಂಸ್ಕಾರ ನಡೆಸಿದ 18 ದಿನಗಳ ಬಳಿಕ ವಯೋವೃದ್ಧೆ ಪ್ರತ್ಯಕ್ಷಳಾಗಿರುವ ಅಚ್ಚರಿಯ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಜಗ್ಗಯ್ಯ ಪೇಟಾ ನಗರದಲ್ಲಿ ನಡೆದಿದೆ.
75 ವರ್ಷದ ಗಿರಿಜಮ್ಮ ಎಂಬವರು ಕೋವಿಡ್ ಸೋಂಕಿಗೆ ತುತ್ತಾಗಿ ವಿಜಯವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಮೂರು ದಿನಗಳ ಬಳಿಕ, ಮೇ 15ರಂದು ಪತಿ ಮುತ್ಯಾಲಾ ಗಡ್ಡಯ್ಯ ಪತ್ನಿಗಾಗಿ ಕೋವಿಡ್ ವಾರ್ಡ್‌ನಲ್ಲಿ ಹುಡುಕಾಟ ನಡೆಸಿದಾಗ ಗಿರಿಜಮ್ಮ ನಾಪತ್ತೆಯಾಗಿದ್ದರು. ಅಂತಿಮವಾಗಿ ಶವಗಾರಕ್ಕೆ ಹೋಗಿ ನೋಡಿದರೆ ಅದೇ ಅಜ್ಜಿ ಹೋಲುವ ಶವ ಪತ್ತೆಯಾಗಿತ್ತು. ಕುಟುಂಬಸ್ಥರು ಆ ಶವ ಪಡೆದು ಅಂತ್ಯಕ್ರಿಯೆ ನೇರವೇರಿಸಿದ್ದರು. ಈ ನಡುವೆ ಅಜ್ಜಿಯ ಮಗ ರಮೇಶ ಕೂಡ ಸೋಂಕಿಗೆ ಬಲಿಯಾಗಿದ್ದ.
ಕೋಡಿಮಠದ ಶ್ರೀಗಳಿಂದ ಸ್ಫೋಟಕ ಭವಿಷ್ಯ : ಕೊರೋನಾ ಕೊನೆಯಾಗುತ್ತಾ-ಮತ್ತೇನು ಕಾದಿದೆ ಜಗಕೆ..?
ಈ ಮಧ್ಯೆ ಆಸ್ಪತ್ರೆಯಲ್ಲೇ ಕೋವಿಡ್ ಚೇತರಿಸಿಕೊಂಡ ಗಿರಿಜಮ್ಮ ಎಷ್ಟುದಿನವಾದರೂ ಮನೆಯವರು ಬರದಿದ್ದಾಗ ಜೂ.1ರಂದು ತಾವೇ ಮನೆಗೆ ಬಂದಿದ್ದಾರೆ. ಬಳಿಕ ಆಸ್ಪತ್ರೆ ಯಡವಟ್ಟಿಂದಾಗಿ ಕುಟುಂಬಸ್ಥರು ಬೇರೊಂದು ಕುಟುಂಬದ ಶವಕ್ಕೆ ಅಂತ್ಯಸಂಸ್ಕಾರ ನಡೆಸಿದ್ದ ವಿಷಯ ಬಹಿರಂಗವಾಗಿದೆ.